ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು
Jr NTR: ಜೂ ಎನ್ಟಿಆರ್ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ನಡೆದಿರುವುದು ಅಮೆರಿಕದಲ್ಲಿ.
ತೆಲುಗಿನ ಪ್ರಮುಖ ರಾಜಕೀಯ ಹಾಗೂ ಸಿನಿಮಾ ಕುಟುಂಬವಾದ ಎನ್ಟಿಆರ್ (NTR) ಅಥವಾ ನಂದಮೂರಿ ಕುಟುಂಬದಲ್ಲಿ (Nandamuri Family) ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಚಂದ್ರಬಾಬು ನಾಯ್ಡು (Chandrababu Naidu) ಹಾಗೂ ಬಾಲಕೃಷ್ಣ (Balakrishna) ಅವರುಗಳು ಜೂ ಎನ್ಟಿಆರ್ (Jr NTR) ಅನ್ನು ಕುಟುಂಬದಿಂದ, ಕುಟುಂಬದ ಕಾರ್ಯಕ್ರಮಗಳಿಂದ ಹೊರಗಿಟ್ಟಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಪೂರಕವಾಗಿ ಎನ್ಟಿಆರ್ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಜೂ ಎನ್ಟಿಆರ್ಗೆ ಆಹ್ವಾನ ನೀಡಿರಲಿಲ್ಲ. ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಪ್ರಮುಖನನ್ನಾಗಿಸಬೇಕು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಜೂ ಎನ್ಟಿಆರ್ ಅನ್ನು ದೂರ ಇರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜೂ ಎನ್ಟಿಆರ್ ಅನ್ನು ನಂದಮೂರಿ ಕುಟುಂಬಸ್ಥರು ಕಡೆಗಣಿಸಿರುವುದು ಅವರ ಅಭಿಮಾನಿಗಳಿಗೆ ಬೇಸರ, ಸಿಟ್ಟು ತರಿಸಿದೆ. ಅದರಲ್ಲಿಯೂ ನಾರಾ ಲೋಕೇಶ್ ಲಾಭಕ್ಕಾಗಿ ಜೂ ಎನ್ಟಿಆರ್ ಅನ್ನು ಕಡೆಗಣಿಸಿರುವುದರಿಂದ ಜೂ ಎನ್ಟಿಆರ್ ಅಭಿಮಾನಿಗಳ ಸಿಟ್ಟು ನಾರಾ ಲೋಕೇಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ತಿರುಗಿದೆ. ನಿನ್ನೆಯಷ್ಟೆ ಅಮೆರಿಕದ ತೆಲುಗು ಜನರ ಕಾರ್ಯಕ್ರಮದಲ್ಲಿ ಜೂ ಎನ್ಟಿಆರ್ ಹಾಗೂ ನಾರಾ ಲೋಕೇಶ್ ಬೆಂಬಲಿಗರು ಪರಸ್ಪರ ಜಗಳವಾಡಿದ್ದು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರಾಜಕೀಯ ಚರ್ಚೆ ಎಬ್ಬಿಸಿದ ಜೂ ಎನ್ಟಿಆರ್ ಅಭಿಮಾನಿಯ ಸಾವು: ಕೊಲೆಯಾ? ಆತ್ಮಹತ್ಯೆಯಾ?
ಉತ್ತರ ಅಮೆರಿಕದ ತೆಲುಗು ಜನರ ಸಂಸ್ಥೆ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ (TANA) ವತಿಯಿಂದ ಅಮೆರಿಕದ ಫಿಲಿಡೆಲ್ಫಿಯಾ ನಗರದಲ್ಲಿನ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ ಎನ್ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ಗಲಾಟೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಜುಲೈ 8ರಂದು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ ಸಂಸ್ಥೆಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಆ ನಂತರ ನಡೆದ ಕಾರ್ಯಕ್ರಮಗಳಲ್ಲಿ ಹಲವು ಟಿಡಿಪಿ ಪ್ರಮುಖರು ಸಹ ಭಾಗವಹಿಸಿದ್ದರು. ಟಿಡಿಪಿ ಪಕ್ಷಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಕೆಲವು ಯುವಕರು ಜೂ ಎನ್ಟಿಆರ್ ಪರವಾಗಿ ಘೋಷಣೆ ಕೂಗಿದರು. ಒಬ್ಬರಂತೂ ಎದ್ದು ನಾರಾ ಲೋಕೇಶ್ ಮುಂದಾಳತ್ವದಲ್ಲಿ 2024ರ ಚುನಾವಣೆಗೆ ಹೋದರೆ ಮತ್ತೆ ಸೋಲು ಗ್ಯಾರೆಂಟಿ ಮೊದಲು ಅವನನ್ನು ಪಕ್ಷದಿಂದ ತೆಗೆದು ಆ ಸ್ಥಾನಕ್ಕೆ ಜೂ ಎನ್ಟಿಆರ್ ಅನ್ನು ಕರೆತನ್ನಿ, ಮುಳುಗುತ್ತಿರುವ ಟಿಡಿಪಿಯನ್ನು ಜೂ ಎನ್ಟಿಆರ್ ಮಾತ್ರವೇ ಉಳಿಸಬಲ್ಲರು ಎಂದರು.
ಯುವಕನ ಈ ಮಾತುಗಳು ಸಭೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸಿ ಸಭೆಯು ಎರಡು ಗುಂಪುಗಳಾಗಿ ವಿಭಜನೆಗೊಂಡಿತು. ಒಂದು ಗುಂಪನ್ನು ಸ್ಥಳೀಯ ಮುಖಂಡರಾದ ಸತೀಶ್ ವೇಮನ್ನ ಹಾಗೂ ಮತ್ತೊಂದು ತಾರಾನಿ ಪರಚೂರಿ ಅವರುಗಳು ಮುನ್ನಡೆಸಿ ವಾಗ್ವಾದ ಆರಂಭಿಸಿದರು. ವಾಗ್ವಾದ ಮಿತಿ ಮೀರಿ ಪರಸ್ಪರ ಗುಂಪುಗಳು ಕೈ-ಕೈ ಮಿಲಾಯಿಸಿದವು. ಎರಡೂ ಗುಂಪುಗಳು ಪರಸ್ಪರ ಕೋಲುಗಳಿಂದ ಬಡಿದಾಡಿಕೊಂಡಿದ್ದು ಹಲವರ ಬಟ್ಟೆಗಳನ್ನು ಸಹ ಹರಿದು ಹಾಕಿದ್ದಾರೆ. ಈ ಜಗಳವು ಟಿಡಿಪಿ ಪಕ್ಷದ ಎನ್ಆರ್ಐ ಸಂಘಟಕ ಕೋಮಾಟಿ ಜಯರಾಂ ಎದುರೇ ನಡೆದಿದೆ. ಅಮೆರಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ