ನಟನೆಯನ್ನು ಬಹುತೇಕ ತ್ಯಜಿಸಿದ ಪವನ್ ಕಲ್ಯಾಣ್; ದಿಟ್ಟ ನಿರ್ಧಾರ ಘೋಷಿಸಿದ ನಟ
ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿರುವುದರಿಂದ ಸಿನಿಮಾಗಳಲ್ಲಿ ಕಡಿಮೆ ಕೆಲಸ ಮಾಡುವ ನಿರ್ಧಾರವನ್ನು ಘೋಷಿಸಿದ್ದಾರೆ. ‘ಒಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳ ಚಿತ್ರೀಕರಣವನ್ನು ಬೇಗ ಮುಗಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ. ರಾಜಕೀಯ ಜವಾಬ್ದಾರಿಗಳಿಂದಾಗಿ ಭವಿಷ್ಯದಲ್ಲಿ ಕಡಿಮೆ ಸಿನಿಮಾಗಳಲ್ಲಿ ನಟಿಸುವುದಾಗಿ ಅವರು ತಿಳಿಸಿದ್ದಾರೆ.

ನಟ ಪವನ್ ಕಲ್ಯಾಣ್ (Pawan Kalyan) ಅವರು ಈ ಮೊದಲು ಸಿನಿಮಾ ಕೆಲಸಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುತ್ತಿದ್ದರು. ಯಾವಾಗ ಅವರು ರಾಜಕೀಯದಲ್ಲಿ ಬ್ಯುಸಿ ಆದರೋ ಆಗ ಬಿಡುವು ಮಾಡಿಕೊಂಡಾದರೂ ಸಿನಿಮಾ ಮಾಡುತ್ತಿದ್ದರು. ರಾಜಕೀಯದಲ್ಲಿ ಗೆಲುವು ಸಿಕ್ಕಿ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಆದ ಬಳಿಕ ಪವನ್ ಕಲ್ಯಾಣ್ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರ ಕೈಗೆ ಸಿಗದಂತಾಗಿದ್ದಾರೆ. ಈ ಬಗ್ಗೆ ಫ್ಯಾನ್ಸ್‌ಗೆ ಬೇಸರ ಇದೆ. ಹೀಗಿರುವಾಗಲೇ ಅವರು ಸಿನಿಮಾಗಳಿಂದ ದೂರವೇ ಇರುವ ನಿರ್ಧಾರ ಘೋಷಿಸಿದ್ದಾರೆ.
ಪವನ್ ಕಲ್ಯಾಣ್ ಈಗ ಜನ ಸೇವೆಯಲ್ಲಿ ಬ್ಯುಸಿ ಇದ್ದಾರೆ. ಇವುಗಳ ಜೊತೆ ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ. ಬಹು ವರ್ಷಗಳಿಂದ ಪೆಂಡಿಂಗ್ನಲ್ಲೇ ಉಳಿದುಕೊಂಡಿದ್ದ ‘ಹರಿ ಹರ ವೀರ ಮಲ್ಲು’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ನಿರ್ದೇಶಕರು ಹಾಗೂ ನಿರ್ಮಾಪಕರು ಸಾಕಷ್ಟು ಗೋಗರೆದ ಬಳಿಕ ಈ ಚಿತ್ರಕ್ಕಾಗಿ ಅವರು ಸಮಯ ಮೀಸಲಿಟ್ಟು ಚಿತ್ರ ಮಾಡಿಕೊಟ್ಟಿದ್ದಾರೆ. ಇದರ ಪ್ರಚಾರದ ಭಾಗವಾಗಿ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ಶಾಕಿಂಗ್ ನಿರ್ಧಾರ ಘೋಷಿಸಿದ್ದಾರೆ.
‘ಒಜಿ’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ಪವನ್ ಕಲ್ಯಾಣ್ ಮಾಡಬೇಕಿದೆ. ಆದರೆ ಅವರ ಬಳಿ ಅದಕ್ಕೆ ಸಮಯ ಇಲ್ಲ. ‘ನಾನು ರಾಜಕೀಯದಲ್ಲಿ ತೊಡಗಿಕೊಂಡಿರುವುದರಿಂದ ಸಿನಿಮಾದಲ್ಲಿ ನಟಿಸಲು ಹೆಚ್ಚು ಸಮಯ ಇಲ್ಲ’ ಎಂದು ಅವರು ಹೇಳಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಕಡಿಮೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಅವರು ಹೊಸ ಸಿನಿಮಾದಲ್ಲಿ ನಟಿಸೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಗೆಲುವು ಸಿಕ್ಕರೆ ಅವರು ಸಿಗೋದು ಅನುಮಾನವೇ.
ಇನ್ನು, ಪವನ್ ಕಲ್ಯಾಣ್ ಅವರು ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಅದನ್ನು ಮುಂದುವರಿಸೋದಾಗಿ ಹೇಳಿದ್ದಾರೆ. ಪವನ್ ಕಲ್ಯಾಣ್ ಅವರು ಆಂಧ್ರದ ಡಿಸಿಎಂ. ಈ ಹುದ್ದೆಗೆ ಅದರದ್ದೇ ಆದ ಒಂದಷ್ಟು ಜವಾಬ್ದಾರಿಗಳು ಇರುತ್ತವೆ. ಇವುಗಳ ಜೊತೆಗೆ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ಕೂಡ ಇದೆ.
ಇದನ್ನೂ ಓದಿ: ರೀಮೇಕ್ ಸಿನಿಮಾ ಮಾಡುವುದೇಕೆ? ಪವನ್ ಕಲ್ಯಾಣ್ ಕೊಟ್ಟರು ಕಾರಣ
ಹಾಗಾದರೆ ‘ಒಜಿ’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳ ಗತಿ ಏನು? ಇದಕ್ಕೂ ಅವರು ಉತ್ತರಿಸಿದ್ದಾರೆ. ಸದ್ಯದ ಮಟ್ಟಿಗೆ ಈ ಚಿತ್ರಗಳಿಗೆ ಪವನ್ ಕಲ್ಯಾಣ್ ಅವರಿಂದ ಸಾಕಷ್ಟು ನಷ್ಟವೇ ಆಗುತ್ತಿದೆ. ಹೀಗಾಗಿ, ಆದಷ್ಟು ಬೇಗ ಶೂಟಿಂಗ್ ಮುಗಿಸಿ ಕೊಡೋ ಆಲೋಚನೆ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








