ರೊಟ್ಟಿಗೆ ಉಗುಳು: ಸೋನು ಸೂದ್ ಹೇಳಿಕೆಗೆ ಕಂಗನಾ ಆಕ್ರೋಶ
ನಟ ಸೋನು ಸೂದ್ ಮುಸ್ಲೀಮರ ಬಗ್ಗೆ ಮಾಡಿರುವ ಒಂದು ಟ್ವೀಟ್ ಬಗ್ಗೆ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದು, ಸೋನು ಸೂದ್ರ ಕಾಲೆಳೆದಿದ್ದಾರೆ ನಟಿ. ಈ ಇಬ್ಬರ ನಡುವೆ ವರ್ಷಗಳಿಂದಲೂ ಮುನಿಸು ಸಾಗುತ್ತಲೇ ಬಂದಿದೆ.
ಕೋವಿಡ್ ಸಮಯದಲ್ಲಿ ಸಾವಿರಾರು ಜನಕ್ಕೆ ಸಹಾಯ ಮಾಡಿದ್ದ ಸೋನು ಸೂದ್ರನ್ನು ‘ಮಸಿಯಾ’ (ದೇವರು) ಎಂದು ಕರೆಯಲಾಗಿತ್ತು. ಹಲವು ಸಚಿವರು, ರಾಜ್ಯಪಾಲರುಗಳು ಸೋನು ಸೂದ್ರ ಕಾರ್ಯಕ್ಕೆ ಕೊಂಡಾಡಿದ್ದರು. ಆದರೆ ಇತ್ತೀಚೆಗೆ ಅವರ ರಾಜಕೀಯ ನಿರ್ಧಾರದಿಂದಾಗಿ ಕೆಲ ವರ್ಗಗಳು ಅವರ ಟೀಕೆಗೆ ಇಳಿದಿವೆ. ಸೋನು ಸೂದ್, ತಮ್ಮ ಸಹೋದರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ, ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು. ಇದು ಬಿಜೆಪಿ ಬೆಂಬಲಿಗರ ಕಣ್ಣು ಕೆಂಪಗಾಗಿಸಿತ್ತು. ಇದರ ಜೊತೆಗೆ ಸೋನು ಸೂದ್ ಮಾಡಿರುವ ಟ್ವೀಟ್ ಒಂದು ಬಿಜೆಪಿ ಬೆಂಬಲಿಗರು ಮಾತ್ರವೇ ಅಲ್ಲದೆ ಬಿಜೆಪಿಯ ಕೆಲ ಮುಖಂಡರ ಆಕ್ರೋಶಕ್ಕೂ ಕಾರಣವಾಗಿದೆ.
ಎಲ್ಲವೂ ಪ್ರಾರಂಭವಾಗಿದ್ದು ಉತ್ತರ ಪ್ರದೇಶದ ಸರ್ಕಾರ ನೀಡಿದ ಹೊಸ ಆದೇಶದಿಂದ. ಕನ್ವಾರ್ ಯಾತ್ರಾ ಮಾರ್ಗದ ಹೋಟೆಲ್ಗಳ ಮಾಲೀಕರು ತಮ್ಮ ಹೆಸರುಗಳನ್ನು ಅಂಗಡಿಯ ಮುಂಭಾಗ ಬರೆಯಬೇಕು ಎಂಬ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿತು. ಆ ಮಾರ್ಗದಲ್ಲಿ ತೆರಳುವ ಪ್ರಯಾಣಿಕರಿಗೆ ಯಾವುದು ಹಿಂದೂಗಳ ಹೋಟೆಲ್, ಯಾವುದು ಮುಸ್ಲೀಮರ ಹೋಟೆಲ್ ಎಂಬುದು ತಿಳಿಯಲಿ ಎಂಬುದು ಈ ಆದೇಶದ ಉದ್ದೇಶವಾಗಿತ್ತು. ಆದೇಶದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನಟ ಸೋನು ಸೂದ್, ‘ಎಲ್ಲ ಅಂಗಡಿಗಳ ಮುಂದೆ ‘ಮಾನವೀಯತೆ’ ಎಂಬುದೇ ಬೋರ್ಡ್ ಆಗಿರಬೇಕು’ ಎಂದಿದ್ದರು.
ಸೋನು ಸೂದ್ರ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದರ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬ ರೋಟಿಯನ್ನು ತಂದೂರ್ನಲ್ಲಿ ಇಡುವ ಮುಂಚೆ ಅದಕ್ಕೆ ಉಗಿಯುತ್ತಿದ್ದ ವಿಡಿಯೋ ಒಂದು ವೈರಲ್ ಆಯ್ತು. ಆ ವಿಡಿಯೋವನ್ನು ಸೋನು ಸೂದ್ರ ಟ್ರೋಲ್ ಮಾಡಲು ಬಳಲಾಯ್ತು. ವಿಡಿಯೋ ಶೇರ್ ಮಾಡಿದ ಸೋನು ಸೂದ್, ‘ಶಬರಿ, ರಾಮನ ಎಂಜಲು ಹಣ್ಣನನ್ನು ತಿಂದಳು. ಹಿಂಸೆಯನ್ನು ಸೋಲಿಸಲು ಈ ಸಹೋದರನ ಎಂಜಲು ಮೆತ್ತಿದ ರೋಟಿಯನ್ನು ನಾನೇಕೆ ತಿನ್ನದೇ ಇರುವೆ. ಮಾನವೀಯತೆ ಎಲ್ಲೆಡೆ ಪಸರಿಸಬೇಕು ಅಷ್ಟೆ’ ಎಂದಿದ್ದರು.
ಇದನ್ನೂ ಓದಿ:ಕಂಗನಾ ರನೌತ್ ಆಸ್ತಿ ವಿವರ ಬಹಿರಂಗ, ನಟಿಯ ಬಳಿ ಇರುವ ಚಿನ್ನ ಎಷ್ಟು ಕೆಜಿ?
ಸೋನು ಸೂದ್ರ ಟ್ವೀಟ್ಗೆ ಹಲವರು ವಿಶೇಷವಾಗಿ ಬಿಜೆಪಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ, ಸೋನು ಸೂದ್ರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್, ‘ಮುಂದೆ ಸೋನು ಸೂದ್ ತಮ್ಮದೇ ಆವಿಷ್ಕಾರದ ಮೂಲಕ ಹೊಸ ರಾಮಾಯಣದ ಕತೆ ಬರೆದು, ಬಾಲಿವುಡ್ನಲ್ಲಿ ಹೊಸ ರಾಮಾಯಣ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಅಸಲಿಗೆ ಕಂಗನಾ ಹಾಗೂ ಸೋನು ಸೂದ್ ನಡುವಿನ ವಿವಾದ ಹಳೆಯದ್ದು. ಕಂಗನಾ ನಿರ್ದೇಶನ ಮಾಡಿದ್ದ ‘ಮಣಿಕರ್ಣಿಕಾ’ ಸಿನಿಮಾದಲ್ಲಿ ಸೋನು ಸೂದ್ ನಟಿಸಿದ್ದರು. ಆದರೆ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದ ಕಂಗನಾ, ಸೋನು ವಿರುದ್ಧ ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅಸಲಿಗೆ ಆ ಸಿನಿಮಾವನ್ನು ಸಹ ಮೊದಲು ಬೇರೊಬ್ಬರು ನಿರ್ದೇಶನ ಮಾಡಿದ್ದರು. ಅವರನ್ನೂ ಸಹ ಕಂಗನಾ ಸಿನಿಮಾದಿಂದ ಹೊರಗಟ್ಟಿದರು. ಆಗಿನಿಂದಲೂ ಸೋನು ಹಾಗೂ ಕಂಗನಾ ಪರಸ್ಪರರ ಬಗ್ಗೆ ಟೀಕೆ, ನಿಂದನೆ ಮಾಡುತ್ತಲೇ ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ