AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ಹೊಸ ಸಿನಿಮಾಕ್ಕೆ ಸಂಕಷ್ಟ: ಬಿಡುಗಡೆ ತಡೆಯುತ್ತೇವೆಂದು ಸವಾಲು

Pawan Kalyan: ಪವನ್ ಕಲ್ಯಾಣ್​ರ ರಾಜಕೀಯ ಹೇಳಿಕೆಯೊಂದರಿಂದ ಅವರ ಸಿನಿಮಾಕ್ಕೆ ಸಮಸ್ಯೆ ಆಗುತ್ತಿದೆ. ಆಂಧ್ರದಲ್ಲಿ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುತ್ತೇವೆಂದು ಬಹಿರಂಗ ಸವಾಲು ಹಾಕಲಾಗಿದೆ.

ಪವನ್ ಕಲ್ಯಾಣ್ ಹೊಸ ಸಿನಿಮಾಕ್ಕೆ ಸಂಕಷ್ಟ: ಬಿಡುಗಡೆ ತಡೆಯುತ್ತೇವೆಂದು ಸವಾಲು
ಪವನ್-ಬ್ರೋ
ಮಂಜುನಾಥ ಸಿ.
|

Updated on: Jul 15, 2023 | 9:02 PM

Share

ಆಂಧ್ರ ಪ್ರದೇಶ (Andhra Pradesh) ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕೆಂಬ ಪಣ ತೊಟ್ಟಿರುವ ಪವನ್ ಕಲ್ಯಾಣ್, ವಾರಾಹಿ ಯಾತ್ರೆ ನಡೆಸುತ್ತಿದ್ದು, ಯಾತ್ರೆಯ ಮೊದಲ ಹಂತ ಯಶಸ್ವಿಯಾಗಿದ್ದು ಇದೀಗ ಎರಡನೇ ಹಂತ ಚಾಲ್ತಿಯಲ್ಲಿದೆ. ವಾರಾಹಿ ಯಾತ್ರೆ ಪ್ರಾರಂಭಿಸುವ ಮುನ್ನವೇ ಕೆಲವು ಸಿನಿಮಾಗಳಲ್ಲಿ ನಟಿಸಿ ಬಂದಿದ್ದಾರೆ ಪವನ್ ಕಲ್ಯಾಣ್ (Pawan Kalyan). ಆದರೆ ಅವರು ರಾಜಕೀಯದ ಪ್ರಭಾವ ಸಿನಿಮಾಗಳ ಮೇಲಾಗುತ್ತಿದೆ.

ಬ್ರೋ, ಉಸ್ತಾದ್ ಭಗತ್​ಸಿಂಗ್ ಹಾಗೂ ‘ಹರಿಹರ ವೀರ ಮಲ್ಲು’ ಹೆಸರಿನ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ಈಗಾಗಲೇ ನಟಿಸಿದ್ದಾರೆ. ಅದರಲ್ಲಿ ಬ್ರೋ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಇದೀಗ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ಪವನ್ ಕಲ್ಯಾಣ್​ರ ‘ಬ್ರೋ’ ಸಿನಿಮಾವನ್ನು ಆಂಧ್ರ ಪ್ರದೇಶದಲ್ಲಿ ಬಿಡುಗಡೆ ಆಗಲು ಬಿಡುವುದಿಲ್ಲ ಎಂದು ಕೆಲವರು ಬೆದರಿಕೆ ಹಾಕಿದ್ದಾರೆ.

ವಾರಾಹಿ ಯಾತ್ರೆಯಲ್ಲಿ ಇತ್ತೀಚೆಗೆ ಆಂಧ್ರ ಆಡಳಿತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಸರ್ಕಾರದ ಗ್ರಾಮ ಸ್ವಯಂ ಸೇವಕ ವ್ಯವಸ್ಥೆ ಬಗ್ಗೆ ಪವನ್ ಟೀಕೆ ಮಾಡಿದ್ದರು. ಸಂಬಳ ಪಡೆಯುವವರು ಸ್ವಯಂ ಸೇವಕರು ಹೇಗಾಗುತ್ತಾರೆ? ಸ್ವಯಂ ಸೇವಕರಾಗಿರುವವರಿಗೆ ಜನಗಳ ಆಧಾರ್, ಮೊಬೈಲ್ ನಂಬರ್, ಕುಟುಂಬ ಮಾಹಿತಿ, ಮಕ್ಕಳ ಮಾಹಿತಿಗಳಂಥಹಾ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸುವ ಹಕ್ಕು ಇಲ್ಲ. ಆದರೆ ಸಿಎಂ ಜಗನ್, ಸ್ವಯಂ ಸೇವಕರನ್ನು ಇಟ್ಟುಕೊಂಡು ರಾಜ್ಯದ ಎಲ್ಲ ಜನರ ಮಾಹಿತಿ ಸಂಗ್ರಹಿಸಿ ಅದನ್ನು ವಿದೇಶಿ ಸಂಸ್ಥೆಗಳಿಗೆ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಪವನ್ ಕಲ್ಯಾಣ್ ವಿರುದ್ಧ ಪ್ರತಿಭಟನೆ, ಮಹಿಳಾ ಆಯೋಗದಿಂದ ನೊಟೀಸ್: ಆ ಹೇಳಿಕೆಯಿಂದಲೇ ಸಮಸ್ಯೆ

ಆಂಧ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಗ್ರಾಮದಲ್ಲಿನ ಒಂಟಿ ಮಹಿಳೆಯರ ಮಾಹಿತಿ ಸಂಗ್ರಹಿಸಿ ಅದನ್ನು ಹಂಚಿಕೊಂಡಿರುವ ಕಾರಣದಿಂದಲೇ ಈ ಮಾನವ ಕಳ್ಳಸಾಗಣೆ ನಡೆದಿದೆ. ಈ ಮಾನವ ಕಳ್ಳಸಾಗಣೆಗೆ ಗ್ರಾಮ ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜರಿದಿದ್ದ ಪವನ್ ಕಲ್ಯಾಣ್, ರಾಜ್ಯದಲ್ಲಿ ಯಾರಿಗೇ ಆಗಲಿ ಗ್ರಾಮ ಸ್ವಯಂ ಸೇವಕರಿಂದ ಸಮಸ್ಯೆ ಆಗಿದ್ದರೆ ನಮ್ಮ ಬಳಿ ಬನ್ನಿ ನಾವು ಸಹಾಯ ಮಾಡುತ್ತೇವೆ ಎಂದಿದ್ದರು.

ಪವನ್​ರ ಈ ಹೇಳಿಕೆಯ ವಿರುದ್ಧ ಆಂಧ್ರ ಪ್ರದೇಶದ ಗ್ರಾಮ ಸ್ವಯಂ ಸೇವಕರು ವಿರೋಧ ವ್ಯಕ್ತಪಡಸಿದ್ದಲ್ಲದೆ ಪ್ರತಿಭಟನೆಯನ್ನೂ ಮಾಡಿದ್ದರು. ಇದೀಗ ಪವನ್​ರ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುವುದಾಗಿಯೂ ಗ್ರಾಮ ಸ್ವಯಂ ಸೇವಕರ ಸಂಘಟನೆ ಹೇಳಿಕೊಂಡಿದೆ. ಜುಲೈ 28ರಂದು ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ನಟನೆಯ ‘ಬ್ರೋ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾವನ್ನು ಆಂಧ್ರದಲ್ಲಿ ಬಿಡುಗಡೆ ಮಾಡದಂತೆ ತಡೆಯುತ್ತೇವೆ ಎಂದು ಗ್ರಾಮ ಸ್ವಯಂ ಸೇವಕರ ಸಂಘದವರು ಅಬ್ಬರಿಸಿದ್ದಾರೆ.

ಆಂಧ್ರದಲ್ಲಿ ಪವನ್ ಸಿನಿಮಾಕ್ಕೆ ಸಮಸ್ಯೆ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ಪವನ್, ಸಿಎಂ ಜಗನ್ ಅನ್ನು ಟೀಕಿಸಲು ಶುರು ಮಾಡಿದಾಗಿನಿಂದಲೂ ಅವರ ಸಿನಿಮಾಗಳಿಗೆ ಸಮಸ್ಯೆ ಆಗುತ್ತಲೇ ಇದೆ. ‘ವಕೀಲ್ ಸಾಬ್’ ಸಿನಿಮಾಕ್ಕೆ ತೀವ್ರ ಸಮಸ್ಯೆಯಾಗಿತ್ತು, ಬಳಿಕ ಭೀಮ್ಲಾ ನಾಯಕ್ ಸಿನಿಮಾ ಬಿಡುಗಡೆ ಸಮಯದಲ್ಲಿಯೂ ಅಧಿಕಾರಿಗಳಿಂದ ಸಮಸ್ಯೆಗಳಾಗಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ