ಪದವಿ ಪಡೆದ ಪವನ್ ಕಲ್ಯಾಣ್ ಪತ್ನಿ, ಎಷ್ಟು ಓದಿದ್ದಾರೆ ಗೊತ್ತೆ?

ಆಂಧ್ರದ ಡಿಸಿಎಂ ಪವನ್ ಕಲ್ಯಾಣ್​ರ ರಷ್ಯನ್ ಪತ್ನಿ ಅನ್ನಾ ಲೆಜ್ನೇವಾ ಇಬ್ಬರು ಮಕ್ಕಳ ತಾಯಿಯಾಗಿ, ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಸಿಂಗಪುರದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ ಎರಡನೇ ಮಾಸ್ಟರ್ಸ್ ಡಿಗ್ರಿ ಪಡೆದುಕೊಂಡಿದ್ದಾರೆ.

ಪದವಿ ಪಡೆದ ಪವನ್ ಕಲ್ಯಾಣ್ ಪತ್ನಿ, ಎಷ್ಟು ಓದಿದ್ದಾರೆ ಗೊತ್ತೆ?
Follow us
ಮಂಜುನಾಥ ಸಿ.
|

Updated on: Jul 21, 2024 | 8:53 AM

ರಷ್ಯಾದ ಅನ್ನಾ ಲೆಜ್ನೇವಾರನ್ನು ಪವನ್ ಕಲ್ಯಾಣ್ ಮದುವೆಯಾದಾಗ ಟ್ರೋಲಿಂಗ್​ಗೆ ಗುರಿಯಾಗಿದ್ದರು. ಅನ್ನಾ ರಷ್ಯಾದವರು ಎಂಬುದೇ ಈ ಟ್ರೋಲಿಂಗ್​ಗೆ ಕಾರಣವಾಗಿತ್ತು. ಆದರೆ ಅನ್ನಾಗೆ ಭಾರತೀಯ ಸಂಸ್ಕೃತಿಯ ಮೇಲೆ ಅಪಾರ ಗೌರವ. ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ಹೊರ ಬಿದ್ದಿರುವ ಕೆಲವು ವಿಡಿಯೋಗಳಂತೂ ಅನ್ನಾ ಅವರು ಅದೆಷ್ಟು ಸಂಪ್ರದಾಯಿಕ ವ್ಯಕ್ತಿತ್ವ ಹಾಗೂ ಪವನ್​ ಬಗ್ಗೆ ಅವರು ಮಾಡುವ ಕಾಳಜಿ ಎಂಥದ್ದು ಎಂಬುದನ್ನು ಸಾರಿ ಹೇಳುತ್ತಿವೆ. ಅನ್ನಾ ಲೆಜ್ನೇವಾ ಮನೆಯ ಜವಾಬ್ದಾರಿಗಳನ್ನು ಪೂರೈಸುತ್ತಿರುವ ಜೊತೆಗೆ ಓದು ಮುಂದುವರೆಸಿ ಪದವಿಯೊಂದನ್ನು ಪಡೆದುಕೊಂಡಿದ್ದಾರೆ ಅದೂ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ. ಅಷ್ಟಕ್ಕೂ ಪವನ್​ರ ಪತ್ನಿ ಅನ್ನಾ ಓದಿರುವುದು ಎಷ್ಟು?

ಅನ್ನಾ ಲೆಜ್ನೇವಾ, ಸ್ವಿಟ್ಜರ್​ಲೆಂಡ್​ನ ಪ್ರತಿಷ್ಠಿತ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ಸ್ ಡಿಗ್ರಿ ಮುಗಿಸಿದ್ದಾರೆ. ಮಾಸ್ಟರ್ಸ್ ಆಫ್ ಆರ್ಟ್ಸ್ ಮತ್ತು ಸೋಷಿಯಲ್ ಸೈನ್ಸ್ ವಿಷಯದಲ್ಲಿ ಸಂಶೋಧನೆ ನಡೆಸಿ ಮಾಸ್ಟರ್ಸ್ ಪದವಿ ಪಡೆದುಕೊಂಡಿದ್ದಾರೆ. ಪತ್ನಿಯ ಪದವಿ ವಿತರಣೆ ಸಮಾರಂಭ (ಕಾನ್ವಕೇಶನ್) ಕಾರ್ಯಕ್ರಮದಲ್ಲಿ ನಟ ಪವನ್ ಕಲ್ಯಾಣ್ ಖುದ್ದಾಗಿ ಭಾಗಿಯಾಗಿದ್ದರು. ಪತ್ನಿಯ ಪದವಿಯೊಟ್ಟಿಗೆ ಪವನ್ ಕಲ್ಯಾಣ್ ಸಹ ಹೆಮ್ಮೆಯಿಂದ ಫೋಸು ಕೊಟ್ಟಿದ್ದಾರೆ. ಪವನ್​ರ ಅಭಿಮಾನಿಗಳು ಅನ್ನಾರ ಸಾಧನೆ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನ್ನಾ ಲೆಜ್ವೇವಾ ಅವರು ಪದವಿ ಸ್ವೀಕಾರ ಮಾಡುತ್ತಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಅನ್ನಾ ಲೆಜ್ನೇವಾ ರಷ್ಯಾದಲ್ಲಿ ಮಾಡೆಲ್ ಆಗಿದ್ದರು. ಅದರ ಜೊತೆಗೆ ಒಳ್ಳೆಯ ವಿದ್ಯಾರ್ಥಿಯೂ ಆಗಿದ್ದ ಅನ್ನಾ ರಷ್ಯಾದಲ್ಲಿದ್ದಾಗಲೇ ಕೆಲವು ಮಹತ್ವದ ವಿಷಯಗಳಲ್ಲಿ ಪದವಿಗಳನ್ನು ಸಂಪಾದಿಸಿದ್ದರು. ರಷ್ಯಾದ ಪೀಟರ್ಸ್​ಬರ್ಗ್ ವಿಶ್ವವಿದ್ಯಾಲಯದಲ್ಲಿ ಏಷಿಯನ್ ಇತಿಹಾಸ, ಭಾಷೆಗಳು ಮತ್ತು ಜೀವನಶೈಲಿಯ ಬಗ್ಗೆ ಅಧ್ಯಯನ ಮಾಡಿ ಪದವಿ ಗಳಿಸಿದ್ದರು. ಥಾಯ್ಲೆಂಡ್ ಇತಿಹಾಸದ ಬಗ್ಗೆ ವಿಶೇಷ ಸಂಶೋಧನೆಯನ್ನು ಸಹ ಅನ್ನಾ ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿರುವಾಗಲೇ ರಷಿಯನ್ ಹೊರತಾಗಿ ಮೂರು ಬೇರೆ ಬೇರೆ ಭಾಷೆಗಳನ್ನು ಸಹ ಕಲಿತಿದ್ದರು ಅನ್ನಾ. ಥಾಯ್​ ಸಂಸ್ಕೃತಿ, ಥಾಯ್ಲೆಂಡ್ ಇತಿಹಾಸದ ಅಧ್ಯಯನದಿಂದ ಬ್ಯಾಂಕಾಕ್​ನ ಚುಲಲಂಗೋರ್ನ್ ವಿಶ್ವವಿದ್ಯಾಲಯದಿಂದ ಮೊದಲ ಮಾಸ್ಟರ್ಸ್ ಪದವಿಯನ್ನು ಪಡೆದುಕೊಂಡರು. ಈಗ ಸಿಂಗಪುರದಲ್ಲಿ ಅನ್ನಾ ಪಡೆದುಕೊಂಡಿರುವುದು ಅವರ ಎರಡನೇ ಮಾಸ್ಟರ್ಸ್ ಡಿಗ್ರಿ.

ಇದನ್ನೂ ಓದಿ:ಅಂಬಾನಿ ಮದುವೆಗೆ ಪವರ್​ಫುಲ್ ಎಂಟ್ರಿ ಕೊಟ್ಟ ಪವನ್ ಕಲ್ಯಾಣ್

ಅನ್ನಾ ಲೆಜ್ನೇವಾಗೆ ಇಬ್ಬರು ಮಕ್ಕಳಿದ್ದಾರೆ. ಪವನ್ ಕಲ್ಯಾಣ್ ಮನೆಯ ಜವಾಬ್ದಾರಿಗಳನ್ನು ಅವರೇ ನಿರ್ವಹಿಸುತ್ತಿದ್ದಾರೆ. ಇದೆಲ್ಲದರ ನಡುವೆಯೂ ಸಹ ಅನ್ನಾ ಅಧ್ಯಯನ ಮಾಡಿ ಮಾಸ್ಟರ್ಸ್ ಡಿಗ್ರಿ ಪಡೆದುಕೊಂಡಿದ್ದಾರೆ. ಪತ್ನಿಯ ಈ ಸಾಧನೆಯಿಂದ ನಟ ಪವನ್ ಕಲ್ಯಾಣ್ ಸಹಜವಾಗಿಯೇ ಖುಷಿಯಾಗಿದ್ದಾರೆ. ಪತ್ನಿಯ ಸಾಧನೆಯನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಅನ್ನಾ, ಪವನ್​ ಕಲ್ಯಾಣ್​ರ ಮೂರನೇ ಪತ್ನಿ. ಮೊದಲ ಪತ್ನಿ ನಂದಿನಿಗೆ ಭಾರಿ ಮೊತ್ತದ ಪರಹಾರ ಮೊತ್ತ ನೀಡಿ ವಿಚ್ಛೇದನ ಪಡೆದುಕೊಂಡರು ಪವನ್ ಕಲ್ಯಾಣ್. ಅದಾದ ಬಳಿಕ ಸಹ ನಟಿ ರೇಣು ದೇಸಾಯಿ ಜೊತೆ ಸಂಬಂಧ ಹೊಂದಿ ಮಗುವೊಂದನ್ನು ಪಡೆದುಕೊಂಡರು. ಬಳಿಕ ರೇಣು ದೇಸಾಯಿಯನ್ನು ಅಧಿಕೃತವಾಗಿ ಮದುವೆಯಾಗಿ ಎರಡನೇ ಮಗುವನ್ನು ಪಡೆದುಕೊಂಡರು. ಬಳಿಕ ರೇಣು ದೇಸಾಯಿ ಜೊತೆಗೂ ವಿಚ್ಛೇದನ ಪಡೆದುಕೊಂಡರು. ಅಂತಿಮವಾಗಿ ರಷ್ಯಾದ ಅನ್ನಾರನ್ನು ವಿವಾಹವಾದರು. ‘ತೀಸ್ ಮಾರ್’ ಸಿನಿಮಾದ ಚಿತ್ರೀಕರಣಕ್ಕೆ ರಷ್ಯಾಕ್ಕೆ ಹೋದಾಗ ಅನ್ನಾ ಪರಿಚಯ ಪವನ್​ಗೆ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ