ವರಾಹಿ ಯಾತ್ರೆ ಪ್ರಾರಂಭಿಸಲಿರುವ ಪವನ್ ಕಲ್ಯಾಣ್, ಚಿತ್ರರಂಗದ ಹಲವರಿಂದ ಬೆಂಬಲ
Pawan Kalyan: ಪವನ್ ಕಲ್ಯಾಣ್ ವರಾಹಿ ಯಾತ್ರೆ ಜೂನ್ 14ರಿಂದ ಪ್ರಾರಂಭವಾಗಲಿದೆ. ಯಾತ್ರೆಗೆ ತೆಲುಗು ಚಿತ್ರರಂಗದ ಅನೇಕರು ಬೆಂಬಲ ಸೂಚಿಸಿದ್ದಾರೆ.
ತೆಲುಗು ಚಿತ್ರರಂಗದ (Tollywood) ಸೂಪರ್ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan), ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಜನಸೇನಾ ಪಕ್ಷ ಸ್ಥಾಪಿಸಿರುವ ಪವನ್ ಕಲ್ಯಾಣ್ ಸನಿಹದಲ್ಲಿರುವ ಆಂಧ್ರ ಪ್ರದೇಶ (Andhra Pradesh) ವಿಧಾನಸಭೆ ಚುನಾವಣೆಯಲ್ಲಿ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಆಡಳಿತ ಪಕ್ಷದ ವಿರುದ್ಧ ಸತತ ಟೀಕೆಗಳನ್ನು ಮಾಡುತ್ತಾ ಬಂದಿರುವ ಪವನ್ ಕಲ್ಯಾಣ್ ಇದೀಗ ರಾಜ್ಯದಾದ್ಯಂತ ಯಾತ್ರೆ ಮಾಡಲು ತಯಾರಾಗಿದ್ದು ಜೂನ್ 14ರಿಂದ ಯಾತ್ರೆ ಆರಂಭಿಸುತ್ತಿದ್ದಾರೆ. ಈ ಯಾತ್ರೆಗೆ ತೆಲುಗು ಚಿತ್ರರಂಗದ ಹಲವರು ಬೆಂಬಲ ಘೋಷಿಸಿದ್ದಾರೆ.
ರಾಜ್ಯದಾದ್ಯಂತ ಪವನ್ ಕಲ್ಯಾಣ್ ಮಾಡುತ್ತಿರುವ ಯಾತ್ರೆಗೆ ವರಾಹಿ ಯಾತ್ರೆ ಎಂದು ಹೆಸರಿಟ್ಟಿದ್ದು, ಜೂನ್ 14 ರಂದು ಅನ್ನವರಂನ ಸತ್ಯದೇವನ ಸನ್ನಿಧಿಯಿಂದ ಯಾತ್ರೆ ಪ್ರಾರಂಭವಾಗಲಿದೆ. ಯಾತ್ರೆಗೆ ಮುಂಚೆ ಕೆಲವು ನಿರ್ಮಾಪಕರು, ನಿರ್ದೇಶಕರು, ಕೆಲವು ನಟರು ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಿನ ತೆಲುಗು ಹಿಟ್ ಸಿನಿಮಾ ವಿರೂಪಾಕ್ಷದ ನಿರ್ಮಾಪಕ ಬಿವಿಎಸ್ಎನ್ ಪ್ರಸಾದ್ ಪವನ್ ಕಲ್ಯಾಣ್ರ ಜನಸೇನಾ ಪಕ್ಷ ಸೇರಿದ್ದಾರೆ. ನಿರ್ದೇಶಕ ಹ್ಯಾರಿಸ್ ಶಂಕರ್ ಸೇರಿದಂತೆ ಇನ್ನೂ ಕೆಲವರು ಜನಸೇನಾ ಪಕ್ಷ ಸೇರಿದ್ದು ಪವನ್ ಕಲ್ಯಾಣ್ಗೆ ಬೆಂಬಲ ನೀಡುತ್ತಿದ್ದಾರೆ.
ವರಾಹಿ ಯಾತ್ರೆಗಾಗಿ ವಿಶೇಷ ವಾಹನವೊಂದನ್ನು ಕೆಲವು ತಿಂಗಳುಗಳ ಮುಂಚೆಯೇ ಪವನ್ ಕಲ್ಯಾಣ್ ವಿಶೇಷವಾಗಿ ತಯಾರು ಮಾಡಿಸಿಟ್ಟುಕೊಂಡಿದ್ದಾರೆ. ಟಾಟಾ ಕ್ಯಾಂಪೈರ್ ವಾಹವನ್ನು ವಿಶೇಷವಾಗಿ ಮಾಡಿಫೈ ಮಾಡಿಸಿದ್ದಾರೆ ಪವನ್ ಕಲ್ಯಾಣ್. ನೋಡಲು ಮಿಲಿಟರಿ ವಾಹನದಂತೆ ಕಾಣುವಂತೆ ತಯಾರು ಮಾಡಿಸಿಕೊಂಡಿದ್ದಾರೆ. ವಾಹನದಲ್ಲಿ ಸಭೆಗೆ ಸ್ಥಳ, ವಿಶ್ರಾಂತಿಗೆ ವ್ಯವಸ್ಥೆ, ಶೌಚಾಲಯ, ಮೇಕಪ್ ರೂಂ, ಟಿವಿ, ಟೆಲಿಫೋನ್, ವೈಫೈ ಸೌಲಭ್ಯಗಳ ಜೊತೆಗೆ ವಾಹನದ ಸುತ್ತ ಕ್ಯಾಮೆರಾಗಳು, ವಾಹನಕ್ಕೆ ಮೈಕ್ ಹಾಗೂ ಸ್ಪೀಕರ್ ಅನ್ನು ಅಳವಡಿಸಲಾಗಿದೆ. ವಾಹನದ ಮೇಲೆ ನಿಂತು ಭಾಷಣ ಮಾಡಲು ಗ್ರಿಲ್ಗಳು, ವಾಹದ ಮೇಲೆ ಕಲ್ಲಿನ ದಾಳಿ ಇನ್ನಿತರೆ ದಾಳಿಗಳನ್ನು ತಡೆಯಲು ವ್ಯವಸ್ಥೆಗಳೆಲ್ಲವನ್ನೂ ಮಾಡಲಾಗಿದೆ.
ಅನ್ನವರಂ ಸತ್ಯದೇವರ ದರ್ಶನ ಪಡೆದು ವಾರಾಹಿ ಯಾತ್ರೆ ಆರಂಭವಾಗಲಿದೆ. ಅನ್ನವರಂನಿಂದ ಭೀಮಾವರಂಗೆ ಯಾತ್ರೆ ನಡೆಯಲಿದೆ. ಈ ಯಾತ್ರೆ ಕೇವಲ ಚುನಾವಣೆಗಾಗಿ ಅಲ್ಲ. ಜನರ ಸಂಕಷ್ಟಗಳನ್ನು ಹತ್ತಿರದಿಂದ ಅರಿಯುವ ಮತ್ತು ಅವರ ಜೊತೆಗೆ ನಾವಿದ್ದೇವೆ ಎಂದು ಭರವಸೆ ಮೂಡಿಸುವ ಯಾತ್ರೆ ಇದಾಗಿದ್ದು ಈ ಯಾತ್ರೆ ಇತಿಹಾಸದಲ್ಲಿ ಉಳಿಯಲಿದೆ ಎಂದಿದ್ದಾರೆ ಪವನ್ ಕಲ್ಯಾಣ್. ಪವನ್ ಕಲ್ಯಾಣ್ ಪ್ರತಿ ಕ್ಷೇತ್ರದಲ್ಲಿ ಎರಡು ದಿನ ವಾಸ್ತವ್ಯ ಹೂಡಲು ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ. ಯಾತ್ರೆಯ ಮೊದಲ ಭಾಗದಲ್ಲಿ 11 ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ.
ಪವನ್ ಕಲ್ಯಾಣ್ ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ಬಹಳ ಬ್ಯುಸಿಯಾಗಿರುದ್ದಾರೆ. ಪವನ್ ಕಲ್ಯಾಣ್ ನಟನೆಯ ಹರಿಹರ ವೀರಮಲ್ಲು ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಜೊತೆಗೆ ಉಸ್ತಾದ್ ಭಗತ್ ಸಿಂಗ್, ಹಾಗೂ ಬ್ರೋ ಹೆಸರಿನ ಹೊಸ ಸಿನಿಮಾದ ಚಿತ್ರೀಕರಣ ಸಹ ಶುರುವಾಗಿವೆ. ಚುನಾವಣೆ ವೇಳೆಗೆ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಪವನ್ ಕಲ್ಯಾಣ್ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ