ರೀಮೇಕ್ ಸಿನಿಮಾ ಮಾಡುವುದೇಕೆ? ಪವನ್ ಕಲ್ಯಾಣ್ ಕೊಟ್ಟರು ಕಾರಣ
Pawan Kalyan: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇದೇ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ನಲ್ಲಿ ಮಾತನಾಡಿದ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ತಾವು ರೀಮೇಕ್ ಸಿನಿಮಾಗಳಲ್ಲಿ ಹೆಚ್ಚು ನಟಿಸಿರುವುದು ಏಕೆಂದು ವಿವರಿಸಿದ್ದಾರೆ. ಇದರ ಜೊತೆಗೆ ಪವನ್ ಕಲ್ಯಾಣ್ ನಟಿಸಿರುವ ರೀಮೇಕ್ ಸಿನಿಮಾಗಳ ಪಟ್ಟಿಯೂ ಇಲ್ಲಿದೆ.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಆರು ವರ್ಷದ ಹಿಂದೆಯೇ ಶುರುವಾಗಿದ್ದ ಈ ಸಿನಿಮಾ ಈಗ ಬಿಡುಗಡೆ ಕಾಣುತ್ತಿದೆ. ಹಲವು ಸಮಸ್ಯೆಗಳನ್ನು ಎದುರಿಸಿ ಅಂತಿಮವಾಗಿ ಜನರ ಮುಂದೆ ಬರಲು ಸಜ್ಜಾಗಿದೆ. ರಾಜಕೀಯದಲ್ಲಿ ಬ್ಯುಸಿ ಆಗಿರುವ ಪವನ್ ಕಲ್ಯಾಣ್, ಬಿಡುವು ಪಡೆದುಕೊಂಡು ನಿನ್ನೆಯಿಂದ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ನಿನ್ನೆ ಹೈದರಾಬಾದ್ನಲ್ಲಿ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಹಲವು ವಿಷಯಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.
ಅಭಿಮಾನಿಗಳಿಂದಲೇ ತಾವು ಸಿನಿಮಾ ಮತ್ತು ರಾಜಕೀಯದಲ್ಲಿ ನೆಲೆ ಕಂಡುಕೊಂಡಿರುವುದಾಗಿ ಹೇಳಿದ ಪವನ್ ಕಲ್ಯಾಣ್, ತಾವೊಬ್ಬ ಆಕ್ಸಿಡೆಂಟಲ್ ನಟ ಎಂದರು. ನನಗೆ ನಟನಾಗಬೇಕು, ರಾಜಕಾರಣಿ ಆಗಬೇಕು ಎಂದೇನೂ ಇರಲಿಲ್ಲ. ನಾನೊಬ್ಬ ಒಳ್ಳೆಯ ಪ್ರಜೆ ಆದರೆ ಸಾಕು ಎಂದಿತ್ತು ಆದರೆ ಪರಿಸ್ಥಿತಿ ನನ್ನನ್ನು ನಟನಾಗಿ, ರಾಜಕಾರಣಿಯಾಗಿ ಮಾಡಿತು. ಮತ್ತು ಎರಡೂ ಕ್ಷೇತ್ರದಲ್ಲಿ ನನ್ನ ಕೈಹಿಡಿದಿದ್ದು ಅಭಿಮಾನಿಗಳೇ ಎಂದರು.
ತಮ್ಮ ಸಿನಿಮಾ ವೃತ್ತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ‘ಅಭಿಮಾನಿಗಳು, ನೀವೇಕೆ ರೀಮೇಕ್ ಸಿನಿಮಾಗಳನ್ನೇ ಮಾಡುತ್ತೀರಿ’ ಎಂದು ಕೇಳುತ್ತಾರೆ. ನನಗೂ ಒರಿಜಿನಲ್ ಸಿನಿಮಾ, ದೊಡ್ಡ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಆದರೆ ಪರಿಸ್ಥಿತಿಗಳ ಕಾರಣಕ್ಕೆ ರೀಮೇಕ್ ಮಾಡಬೇಕಾಗಿದೆ. ನನ್ನ ರಾಜಕೀಯ ಪಕ್ಷ ನಡೆಸಲು ನನಗೆ ಹಣ ಬೇಕು, ನನ್ನ ಕುಟುಂಬವನ್ನು ನಡೆಸಲು ಹಣ ಬೇಕು, ಅದಕ್ಕಾಗಿ ಸಿನಿಮಾಗಳನ್ನು ಮಾಡಬೇಕು. ಹೆಚ್ಚು ಸಿನಿಮಾ ಮಾಡಬೇಕು. ಒರಿಜನಲ್ ಕತೆ, ಚಿತ್ರಕತೆಗಳಲ್ಲಿ ಹೆಚ್ಚಿನ ಸಮಯ ಹೋಗುತ್ತದೆ. ಗೆಲ್ಲುವ ಸಾಧ್ಯತೆ ಕಡಿಮೆ ಅದೇ ರೀಮೇಕ್ ಆದರೆ ಸುಲಭ, ಸಿನಿಮಾ ಬೇಗ ಮುಗಿಯುತ್ತದೆ ಗೆಲ್ಲುವ ಸಾಧ್ಯತೆ ಹೆಚ್ಚು ಹಾಗಾಗಿ ಅನಿವಾರ್ಯವಾಗಿ ನಾನು ರೀಮೇಕ್ ಹೆಚ್ಚು ಮಾಡುತ್ತೀನಿ’ ಎಂದಿದ್ದಾರೆ.
ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’: ಎಲ್ಲ ಗೊಂದಲಗಳಿಗೆ ತೆರೆ ಎಳೆದ ಪವನ್ ಕಲ್ಯಾಣ್
‘ಅಲ್ಲದೆ, ನನಗೆ ಯಾವ ದೊಡ್ಡ ನಿರ್ದೇಶಕರೂ ಸಹ ಸಿನಿಮಾ ಮಾಡುವುದಿಲ್ಲ ಅದಕ್ಕೆ ಸಿಕ್ಕ ನಿರ್ದೇಶಕರುಗಳ ಜೊತೆಗೆ ನಾನು ರೀಮೇಕ್ ಸಿನಿಮಾ ಮಾಡುತ್ತೀನಿ. ಅದು ನನಗೆ ಸುಲಭ ಎನಿಸುತ್ತದೆ. ಆದರೆ ನಿರ್ಮಾಪಕ ಎಎಂ ರತ್ನಮ್ ಅವರು ನನ್ನ ಜೊತೆಗೆ ‘ಖುಷಿ’ ಸಿನಿಮಾ ಮಾಡಿದ್ದರು. ಹಾಗಾಗಿ ಮತ್ತೆ ಒರಿಜಿನಲ್ ಕತೆಯೊಟ್ಟಿಗೆ ಸಿನಿಮಾ ಮಾಡಬೇಕು ಎಂದು ಪಟ್ಟು ಹಿಡಿದರು. ನಾನು ರೀಮೇಕ್ ಮಾಡುವ ಸಲಹೆಯನ್ನೇ ಅವರಿಗೆ ಕೊಟ್ಟಿದ್ದೆ. ಆದರೆ ಅವರು ಒಪ್ಪಲಿಲ್ಲ. ಬಳಿಕ ನಿರ್ದೇಶಕ ಕೃಶ್ ಅವರನ್ನು ಹಿಡಿದು ಕತೆ, ಚಿತ್ರಕತೆ ಮಾಡಿಸಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಮೊಘಲರ ದೌರ್ಜನ್ಯದ ಕತೆಯನ್ನು ಹೇಳುತ್ತದೆ. ಇದರಲ್ಲಿ ಕೊಹಿನೂರು ವಜ್ರದ ಕತೆಯೂ ಇದೆ’ ಎಂದಿದ್ದಾರೆ.
ಪವನ್ ಕಲ್ಯಾಣ್ ನಟಿಸಿರುವ ರೀಮೇಕ್ ಸಿನಿಮಾಗಳೆಂದರೆ ‘ಖುಷಿ’, ‘ಸುಸ್ವಾಗತಂ’, ‘ತಮ್ಮುಡು’, ‘ವಕೀಲ್ ಸಾಬ್’, ‘ಅನ್ನವರಂ’, ‘ಕಾಟಮರಾಯುಡು’, ‘ತೀನ್ಮಾರ್’, ‘ಬ್ರೋ’, ‘ಸರ್ದಾರ್ ಗಬ್ಬರ್ ಸಿಂಗ್’, ‘ಭೀಮ್ಲಾ ನಾಯಕ್’, ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’, ‘ಗೋಕುಲಂಲೊ ಸೀತಾ’, ‘ಗೋಪಾಲ ಗೋಪಾಲ’.
ಇದೀಗ ಪವನ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಪವನ್ ಜೊತೆಗೆ ನಿಧಿ ಅಗರ್ವಾಲ್, ಸನ್ನಿ ಡಿಯೋಲ್ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




