
ಟಾಲಿವುಡ್ ನಟ ಹಾಗೂ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರೊಂದಿಗೆ ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿದ ಬಳಿಕ, ಅವರ 2ನೇ ಮಾಜಿ ಪತ್ನಿ ಹಾಗೂ ನಟಿ ರೇಣು ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾರ್ಮಿಕ ಸಂದೇಶವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ರಷ್ಯನ್ ಮೂಲದ ಅನ್ನಾ ಲೆಜ್ನೆವಾ ಅವರು ತಮ್ಮ 13 ವರ್ಷಗಳ ದಾಂಪತ್ಯ ಜೀವನವನ್ನು ಪರಸ್ಪರ ಸಮ್ಮತಿಯೊಂದಿಗೆ ಕೊನೆಗೊಳಿಸುತ್ತಿರುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ರೇಣು ದೇಸಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾನವೀಯತೆ ಮತ್ತು ಸಹಾನುಭೂತಿಯ ಬಗ್ಗೆ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಯಾರ ಹೆಸರನ್ನೂ ಉಲ್ಲೇಖಿಸದೆ ಪೋಸ್ಟ್ ಮಾಡಿರುವ ರೇಣು ದೇಸಾಯಿ, ‘ಇನ್ನೊಬ್ಬರು ಈಗಾಗಲೇ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಅವರನ್ನು ಮತ್ತಷ್ಟು ಟೀಕಿಸುವುದು ನೈತಿಕವಾಗಿ ಸರಿಯಲ್ಲ. ಈಗಾಗಲೇ ಕುಸಿದು ಬಿದ್ದಿರುವವರನ್ನು ತುಳಿಯುವುದು ಅಮಾನವೀಯ. ಅವರ ಸ್ಥಾನಮಾನ ಏನೇ ಇರಲಿ, ಅವರೂ ಒಬ್ಬ ಮನುಷ್ಯ, ಯಾರದ್ದೋ ಮಗು, ಯಾರದ್ದೋ ಪೋಷಕರು ಅಥವಾ ಸಹೋದರ-ಸಹೋದರಿ ಎಂಬುದನ್ನು ನಾವು ಎಂದಿಗೂ ಮರೆಯಬಾರದು’ ಎಂದು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿರುವ ಅವರು, ‘ನಾವು ಗಾಜಿನ ಮನೆಯಲ್ಲಿ ಕುಳಿತು ಇತರರ ಮನೆಗೆ ಕಲ್ಲು ತೂರುವುದು ಬೇಡ. ನಾವೆಲ್ಲರೂ ಮನುಷ್ಯರು, ಮನುಷ್ಯತ್ವಕ್ಕೆ ಇರಬೇಕಾದ ಮೊದಲ ಮೂಲಭೂತ ಅರ್ಹತೆಯೇ ಸಹಾನುಭೂತಿ ಮತ್ತು ದಯೆ’ ಎಂದಿದ್ದಾರೆ.
ಇದನ್ನೂ ಓದಿ: ಮೂರು ಮದುವೆ ಆಗಿದ್ದೇಕೆ? ಸ್ಪಷ್ಟನೆ ಕೊಟ್ಟಿದ್ದ ಪವನ್ ಕಲ್ಯಾಣ್
ತಮ್ಮ ಪೋಸ್ಟ್‌ನ ಕೊನೆಯಲ್ಲಿ ಅನಗತ್ಯ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿರುವ ರೇಣು, ‘ಈ ಮಾತುಗಳನ್ನು ಬರೆದಿದ್ದೇನೆ ಎಂದ ತಕ್ಷಣ ನಿಮ್ಮ ಮೂರ್ಖತನದ ಊಹಾಪೋಹಗಳನ್ನು ಪ್ರಾರಂಭಿಸಬೇಡಿ. ಸಮಾಜವಾಗಿ ನಾವು ಇನ್ನಷ್ಟು ಉತ್ತಮವಾಗಿ ನಡೆದುಕೊಳ್ಳಬಹುದು ಎಂಬ ಭರವಸೆ ನನಗಿದೆ. ದಯೆ ಮತ್ತು ವಿವೇಚನೆಯಿಂದ ಮಾತನಾಡಲು ನನಗೇನೂ ಹಣ ಸಿಕ್ಕಿಲ್ಲ. ಸರಿ-ತಪ್ಪುಗಳನ್ನು ಸರಿಯಾಗಿ ಯೋಚಿಸುವ ಬುದ್ಧಿ ನನಗಿದೆ ಅಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.