ಮೋಸ ಮಾಡಿ ಹಣ ದೋಚಿದ್ದಾರೆ: ಪವನ್ ಕಲ್ಯಾಣ್ ವಿರುದ್ಧ ತೆಲುಗು ಸಿನಿ ಪ್ರೇಮಿಗಳ ಆಕ್ರೋಶ
Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆದ ದಿನ ಭಾರಿ ಕಲೆಕ್ಷನ್ ಮಾಡಿತ್ತು ಆದರೆ ಎರಡನೇ ದಿನಕ್ಕೆ ಕಲೆಕ್ಷನ್ ಧಾರುಣವಾಗಿ ಕುಸಿದಿದೆ. ಸಿನಿಮಾ ನೋಡಿದ ಮಂದಿ ಪವನ್ ಕಲ್ಯಾಣ್ ಮತ್ತು ಚಿತ್ರತಂಡದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಕಳೆದ ಗುರುವಾರ ಭಾರಿ ನಿರೀಕ್ಷೆಗಳೊಟ್ಟಿಗೆ ಬಿಡುಗಡೆ ಆಗಿತ್ತು. ಮೊದಲ ದಿನ ಬಹು ನಿರೀಕ್ಷೆಗಳನ್ನಿಟ್ಟುಕೊಂಡು ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದಿದ್ದರು. ಆದರೆ ‘ಹರಿ ಹರ ವೀರ ಮಲ್ಲು’ ಸಿನಿಮಾ ನಿರೀಕ್ಷೆಗಳನ್ನೆಲ್ಲ ಹುಸಿ ಮಾಡಿದೆ. ಸಿನಿಮಾದ ಪ್ರೊಡಕ್ಷನ್ ಡಿಸೈನ್, ಗ್ರಾಫಿಕ್ಸ್, ವಿಎಫ್ಎಕ್ಸ್, ಕತೆ, ಚಿತ್ರಕತೆ ಎಲ್ಲವೂ ಕಳಪೆಯಾಗಿದೆ. ಪವನ್ ಕಲ್ಯಾಣ್ ಅವರ ಅತ್ಯಂತ ಕಳಪೆ ಸಿನಿಮಾ ಎಂಬ ಅಪಖ್ಯಾತಿಗೆ ‘ಹರಿ ಹರ ವೀರ ಮಲ್ಲು’ ಗುರಿಯಾಗಿದೆ. ಅದರ ಬೆನ್ನಲ್ಲೆ ಸಿನಿಮಾದ ವಿರುದ್ಧ ಅದರಲ್ಲೂ ಪವನ್ ವಿರುದ್ಧ ಸಿನಿಮಾ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆಗೆ ಮುಂಚಿತವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳಿಂದ ಅನುಮತಿ ಪಡೆದುಕೊಂಡು ಚಿತ್ರಮಂದಿರಗಳ ಟಿಕೆಟ್ ದರಗಳನ್ನು ಹೆಚ್ಚಿಸಿಕೊಳ್ಳಲಾಗಿತ್ತು. ವಿಶೇಷ ಪ್ರೀಮಿಯರ್ ಶೋಗಳಿಗೆ ಅನುಮತಿ ಪಡೆದುಕೊಂಡು ತೆಲಂಗಾಣ, ಆಂಧ್ರ ಪ್ರದೇಶದಾದ್ಯಂತ ವಿಶೇಷ ಪ್ರೀಮಿಯರ್ ಶೋಗಳನ್ನು ಹಿಂದಿನ ರಾತ್ರಿಯೇ ಹಾಕಲಾಗಿತ್ತು. ಪ್ರೀಮಿಯರ್ ಶೋಗೆ ಕೆಲವೆಡೆ 800-900 ರೂಪಾಯಿ ಟಿಕೆಟ್ ಇರಿಸಲಾಗಿತ್ತು. ಪ್ರಿಮಿಯರ್ ಶೋ ಟಿಕೆಟ್ಗಳೆಲ್ಲ 500 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು. ಅಷ್ಟು ದೊಡ್ಡ ಮೊತ್ತ ಕೊಟ್ಟು ಸಿನಿಮಾ ನೋಡಿದವರಿಗೆ ಭಾರಿ ನಿರಾಸೆ ಆಗಿದೆ.
ಸಿನಿಮಾ ನೋಡಿ ಹೊರಬಂದವರು, ಇಷ್ಟು ಕೆಟ್ಟ ಸಿನಿಮಾ ಮಾಡಿರುವುದಲ್ಲದೆ, ಜನರಿಂದ ದುಡ್ಡು ದೋಚಲು ಪ್ರೀಮಿಯರ್ ಶೋ ಇಟ್ಟು ಅದಕ್ಕೆ 800-900 ರೂಪಾಯಿ ಟಿಕೆಟ್ ವಸೂಲಿ ಮಾಡಲಾಗಿದೆ. ನಾವು ಎಂಥಹಾ ಸಿನಿಮಾ ಮಾಡಿದ್ದೀವಿ ಎಂಬುದು ಚಿತ್ರತಂಡದವರಿಗೆ ಮೊದಲೇ ಗೊತ್ತಿರುತ್ತದೆ. ಹಾಗಿದ್ದರೂ ಸಹ ಆರಂಭದ ಮೂರು ದಿನಗಳಲ್ಲೇ ಹಾಕಿರುವ ಹಣವನ್ನೆಲ್ಲ ಜನರಿಂದ ದೋಚುವ ಉದ್ದೇಶದಿಂದ ಹೀಗೆ ಟಿಕೆಟ್ ಬೆಲೆ ಹೆಚ್ಚು ಮಾಡಲಾಗಿದೆ. ಟಿಕೆಟ್ ಬೆಲೆ ಹೆಚ್ಚು ಮಾಡಿದಾಗ ಅದಕ್ಕೆ ತಕ್ಕಂತೆ ಸಿನಿಮಾ ಸಹ ಕೊಡಬೇಕು’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಬಾಕ್ಸ್ ಆಫೀಸ್ ಕಲೆಕ್ಷನ್; ಮೊದಲ ದಿನ ಭರ್ಜರಿ, ಎರಡನೇ ದಿನ ಒಂದಂಕಿ ಗಳಿಕೆ
ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆಗಳು ವ್ಯಕ್ತವಾಗುತ್ತಿವೆ. ಸಿನಿಮಾ ನೋಡಿದ ಬಹುತೇಕರು, ಸಿನಿಮಾದಲ್ಲಿ ಬಳಸಲಾಗಿರುವ ಕಳಪೆ ವಿಎಫ್ಎಕ್ಸ್ ಬಗ್ಗೆ ದೂರಿದ್ದಾರೆ. ಸಿನಿಮಾದ ದ್ವಿತೀಯಾರ್ಧದ ಬಗ್ಗೆಯೂ ಸಹ ಹಲವಾರು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಹೇಗೋ ಹೋಗುತ್ತಿದ್ದ ಕತೆಯನ್ನು ಪವನ್ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಂಡಿದ್ದಾರೆ ಎಂದು ಇನ್ನು ಕೆಲವರು ಟೀಕೆ ಮಾಡಿದ್ದಾರೆ. ಒಟ್ಟಾರೆ ಸಿನಿಮಾದ ಕಲೆಕ್ಷನ್ ಅಂತೂ ಕೇವಲ ಎರಡೇ ದಿನಕ್ಕೆ ಒಂದಂಕಿಗೆ ಕುಸಿದಿದ್ದು, ಇನ್ನೊಂದು ವಾರದಲ್ಲಿ ಚಿತ್ರಮಂದಿರಗಳಿಂದಲೇ ಸಿನಿಮಾ ಗಾಯಬ್ ಆಗಲಿದೆ.
ಮೊದಲ ದಿನ ಬರೋಬ್ಬರಿ 47 ಕೋಟಿ ರೂಪಾಯಿಗಳನ್ನು ‘ಹರಿ ಹರ ವೀರ ಮಲ್ಲು’ ಸಿನಿಮಾ ಗಳಿಕೆ ಮಾಡಿತ್ತು. ಎರಡನೇ ದಿನಕ್ಕೆ ವೀಕೆಂಡ್ ಇದ್ದರೂ ಸಹ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿದಿದ್ದು ಕೇವಲ 8 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಬೀಳುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Sat, 26 July 25




