ಎನ್ಟಿಆರ್ ಅಭಿಮಾನಿಗಳಿಂದ ಹೊಡೆತ ತಿಂದಿದ್ದ ಹಿರಿಯ ನಟ, ಇದಕ್ಕೆಲ್ಲ ಕಾರಣ ಮಹೇಶ್ ಬಾಬು ತಂದೆ
NTR-Krishna: ಮಹೇಶ್ ಬಾಬು ತಂದೆ, ಸೂಪರ್ ಸ್ಟಾರ್ ಕೃಷ್ಣ ಮಾತು ಕೇಳಿ ಎನ್ಟಿಆರ್ ಅಭಿಮಾನಿಗಳಿಂದ ಹೀನಾ-ಮಾನ ಏಟು ತಿಂದಿದ್ದರು ಹಿರಿಯ ನಟ ಶ್ರೀನಿವಾಸ್ ರಾವ್.
ತೆಲುಗು ಚಿತ್ರರಂಗದಲ್ಲಿ (Tollywood) ಸ್ಟಾರ್ ನಟರ (Star Actor) ಅಭಿಮಾನಿಗಳ ನಡುವೆ ಕಿತ್ತಾಟ ಸಾಮಾನ್ಯ. ಅಭಿಮಾನಿಗಳ ನಡುವೆ ಮಾತ್ರವಲ್ಲ ಅಲ್ಲಿ ನಟರ ನಡುವೆಯೂ ಪರಸ್ಪರ ವೈಷಮ್ಯವಿತ್ತು. ತೀರ ಇತ್ತೀಚೆಗೆ ವೈಷಮ್ಯ ತುಸು ಕಡಿಮೆ ಆದಂತೆ ಕಾಣುತ್ತಿದೆಯಾದರೂ ದಶಕಗಳಿಂದಲೂ ಸಹ ಸ್ಟಾರ್ ನಟರ ನಡುವೆ ವೈಮನಸ್ಯ ತೀರ ಸಾಮಾನ್ಯ ಎಂಬಂತಾಗಿತ್ತು, ಬಹಿರಂಗವಾಗಿಯೇ ಒಬ್ಬರ ವಿರುದ್ಧ ಒಬ್ಬರು ಮಾತನಾಡಿದ ಉದಾಹರಣೆಗಳೂ ಇವೆ. ಯಾವ ಮಟ್ಟಿಗಿನ ವೈಷಮ್ಯವೆಂದರೆ ವಿರೋಧಿ ನಟನ ನಿಂದಿಸಿ ಸಿನಿಮಾಗಳನ್ನೇ ನಿರ್ಮಾಣ ಮಾಡಿದ್ದೂ ಇದೆ. ಆದರೆ ಇದರಿಂದಾಗಿ ತೊಂದರೆಗೆ ಸಿಲುಕುತ್ತಿದ್ದಿದ್ದು ಮಾತ್ರ ಸಣ್ಣ ನಟರು.
ತೆಲುಗು ಚಿತ್ರರಂಗದ ದಂತಕತೆ ಎನ್ಟಿಆರ್ (NTR) ಹಾಗೂ ತೆಲುಗಿನ ಸೂಪರ್ ಸ್ಟಾರ್ ಕೃಷ್ಣ (Super Star Krishna) (ಮಹೇಶ್ ಬಾಬು ತಂದೆ) ನಡುವೆ ಬಹಳ ವೈಷಮ್ಯವಿತ್ತು. ಕೆಲವು ಪೌರಾಣಿಕ ಸಿನಿಮಾಗಳಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರಾದರೂ ಇಬ್ಬರ ನಡುವೆ ವೃತ್ತಿ ಮತ್ಸರ ಹಾಗೂ ರಾಜಕೀಯ ವಿರೋಧವೂ ಇತ್ತು. ಮಹೇಶ್ ಬಾಬು ತಂದೆ ಕೃಷ್ಣ ಕಾಂಗ್ರೆಸ್ನ ನಾಯಕರಾಗಿದ್ದರೆ, ಎನ್ಟಿಆರ್ ಕಾಂಗ್ರೆಸ್ ಅನ್ನು ವಿರೋಧಿಸಿ ಸ್ವಂತ ಪಕ್ಷ ಕಟ್ಟಿ ಸಿಎಂ ಆದವರು.
ಎನ್ಟಿಆರ್ ಸಿಎಂ ಆಗಿದ್ದಾಗಲೇ ಒಮ್ಮೆ ಕೃಷ್ಣ, ಎನ್ಟಿಆರ್ ವಿರುದ್ಧ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದರು. ಸಿನಿಮಾದ ಹೆಸರು ‘ಮಂದಲದೀಶುಡು’ ಎಂದು. ಸಿನಿಮಾದಲ್ಲಿ ನಟನೊಬ್ಬ ರಾಜಕೀಯಕ್ಕೆ ಹೋಗಿ, ಅಸಾಧ್ಯ ಎನಿಸುವ ಘೋಷಣೆಗಳನ್ನು ಮಾಡಿ, ಹಿಂದಿನ ಬಾಗಿಲ ಮೂಲಕ ಅಧಿಕಾರಿಗಳೊಟ್ಟಿಗೆ ಸೇರಿಕೊಂಡು ಚುನಾವಣೆ ಗೆದ್ದು ಸಿಎಂ ಆಗುವ ಕತೆಯನ್ನು ಹೊಂದಿತ್ತು. ಈ ಸಿನಿಮಾವನ್ನು ಕೃಷ್ಣ ನಿರ್ಮಾಣ ಮಾಡಿದ್ದರು. ಪೋಷಕ ನಟರಾಗಿದ್ದ ಕೋಟಾ ಶ್ರೀನಿವಾಸ ರಾವ್ ಅವರನ್ನು ನಾಯಕನ ಪಾತ್ರ ಮಾಡುವಂತೆ ಬಲವಂತ ಮಾಡಿ ಒಪ್ಪಿಸಿದ್ದರು.
ಇದನ್ನೂ ಓದಿ:ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು
ಕೃಷ್ಣ ಅವರ ಮಾತುಕೇಳಿ ಕೋಟಾ ಶ್ರೀನಿವಾಸ ರಾವ್ ಏನೋ ‘ಮಂದಲದೀಶುಡು’ ಎನ್ಟಿಆರ್ ಪಾತ್ರ ಮಾಡಿದರು. ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ಆದರೆ ಕೋಟಾಗೆ ಅದರಿಂದ ಭಾರಿ ಇಕ್ಕಟ್ಟು ಎದುರಾಯ್ತು. ಆ ಸಿನಿಮಾ ಬಿಡುಗಡೆ ಆಗುವ ವೇಳೆಗೆಲ್ಲ ಎನ್ಟಿಆರ್ ಸಿಎಂ ಆಗಿಬಿಟ್ಟಿದ್ದರು. ಸಿನಿಮಾ ಬಿಡುಗಡೆ ಆದ ಬಳಿಕ ಒಮ್ಮೆ ಕೋಟಾ ಶ್ರೀನಿವಾಸ ರಾವ್, ರೈಲಿನಲ್ಲಿ ವಿಜಯವಾಡಕ್ಕೆ ಹೋಗಿದ್ದರಂತೆ. ಅದೇ ದಿನ ಆ ನಗರಕ್ಕೆ ಎನ್ಟಿಆರ್ ಸಹ ಯಾವುದೋ ಕಾರ್ಯಕ್ರಮಕ್ಕೆ ಆಗಮಿಸುವವರಿದ್ದರಂತೆ. ನಗರವೆಲ್ಲ ಹಳದಿ ಬಾವುಟಗಳನ್ನು ಹಾರಿಸಿದ್ದರಂತೆ. ಭಯದಿಂದಲೇ ರೈಲು ಇಳಿದು ಪ್ಲ್ಯಾಟ್ಫಾರ್ಮ್ನ ಮೂಲೆಯಲ್ಲಿ ನಿಂತಿದ್ದ ಕೋಟಾರನ್ನು ಯಾರೋ ಗುರುತು ಹಿಡಿದು, ಎನ್ಟಿಆರ್ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ್ದೀರ ಎಂದು ಹೇಳಿ ಚೆನ್ನಾಗಿ ಭಾರಿಸಿದರಂತೆ. ಮಾತ್ರವಲ್ಲ ಅತ್ಯಂತ ಕೆಟ್ಟದಾಗಿ ಅಪಮಾನವನ್ನು ಮಾಡಿದರಂತೆ. ಅಂದು ತಾನು ಬದುಕಿದ್ದೇ ಹೆಚ್ಚು ಎಂದು ಕೋಟಾ ಶ್ರೀನಿವಾಸ ರಾವ್ ಹೇಳಿಕೊಂಡಿದ್ದಾರೆ.
ಅದಾದ ಬಳಿಕ ಯಾವುದೋ ಚಿತ್ರೀಕರಣದ ಸಂದರ್ಭವೊಂದರಲ್ಲಿ ಎನ್ಟಿಆರ್ ಅವರನ್ನು ನೇರವಾಗಿ ಭೇಟಿ ಆಗುವ ಅವಕಾಶ ಲಭಿಸಿತಂತೆ, ಆಗ ಕೋಟಾ ಅವರನ್ನು ನೋಡಿದ ಎನ್ಟಿಆರ್, ನೀನು ಒಳ್ಳೆಯ ನಟ ಎಂದು ಕೇಳಿದ್ದೇನೆ, ಚೆನ್ನಾಗಿ ನಟಿಸುತ್ತಿರು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸು ಎಂದಷ್ಟೆ ಹೇಳಿದರಂತೆ. ಕೂಡಲೇ ತಾನು ಮಾಡಿದ ತಪ್ಪಿನ ಅರಿವಾಗಿ ಕೋಟಾ ಶ್ರೀನಿವಾಸ ರಾವ್ ಎನ್ಟಿಆರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರಂತೆ.
ಕೋಟಾ ಶ್ರೀನಿವಾಸ ರಾವ್ ತೆಲುಗು ಚಿತ್ರರಂಗದ ಅತ್ಯಂತ ಹಿರಿಯ ಪೋಷಕ ನಟ. 1978ರಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ರಕ್ತ ಕಣ್ಣೀರು’, ‘ಲವ್’, ‘ನಮ್ಮ ಬಸವ’ ಹಾಗೂ ಇತ್ತೀಚೆಗೆ ಬಿಡುಗಡೆ ಆದ ‘ಕಬ್ಜ’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ