ನಟ ಸಾಯಿ ಧರಮ್ತೇಜ್ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿದ ಪೊಲೀಸರು
Sai Dharam Tej: ಬೈಕ್ ಅಪಘಾತದಲ್ಲಿ ಗಾಯಗೊಂಡು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟಾಲಿವುಡ್ ನಟ ಸಾಯಿ ಧರಮ್ತೇಜ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಟ ಸಾಯಿ ಧರಮ್ತೇಜ್ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದರಾಬಾದ್‌ನ ರಾಯದುರ್ಗ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 336, 184 ಎಂವಿ ಕಾಯ್ದೆಯಡಿ ಅತಿವೇಗ, ನಿರ್ಲಕ್ಷ್ಯ ಆರೋಪದಡಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ನಿನ್ನೆ ರಾತ್ರಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ, ತೆಲುಗಿನ ಈ ನಟ ಅಪಘಾತಕ್ಕೆ ತುತ್ತಾಗಿದ್ದರು. ಈ ವೇಳೆ ಅವರು ಹೆಲ್ಮೆಟ್ ಧರಿಸಿದ್ದರು ಮತ್ತು ಆಲ್ಕೊಹಾಲ್ ಸೇವನೆ ಮಾಡಿರಲಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಪ್ರಸ್ತುತ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟನನ್ನು ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವುದಕ್ಕೆ ಸ್ಪಷ್ಟನೆ ನೀಡಿದ ಆಸ್ಪತ್ರೆ: ನಟ ಸಾಯಿ ಧರಮ್ತೇಜ ಅವರನ್ನು ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವುದಕ್ಕೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಕಾರಣ, ಕುಟುಂಬದ ಸದಸ್ಯರು, ಸಾಯಿ ಅವರಿಗೆ ಗಂಭೀರ ಗಾಯಗಳಾಗಿಲ್ಲ ಎಂದಿದ್ದರೂ ಕೂಡ, ವೆಂಟಿಲೇಟರ್ನಲ್ಲಿ ಏಕೆ ಇಟ್ಟಿದ್ದಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಸ್ಪತ್ರೆಯಿಂದ ಸ್ಪಷ್ಟನೆ ಲಭ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಸದ್ಯ ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೂಡ ಆಸ್ಪತ್ರೆಯ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಅಪಘಾತವಾದ ನಂತರ, ನಟ ಸಾಯಿ ಧರಮ್ತೇಜ ಅವರಿಗೆ, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ತಮ್ಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಖಾಸಗಿ ಆಸ್ಪತ್ರೆ ತಿಳಿಸಿದೆ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಗಮನಿಸಲಾಗುವುದು. ಸದ್ಯಕ್ಕೆ ವೆಂಟಿಲೇಟರ್ನಲ್ಲಿ ತೇಜ್ಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ‘‘ವೆಂಟಿಲೇಟರ್ನಲ್ಲಿಟ್ಟಿದ್ದೇವೆ ಎಂದಾಕ್ಷಣ ಆತಂಕ ಪಡಬೇಡಿ. ಅಪಘಾತದಲ್ಲಿ ಗಾಯಗೊಂಡರೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡುವುದು ಸಾಮಾನ್ಯ’’ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಸಾಯಿ ಧರಮ್ತೇಜ್ ಓಡಿಸುತ್ತಿದ್ದ ಬೈಕ್ ಯಾರದ್ದು?: ನಟ ಸಾಯಿ ಧರಮ್ತೇಜ್ ಬೈಕ್ ಅಪಘಾತವಾಗ ಅವರು ಓಡಿಸುತ್ತಿದ್ದ ಬೈಕ್ ಅನಿಲ್ ಕುಮಾರ್ ಎಂಬುವರ ಹೆಸರಿನಲ್ಲಿ ನೋಂದಣಿಯಾಗಿದೆ. ಟಿಎಸ್ 07 ಜಿಜೆ 1258 ನೋಂದಣಿಯ ಟ್ರಯಂಪ್ ಬೈಕ್ ಅದಾಗಿದ್ದು, 1160 ಸಿಸಿಯ 18 ಲಕ್ಷ ರೂ. ಮೌಲ್ಯ ಹೊಂದಿದೆ. ಈ ಬೈಕ್ನಲ್ಲಿ ನಟ ಚಾಲನೆ ಮಾಡುತ್ತಿದ್ದಾಗ, ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್ ಬಳಿ ಅಪಘಾತವಾಗಿದೆ. ಇದಕ್ಕೆ ನಿರ್ಮಾಣ ಕಾರ್ಯ ನಡೆಯುತ್ತಿದ್ದುದರಿಂದ ಸ್ಥಳದಲ್ಲಿ ಬಿದ್ದಿದ್ದ ಮರಳು ಕಾರಣ ಎಂದು ಮೂಲವೊಂದು ತಿಳಿಸಿದೆ. ಪ್ರಸ್ತುತ ನಟ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಇದನ್ನೂ ಓದಿ:
ಚಿರಂಜೀವಿ ಅಳಿಯ ಸಾಯಿ ಧರಮ್ ತೇಜ್ ಆಕ್ಸಿಡೆಂಟ್ನ ಸಿಸಿಟಿವಿ ದೃಶ್ಯ; ಹೆಲ್ಮೆಟ್ನಿಂದ ಬಚಾವ್
Sai Dharam Tej: ನಟ ಸಾಯಿ ಧರಮ್ತೇಜ್ ಬೈಕ್ ಸ್ಕಿಡ್ ಆಗಲು ಕಾರಣವೇನು?; ಇಲ್ಲಿದೆ ಮಾಹಿತಿ
(Police filed a case against Sai Dharam Tej for rash driving and negligence)