ರಾಜಕೀಯ ಚರ್ಚೆ ಎಬ್ಬಿಸಿದ ಜೂ ಎನ್ಟಿಆರ್ ಅಭಿಮಾನಿಯ ಸಾವು: ಕೊಲೆಯಾ? ಆತ್ಮಹತ್ಯೆಯಾ?
Jr NTR: ಜೂ ಎನ್ಟಿಆರ್ ಅಭಿಮಾನಿ ಶ್ಯಾಮ್ ಸಾವಿನ ಕುರಿತು ಆಂಧ್ರದ ರಾಜಕೀಯ ಪಕ್ಷಗಳಾದ ಟಿಡಿಪಿ ಹಾಗೂ ವೈಸಿಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಅಂದಹಾಗೆ ಶ್ಯಾಮ್ ಸಾವು ಕೊಲೆಯೆ? ಆತ್ಮಹತ್ಯೆಯೇ?
ಆಂಧ್ರ ಪ್ರದೇಶದಲ್ಲಿ (Andhra Pradesh) ಜೂ ಎನ್ಟಿಆರ್ (Jr NTR) ಅಭಿಮಾನಿಯೊಬ್ಬ (Fan) ಸಾವನ್ನಪ್ಪಿದ್ದು, ಈ ಘಟನೆ ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಪೂರ್ವ ಗೋಧಾವರಿ ಜಿಲ್ಲೆಯ ಶ್ಯಾಮ್ ಹೆಸರಿನ ಯುವಕ ಜೂ ಎನ್ಟಿಆರ್ ಅಪ್ಪಟ ಅಭಿಮಾನಿಯಾಗಿದ್ದು ಜೂನ್ 26ರಂದು ನಿಧನ ಹೊಂದಿದ್ದಾನೆ. ಶ್ಯಾಮ್ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನಲ್ಲವೆಂದು, ಶ್ಯಾಮ್ ಸಾವಿನ ಹಿಂದೆ ವೈಸಿಪಿ ಪಕ್ಷದ ಸ್ಥಳೀಯ ಮುಖಂಡನ ಕೈವಾಡವಿದೆಯೆಂದು ಆರೋಪಿಸಿದ್ದಾರೆ. ಜೂ ಎನ್ಟಿಆರ್ ಅಭಿಮಾನಿಗಳು ಹಾಗೂ ಇತರೆ ಕೆಲವು ನಟರ ಅಭಿಮಾನಿಗಳು ಈ ಸಾವಿನ ಕುರಿತು ಚರ್ಚೆಗೆ ಒತ್ತಾಯಿಸಿದ್ದಾರೆ.
ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಹ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ” ಪಶ್ಚಿಮ ಗೋಧಾವರಿ ಜಿಲ್ಲೆಯ ಚಿಂತಲೂರಿನಲ್ಲಿ ಶ್ಯಾಮ್ ಅವರ ದುರಂತ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಸಾವಿನ ಸುತ್ತ ಎದ್ದಿರುವ ಅನುಮಾನಾಸ್ಪದ ಸನ್ನಿವೇಶಗಳು ಆತಂಕಕಾರಿಯಾಗಿದೆ. ಈ ವಿಷಯದ ಬಗ್ಗೆ ಕೂಲಂಕುಷ ತನಿಖೆ ನಡೆಸಿ, ನ್ಯಾಯ ಸಿಗುವಂತೆ ಮಾಡಬೇಕೆಂದು ನಾನು ಸರ್ಕಾರವನ್ನು ಬಲವಾಗಿ ಒತ್ತಾಯಿಸುತ್ತೇನೆ. ಶ್ಯಾಮ್ ಸಾವಿನ ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿ ಸದಸ್ಯರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು” ಎಂದಿದ್ದಾರೆ.
ಚಂದ್ರಬಾಬು ನಾಯ್ಡು ಪುತ್ರ, ಟಿಡಿಪಿ ಮುಖಂಡ ನಾರಾ ಲೋಕೇಶ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ”ನಿರುದ್ಯೋಗಿ ಯುವಕ ಶ್ಯಾಮ್‌ನ ಅನುಮಾನಾಸ್ಪದ ಸಾವಿನ ಬಗ್ಗೆ ತಿಳಿದು ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪಗಳು. ಈ ಘಟನೆಯ ಹಿಂದೆ ವೈಸಿಪಿ ಮುಖಂಡರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಯಾವುದೇ ಪೂರ್ವಾಗ್ರಹ ಇಲ್ಲದೆ, ಪಾರದರ್ಶಕವಾಗಿ ಸಮಗ್ರ ತನಿಖೆಯ ಅಗತ್ಯವಿದೆ. ಶ್ಯಾಮ್‌ಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ:ಮತ್ತೆ ಜೂ ಎನ್ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು
ಆದರೆ ಆಡಳಿತಾರೂಢ ವೈಸಿಪಿ ಪಕ್ಷವು ಈ ಕುರಿತು ಟ್ವೀಟ್ ಮಾಡಿದ್ದು, ಶ್ಯಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಆದರೆ ವಿಪಕ್ಷದವರು ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿಎಂ ವೈಎಸ್ ಜಗನ್ ಅವರನ್ನು ನೇರವಾಗಿ ಎದುರಿಸಲಾಗದೆ ಜನರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥಹಾ ನೀಚ ನಾಯಕ ದೇಶದಲ್ಲೆ ಎಲ್ಲೂ ಇಲ್ಲ ಎಂದು ಚಂದ್ರಬಾಬು ನಾಯ್ಡು ಅವರನ್ನು ಟೀಕಿಸಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಸಾವಿಗೆ ಮುಂಚೆ ಶ್ಯಾಮ್ ಮಾಡಿದ್ದ ವಿಡಿಯೋಗಳನ್ನು ಹಂಚಿಕೊಂಡಿದ್ದು, ಶ್ಯಾಮ್ ನಿಧನದ ಬಗ್ಗೆ ಸಂತಾಪಗಳಿವೆ. ಅವರ ಕುಟುಂಬಕ್ಕೆ ಜೂ ಎನ್ಟಿಆರ್ ಅಭಿಮಾನಿಗಳಿಗೆ ತಮ್ಮ ಸಂತಾಪಗಳು ಆದರೆ ಶ್ಯಾಮ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ ಎಂದಿದ್ದಾರೆ. ವಿಡಿಯೋಗಳಲ್ಲಿ ತಮ್ಮ ಅಪ್ಪ-ಅಮ್ಮನಿಗೆ ಹಾಗೂ ಗೆಳೆಯರಿಗೆ ಕ್ಷಮೆ ಕೇಳಿರುವ ಶ್ಯಾಮ್, ನನಗೆ ಕೆಲಸ ಮಾಡಲು ಇಷ್ಟವಿಲ್ಲ. ನನಗೆ ಉದ್ಯೋಗ ವ್ಯವಸ್ಥೆ ಬಗ್ಗೆಯೇ ಅಸಮಾಧಾನವಿದೆ” ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ