AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದಲ್ಲಿರುವ ಬಾಲಕಿ ಸ್ಟಾರ್ ನಟಿ, ರಾಜಕಾರಣಿ, ಕನ್ನಡ ಪ್ರೇಕ್ಷಕರಿಗಂತೂ ಚಿರಪರಿಚಿತ

Actress: ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದು ಈಗ ರಾಜಕೀಯದಲ್ಲೂ ಸಕ್ರಿಯವಾಗಿರುವ ನಟಿಯ ಬಾಲ್ಯದ ಚಿತ್ರವಿದು. ಈ ನಟಿ ಕನ್ನಡ ಸಿನಿ ಪ್ರೇಕ್ಷಕರಿಗಂತೂ ಚಿರಪರಿಚಿತ.

ಚಿತ್ರದಲ್ಲಿರುವ ಬಾಲಕಿ ಸ್ಟಾರ್ ನಟಿ, ರಾಜಕಾರಣಿ, ಕನ್ನಡ ಪ್ರೇಕ್ಷಕರಿಗಂತೂ ಚಿರಪರಿಚಿತ
ಖುಷ್ಬು
ಮಂಜುನಾಥ ಸಿ.
|

Updated on: Jul 08, 2023 | 8:56 AM

Share

ಸಿನಿಮಾ ತಾರೆಯರು ಆಗಾಗ್ಗೆ ತಮ್ಮ ಹಳೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಲವು ನಟ-ನಟಿಯರ ಬಾಲ್ಯದ ಚಿತ್ರಗಳಿಗೂ ನಂತರದ ಚಿತ್ರಗಳಿಗೂ ಅಜಗಜಾಂತರ ಅಂತರ. ಈಗ ಇಲ್ಲಿ ನೋಡುತ್ತಿರುವ ಚಿತ್ರವೂ ಹಾಗೆಯೇ. ಚಿತ್ರದಲ್ಲಿರುವುದು ಪಂಚಭಾಷೆಗಳಲ್ಲಿ ನಟಿಸಿರುವ ಸೂಪರ್ ಸ್ಟಾರ್ (Super Star) ನಟಿ. ಬಾಲನಟಿಯಾಗಿ ವೃತ್ತಿ ಆರಂಭಿಸಿ ಆ ನಂತರ 80 ರ ದಶಕದ ಅಂತ್ಯದಲ್ಲಿ ನಾಯಕಿಯಾದ ಈ ನಟಿ ಏರಿದ ಎತ್ತರ ಸಾಮಾನ್ಯದ್ದಲ್ಲ. ಈ ನಟಿ ಅದ್ಯಾವ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆದಿದ್ದರೆಂದರೆ ಇವರಿಗಾಗಿ ಅಭಿಮಾನಿಗಳು ಗುಡಿಗಳನ್ನು ಕಟ್ಟಿದ್ದರು. ಗೊತ್ತಾಯಿತೇ ಈ ನಟಿ ಯಾರೆಂದು?

1980ರಲ್ಲಿ ಬಿಡುಗಡೆ ಆದ ಹಿಂದಿಯ ದಿ ಬರ್ನಿಂಗ್ ಟ್ರೈನ್ (The Burning Train) ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡು ಆ ಬಳಿಕ ಕೇವಲ ಐದು ವರ್ಷದಲ್ಲಿಯೇ ನಾಯಕಿಯಾಗಿ ಪದಾರ್ಪಣೆ ಮಾಡಿ ಅತ್ಯಂತ ದೊಡ್ಡ ಯಶಸ್ಸು ಕಂಡ ನಟಿ ಖುಷ್ಬು (Khushboo) ಅವರ ಬಾಲ್ಯದ ಚಿತ್ರವಿದು. 1980ರಲ್ಲಿ ಬಾಲನಟಿಯಾಗಿದ್ದ ಖುಷ್ಬುಗೆ 1985ರಲ್ಲಿ ನಾಯಕಿ ಆಗುವ ಅವಕಾಶ ಅರಸಿ ಬಂತು. ಹಿಂದಿ ಚಿತ್ರರಂಗದಿಂದ ಖುಷ್ಬು ನಟನೆ ಆರಂಭಿಸಿದರಾದರೂ ಬೆಳೆದಿದ್ದು ಮಾತ್ರ ದಕ್ಷಿಣ ಭಾರತದ ಸಿನಿಮಾಗಳ ಮೂಲಕವೇ.

1986ರಲ್ಲಿ ಮೊದಲ ಬಾರಿಗೆ ತೆಲುಗಿನ ಕಲಿಯುಗ ಪಾಂಡವಲು ಸಿನಿಮಾದಲ್ಲಿ ನಟಿಸಿದ ಖುಷ್ಬು, ಇಲ್ಲೇ ವೃತ್ತಿ ಮುಂದುವರೆಸುವ ಉದ್ದೇಶದಿಂದ ಸಿನಿಮಾ ಚಟುವಟಿಕೆಗಳ ಕೇಂದ್ರವಾಗಿದ್ದ ಚೆನ್ನೈಗೆ ಸ್ಥಳಾಂತರಗೊಂಡರು. ಹಿಂದಿಯಲ್ಲಿ ಮಾಧುರಿ ದೀಕ್ಷಿತ್, ರೇಖಾ, ಜೂಹಿ ಚಾವ್ಲಾ ಇನ್ನೂ ಹಲವು ನಟಿಯರ ಪಾರುಪತ್ಯ ಇದ್ದಿದ್ದರಿಂದ ಖುಷ್ಬು ದಕ್ಷಿಣ ಭಾರತ ಚಿತ್ರರಂಗವನ್ನು ಆಯ್ದುಕೊಂಡರು. ಅವರ ನಿರ್ಣಯ ಅವರಿಗೆ ವರವಾಗಿ ಪರಿಣಮಿಸಿ, ದಕ್ಷಿಣ ಭಾರತದ ಟಾಪ್ ನಟಿಯಾಗಿ ಬೆಳೆದರು ಖುಷ್ಬು.

ಇದನ್ನೂ ಓದಿ:ನಟಿ ಖುಷ್ಬು ವಿರುದ್ಧ ವಿವಾದಾತ್ಮಕ ಹೇಳಿಕೆ: ಹಿರಿಯ ಶಾಸಕನ ಬಂಧನ

ತಮಿಳು, ತೆಲುಗು, ಕನ್ನಡ, ಮಲಯಾಳಂ ಎಲ್ಲ ದಕ್ಷಿಣ ಭಾಷೆಗಳಲ್ಲಿಯೂ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡಿರುವ ಖುಷ್ಬು ತಮ್ಮ ಖಾತೆಯಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ಹೊಂದಿದ್ದಾರೆ. ಕನ್ನಡದಲ್ಲಿ ಖುಷ್ಬು ಹಾಗೂ ರವಿಚಂದ್ರನ್ ಜೋಡಿ ಅತ್ಯಂತ ಯಶಸ್ವಿ ಜೋಡಿ. 1988 ರಲ್ಲಿ ಬಿಡುಗಡೆ ಆದ ‘ರಣಧೀರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಖುಷ್ಬು ಪ್ರವೇಶಿಸಿದರು. ಇಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು. ‘ರಣಧೀರ’ ಬಳಿಕ ‘ಅಂಜದ ಗಂಡು’, ‘ಯುಗಪುರುಷ’, ‘ಶಾಂತಿ-ಕ್ರಾಂತಿ’ ಸಿನಿಮಾಗಳಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದಾರೆ. ರವಿಚಂದ್ರನ್ ಮಾತ್ರವೇ ಅಲ್ಲದೆ ವಿಷ್ಣುವರ್ಧನ್, ಅಂಬರೀಶ್, ಅನಂತ್​ನಾಗ್, ಅರ್ಜುನ್ ಸರ್ಜಾ, ಟೈಗರ್ ಪ್ರಭಾಕರ್ ಇನ್ನೂ ಕೆಲವರೊಟ್ಟಿಗೆ ನಾಯಕಿಯಾಗಿ ಖುಷ್ಬು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾಗಳು ಮಾತ್ರವೇ ಅಲ್ಲದೆ ರಾಜಕೀಯದಲ್ಲಿಯೂ ಖುಷ್ಬು ಸಕ್ರಿಯರಾಗಿದ್ದಾರೆ. 2010 ರಲ್ಲಿ ಡಿಎಂಕೆ ಪಕ್ಷ ಸೇರುವ ಮೂಲಕ ರಾಜಕೀಯ ಪಯಣ ಆರಂಭಿಸಿದ ಖುಷ್ಬು 2014 ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಬಳಿಕ 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಪ್ರಸ್ತುತ ಬಿಜೆಪಿಯಲ್ಲಿಯೇ ಇದ್ದಾರೆ ಖುಷ್ಬು. ನಟಿ ಖುಷ್ಬು ಈಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಅದೂ ರವಿಚಂದ್ರನ್ ಜೊತೆಗೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ