
ಪಾಕಿಸ್ತಾನದಲ್ಲಿ ಜನಪ್ರಿಯತೆ ಪಡೆದಿರುವ ‘ಡರ್-ಎ-ನಿಜಾತ್’ ವೆಬ್ ಸರಣಿಯ ಎರಡು ಪ್ರದರ್ಶನಗಳನ್ನು (ವಾಚ್ ಪಾರ್ಟಿ) ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ಎದುರಾದ ಬಳಿಕ ಎರಡೂ ಶೋಗಳನ್ನು ಆಯೋಜಕರೇ ರದ್ದು ಮಾಡಿದ್ದಾರೆ. ಬೆಂಗಳೂರು ಪೊಲೀಸರು ಹೇಳಿರುವಂತೆ ಎರಡೂ ಶೋಗಳನ್ನು ಪ್ರದರ್ಶಿಸಲು ಆಯೋಜಕರು ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ.
ಬೆಂಗಳೂರು ನಗರದ ಎರಡು ಸ್ಥಳಗಳಲ್ಲಿ ನವೆಂಬರ್ 28 ಮತ್ತು ಡಿಸೆಂಬರ್ 5 ರಂದು ‘ಡರ್-ಎ-ನಿಜಾತ್’ ವೆಬ್ ಸರಣಿಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಟಿಕೆಟ್ಗಳನ್ನು ಸಹ ಆನ್ಲೈನ್ನಲ್ಲಿ ಆಯೋಜಕರು ಮಾರಾಟ ಮಾಡಿದ್ದರು. ಈ ಪ್ರದರ್ಶನಗಳ ಕುರಿತ ಪ್ರಕಟಣೆಗಳು ಆನ್ಲೈನ್ನಲ್ಲಿ ಹರಿದಾಡತೊಡಗಿದಾಗ ವಿವಾದ ಭುಗಿಲೆದ್ದಿತು. ಹಲವು ನೆಟ್ಟಿಗರು ಈ ಕುರಿತಾಗಿ ಆಕ್ರೋಶ ಹೊರಹಾಕಿದ್ದಲ್ಲದೆ, ಪೊಲೀಸರು ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದರು.
ಶೋನ ಮೊದಲ ಪ್ರದರ್ಶನವನ್ನು ನವೆಂಬರ್ 28 ರಂದು ಫ್ರೇಜರ್ ಟೌನ್ನ ‘ಶೀಶ್ ಕಬಾಬ್’ ನಲ್ಲಿ ಆಯೋಜಿಸಲಾಗಿತ್ತು. ಪರ್ಷಿಯನ್-ಅರೇಬಿಕ್ ಭೋಜನದ ವ್ಯವಸ್ಥೆಯೊಂದಿಗೆ ಈ ವಾಚ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಇದರ ಪ್ರವೇಶ ಶುಲ್ಕವಾಗಿ ಪ್ರತಿಯೊಬ್ಬರಿಂದ ₹1,999 ಪಡೆದುಕೊಳ್ಳಲಾಗುತ್ತಿತ್ತು. ಮತ್ತೊಂದು ಪ್ರದರ್ಶನವನ್ನು ಡಿಸೆಂಬರ್ 5 ರಂದು ಬೆಂಗಳೂರಿನ ‘ಮೋವಿ ಪ್ರೈವೇಟ್ ಥಿಯೇಟರ್’ ನಲ್ಲಿ ಆಯೋಜಿಸಲು ಯೋಜಿಸಲಾಗಿತ್ತು. ಆಯೋಜಕರು ಹೊರಡಿಸಿದ್ದ ಪ್ರಕಟಣೆಯಲ್ಲಿ ‘ಪಾಕಿಸ್ತಾನಿ ಉಡುಪುಗಳನ್ನು’ ಡ್ರೆಸ್ ಕೋಡ್ ಆಗಿ ಧರಿಸಿ ಬರುವಂತೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ:ವೆಬ್ ಸರಣಿ ಆಗುತ್ತಿದೆ ಉತ್ತರಾಖಂಡದ ರೋಚಕ ರಕ್ಷಣಾ ಕಾರ್ಯಾಚರಣೆ
ಪಾಕಿಸ್ತಾನದ ಸಿನಿಮಾ, ವೆಬ್ ಸರಣಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಒಟಿಟಿಗಳಲ್ಲಿಯೂ ಸಹ ಪಾಕಿಸ್ತಾನದ ಸಿನಿಮಾ ಅಥವಾ ವೆಬ್ ಸರಣಿಗಳನ್ನು ಪ್ರದರ್ಶಿಸುವಂತಿಲ್ಲ. ಆದರೆ ಇದೀಗ ತೆರೆಮರೆಯಲ್ಲಿ ಖಾಸಗಿ ವಾಚ್ ಪಾರ್ಟಿ ಹೆಸರಲ್ಲಿ ಪಾಕಿಸ್ತಾನಿ ವೆಬ್ ಸರಣಿಯ ಪ್ರದರ್ಶನಕ್ಕೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
‘ಡರ್-ಎ-ನಿಜಾತ್’ ವೆಬ್ ಸರಣಿಯು ಪ್ರೇಮ ಕಥೆಯನ್ನು ಹೊಂದಿದ್ದು, ಸಾಕಿಬ್ ಖಾನ್ ನಿರ್ದೇಶನದ ಈ ವೆಬ್ ಸರಣಿ 23 ಎಪಿಸೋಡ್ಗಳನ್ನು ಒಳಗೊಂಡಿದೆ. ಪಾಕಿಸ್ತಾನ ಸೇರಿದಂತೆ ಬೇರೆ ಕೆಲ ರಾಷ್ಟ್ರಗಳಲ್ಲಿ ಈ ವೆಬ್ ಸರಣಿ ಜನಪ್ರಿಯತೆ ಗಳಿಸಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ