AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ಹಂಚಿಕೊಂಡ ಮೊದಲ ಇನ್​ಸ್ಟಾಗ್ರಾಂ ವಿಡಿಯೋನಲ್ಲಿ ಕನ್ನಡದ ನಾಲ್ಕು ನಟರು

Pawan Kalyan: ನಟ ಪವನ್ ಕಲ್ಯಾಣ್ ಹಂಚಿಕೊಂಡಿರುವ ಮೊದಲ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ನಾಲ್ಕು ಮಂದಿ ಕನ್ನಡದ ನಟರನ್ನು ನೆನಪಿಸಿಕೊಂಡಿದ್ದಾರೆ. ಯಾರವರು?

ಪವನ್ ಕಲ್ಯಾಣ್ ಹಂಚಿಕೊಂಡ ಮೊದಲ ಇನ್​ಸ್ಟಾಗ್ರಾಂ ವಿಡಿಯೋನಲ್ಲಿ ಕನ್ನಡದ ನಾಲ್ಕು ನಟರು
ಪವನ್ ಕಲ್ಯಾಣ್
ಮಂಜುನಾಥ ಸಿ.
|

Updated on: Jul 15, 2023 | 9:28 PM

Share

ನಟ, ರಾಜಕಾರಣಿ ಪವನ್ ಕಲ್ಯಾಣ್ (Pawan Kalyan), ತೆಲುಗು ರಾಜ್ಯಗಳಲ್ಲಿ ಮಾತ್ರವೇ ಅಲ್ಲದೆ ನೆರೆ ಹೊರೆಯ ಹಲವು ರಾಜ್ಯಗಳಲ್ಲಿ ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜಕೀಯದಲ್ಲಿಯೂ ಸಕ್ರಿಯರಾಗಿರುವ ಪವನ್ ಕಲ್ಯಾಣ್, ಇತ್ತೀಚೆಗಷ್ಟೆ ಇನ್​ಸ್ಟಾಗ್ರಾಂನಲ್ಲಿ (Instagram) ತಮ್ಮ ಖಾತೆ ತೆರೆದಿದ್ದರು. ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ ಹತ್ತು ಲಕ್ಷ ಬೆಂಬಲಿಗರನ್ನು ಪಡೆದಿದ್ದ ಪವನ್ ಕಲ್ಯಾಣ್ ಇಂದು ಕೊನೆಗೂ ತಮ್ಮ ಮೊದಲ ಇನ್​ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ನಾಲ್ಕು ಮಂದಿ ಕನ್ನಡದ ನಟರನ್ನೂ ನೆನಪಿಸಿಕೊಂಡಿದ್ದಾರೆ.

ಪವನ್ ಕಲ್ಯಾಣ್, ತಮ್ಮ ಮೊದಲ ಇನ್​ಸ್ಟಾಗ್ರಾಂ ಪೋಸ್ಟ್ ಆಗಿ ಒಂದು ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. ”ಚಿತ್ರರಂಗದ ಭಾಗವಾಗಿರುವುದಕ್ಕೆ ಹಾಗೂ ಅತ್ಯುತ್ತಮ, ಪ್ರತಿಭಾವಂತ ನಟರೊಟ್ಟಿಗೆ ಕೆಲಸ ಮಾಡಿರುವುದಕ್ಕೆ ಸಂತೋಷವಿದೆ” ಎಂಬ ಸವಿಮಾತಿನೊಂದಿಗೆ ಆರಂಭವಾಗುವ ಫೋಟೊಗಳ ಕಲೆಕ್ಷನ್​ವುಳ್ಳ ವಿಡಿಯೋನಲ್ಲಿ ಪವನ್ ಕಲ್ಯಾಣ್ ಈವರೆಗೆ ಕೆಲಸ ಮಾಡಿರುವ ತೆಲುಗು ಚಿತ್ರರಂಗದ ಹಲವು ನಟ, ನಟಿಯರ ಚಿತ್ರಗಳು ಇವೆ. ಅಣ್ಣ ಮೆಗಾಸ್ಟಾರ್ ಚಿರಂಜೀವಿ ಪವನ್​ಗೆ ಮುತ್ತು ಕೊಡುತ್ತಿರುವ ಚಿತ್ರದ ಮೂಲಕ ಆರಂಭವಾಗುವ ವಿಡಿಯೋದ ಮೊದಲಲ್ಲಿಯೇ ತೆಲುಗು ಚಿತ್ರರಂಗದ ಸ್ಟಾರ್​ಗಳಾದ ಬಾಲಕೃಷ್ಣ, ನಾಗಾರ್ಜು, ವೆಂಕಟೇಶ್ ಅವರೊಟ್ಟಿಗಿನ ಪವನ್​ರ ಚಿತ್ರಗಳಿವೆ, ಜೊತೆಗೆ ಬಾಲಿವುಡ್​ನ ಲಿಜೆಂಡ್ ಅಮಿತಾಬ್ ಬಚ್ಚನ್ ಅವರೊಟ್ಟಿಗಿನ ಚಿತ್ರವೂ ಇದೆ.

View this post on Instagram

A post shared by Pawan Kalyan (@pawankalyan)

ವಿಡಿಯೋನ ಆರಂಭದ ಕೆಲವು ಸೆಕೆಂಡ್​ಗಳಲ್ಲಿಯೇ ಪವನ್ ಕಲ್ಯಾಣ್ ಹಾಗೂ ಶಿವರಾಜ್ ಕುಮಾರ್ ಅವರು ಒಟ್ಟಿಗೆ ಕಾರ್ಯಕ್ರಮದಲ್ಲಿ ಕುಳಿತು ಮಾತನಾಡುತ್ತಿರುವ ಚಿತ್ರವನ್ನು ಸೇರಿಸಲಾಗಿದೆ. ಅದಾದ ಬಳಿಕ ಪವನ್ ಕಲ್ಯಾಣ್ ಹಾಗೂ ಸುದೀಪ್ ಅವರು ಒಟ್ಟಿಗೆ ನಿಂತಿರುವ ಚಿತ್ರ ವಿಡಿಯೋನಲ್ಲಿ ಮೂಡಿಬರುತ್ತದೆ. ವಿಡಿಯೋ ಅಂತ್ಯವಾಗುವ ಕೆಲ ಹೊತ್ತಿನ ಮುಂಚೆ ನಟ, ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರೊಟ್ಟಿಗಿನ ಚಿತ್ರವನ್ನು ಸಹ ಪವನ್ ಕಲ್ಯಾಣ್ ತಮ್ಮ ನೆನಪಿನ ವಿಡಿಯೋಕ್ಕೆ ಸೇರಿಸಿದ್ದಾರೆ. ಇನ್ನು ಕನ್ನಡದವರೇ ಆದರೂ ಬಹುಭಾಷಾ ನಟ ಎನಿಸಿಕೊಂಡಿರುವ ಪ್ರಕಾಶ್ ರೈ ಅವರೊಟ್ಟಿಗಿನ ಚಿತ್ರವನ್ನು ಪವನ್ ಕಲ್ಯಾಣ್ ವಿಡಿಯೋನಲ್ಲಿ ಸೇರಿಸಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್ ವಿರುದ್ಧ ಪ್ರತಿಭಟನೆ, ಮಹಿಳಾ ಆಯೋಗದಿಂದ ನೊಟೀಸ್: ಆ ಹೇಳಿಕೆಯಿಂದಲೇ ಸಮಸ್ಯೆ

ಕನ್ನಡ ಮಾತ್ರವೇ ಅಲ್ಲದೆ ವಿಡಿಯೋದ ಕೊನೆಯಲ್ಲಿ ತಮಿಳಿನ ಕೆಲವು ಸ್ಟಾರ್ ನಟರೊಟ್ಟಿಗಿನ ತಮ್ಮ ಚಿತ್ರವನ್ನು ಸಹ ಪವನ್ ಕಲ್ಯಾಣ್ ಹಂಚಿಕೊಂಡಿದ್ದಾರೆ. ತೆಲುಗಿನ ಹಲವಾರು ನಟ, ನಿರ್ದೇಶಕ, ನಿರ್ಮಾಪಕರೊಟ್ಟಿಗಿನ ಚಿತ್ರಗಳನ್ನು ಪವನ್ ಕಲ್ಯಾಣ್ ಹಂಚಿಕೊಂಡಿದ್ದಾರೆ. ಹಾಸ್ಯನಟರು, ಪೋಷಕ ನಟರೊಟ್ಟಿಗಿನ ಚಿತ್ರಗಳನ್ನೂ ಸೇರಿಸಿದ್ದಾರೆ. ನಾಯಕಿಯರೊಟ್ಟಿಗಿನ ಚಿತ್ರಗಳನ್ನೂ ಸಹ ಪವನ್ ಕಲ್ಯಾಣ್ ವಿಡಿಯೋಕ್ಕೆ ಸೇರಿಸಿದ್ದಾರೆ.

”ನಮ್ಮ ಬಂಧ ಹೀಗೆಯೇ ಮುಂದುವರೆಯುತ್ತಿರಲಿ, ಇಂಥಹಾ ಇನ್ನೂ ಹಲವು ನೆನಪುಗಳನ್ನು ನಾವು ಸೃಷ್ಟಿಸಿಕೊಳ್ಳೋಣ” ಎಂಬ ಸಾಲುಗಳೊಂದಿಗೆ ವಿಡಿಯೊ ಅಂತ್ಯವಾಗಿದೆ. ಇದು ಪವನ್ ಕಲ್ಯಾಣ್​ರ ಮೊದಲ ಇನ್​ಸ್ಟಾಗ್ರಾಂ ಪೋಸ್ಟ್ ಆಗಿದ್ದು, ವಿಡಿಯೋ ಹಂಚಿಕೊಂಡ ಕೇವಲ ಮೂರು ಗಂಟೆಯಲ್ಲಿ ಸುಮಾರು 6.70 ಲಕ್ಷ ಜನ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ