ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟನೆಯ ‘ರಾಧೆ ಶ್ಯಾಮ್’ ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಮಾರ್ಚ್ 11ರಂದು ‘ರಾಧೆ ಶ್ಯಾಮ್’ ತೆರೆಕಾಣಲಿದ್ದು, ಬಿಡುಗಡೆಗೆ ಇಂದು ಹೊರತುಪಡಿಸಿದರೆ ಇರೋದು ಕೇವಲ ಒಂದು ದಿನ. ಆದರೆ ಚಿತ್ರದ ಬಗ್ಗೆ ಒಂದಷ್ಟು ದೊಡ್ಡ ಗಾಸಿಪ್ಗಳೂ ಹರಿದಾಡುತ್ತಿವೆ. ಅದರಲ್ಲಿ ಒಂದು ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವಿನ ವೈಮನಸ್ಸು. ಇತ್ತೀಚೆಗೆ ಪ್ರಿರಿಲೀಸ್ ಈವೆಂಟ್ನಲ್ಲಿ ಈರ್ವರೂ ನಗುತ್ತಲೇ ಮಾತನಾಡಿದ್ದರು. ‘ಅದೆಲ್ಲಾ ತೋರಿಕೆಗೆ, ಈರ್ವರ ನಡುವೆ ಯಾವುದೂ ಸರಿಯಿಲ್ಲ’ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಈ ಕುರಿತು ಹಲವು ವರದಿಗಳೂ ಬಂದಿದ್ದವು. ಈ ಗಾಸಿಪ್ ಜೋರಾಗುತ್ತಿರುವಂತೆಯೇ ಪೂಜಾ ಹೆಗ್ಡೆ ಈ ಎಲ್ಲವಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ. ಮೌನ ಮುರಿದಿರುವ ಅವರು ಪ್ರಭಾಸ್ ಜತೆಗೆ ನಿಜವಾಗಿಯೂ ಸಂಬಂಧ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಪೂಜಾ ಹೆಗ್ಡೆ ನಟ ಪ್ರಭಾಸ್ರನ್ನು ಗುಣಗಾನ ಮಾಡಿದ್ದು, ‘ಅವರು ಬಹಳ ಒಳ್ಳೆಯ ಮನುಷ್ಯ’ ಎಂದು ಹೊಗಳಿದ್ದಾರೆ. ಅಲ್ಲದೇ ಹೊಸ ವಿಚಾರ ಹಂಚಿಕೊಂಡಿರುವ ಪೂಜಾ, ತಮಗೆ ಹಾಗೂ ತಾಯಿಗೆ ಪ್ರಭಾಸ್ ಮನೆಯಲ್ಲೇ ತಯಾರಿಸಿದ ತಿನಿಸುಗಳನ್ನು ತಂದುಕೊಡುತ್ತಿದ್ದರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ಪ್ರಭಾಸ್ ಜತೆ ಕೆಲಸ ಮಾಡುವುದು ನಿಜವಾಗಿಯೂ ಬಹಳ ಖುಷಿಯ ವಿಚಾರವಾಗಿತ್ತು ಎಂದಿರುವ ನಟಿ, ವದಂತಿಗಳಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.
ಸೆಟ್ನಲ್ಲಿ ಪೂಜಾ ಹೆಗ್ಡೆ ಟೈಂ ವೇಸ್ಟ್ ಮಾಡುತ್ತಾರೆ ಎಂದು ಪ್ರಭಾಸ್ಗೆ ಅಸಮಾಧಾನ ಇತ್ತು. ಇದನ್ನು ಹೇಳಿದಾಗ ಅವರು ಆ್ಯಟಿಟ್ಯೂಡ್ ತೋರಿಸಿದ್ದರು. ಈ ವಿಚಾರದಲ್ಲಿ ಪ್ರಭಾಸ್ ಅವರು ಪೂಜಾ ಹೆಗ್ಡೆ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಈ ವಿಚಾರವನ್ನು ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಅಲ್ಲಗಳೆದಿತ್ತು. ಇದೀಗ ಪೂಜಾ ಕೂಡ ಎಲ್ಲವೂ ಸರಿಯಿದೆ ಎಂಬಂತೆ ಮಾತನಾಡಿದ್ದಾರೆ. ಅದಾಗ್ಯೂ ಪ್ರಭಾಸ್ ಈ ಬಗ್ಗೆ ಮೌನವನ್ನೇ ತಾಳಿದ್ದಾರೆ. ಹೀಗಾಗಿ ಪೂಜಾ ಸ್ಪಷ್ಟನೆ ಬಳಿಕವೂ ಈ ವಿಚಾರ ಮತ್ತೆ ತಲೆಎತ್ತಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಮಾರ್ಚ್ 11ಕ್ಕೆ ತೆರೆಗೆ ಬರುತ್ತಿರುವ ‘ರಾಧೆ ಶ್ಯಾಮ್’ 1970ರ ಕಾಲಘಟ್ಟದಲ್ಲಿ ನಡೆಯುವ ಕಥಾನಕ. ಯುರೋಪ್ ಭೂಮಿಕೆಯಲ್ಲಿ ಕತೆ ಸಾಗಲಿದೆ. ಪ್ರಭಾಸ್ ಹಸ್ತ ಸಾಮುದ್ರಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾರತೀಯ ಚಿತ್ರರಂಗದಲ್ಲಿ ಇಂತಹ ಕತೆಯನ್ನಿಟ್ಟುಕೊಂಡು ಪ್ರಯೋಗ ಮಾಡುತ್ತಿರುವುದು ಬಹಳ ವಿರಳವೆಂದೇ ಹೇಳಬೇಕು. ಇದಕ್ಕೆ ಟ್ರೇಲರ್ ಕೂಡ ಸಾಕ್ಷಿ ಒದಗಿಸಿದೆ.
‘ರಾಧೆ ಶ್ಯಾಮ್’ ಕನ್ನಡ ಟ್ರೇಲರ್ ಇಲ್ಲಿದೆ:
‘ರಾಧೆ ಶ್ಯಾಮ್’ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಶಿವರಾಜ್ಕುಮಾರ್ ಕನ್ನಡ ಅವತರಣಿಕೆಯನ್ನು ನಿರೂಪಿಸಿದ್ದಾರೆ. ಟ್ರೇಲರ್ನಲ್ಲೂ ಶಿವಣ್ಣನ ಧ್ವನಿ ಇತ್ತು. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ನಿರೂಪಿಸುತ್ತಿದ್ದಾರೆ. ಉಳಿದ ಭಾಷೆಗಳಿಗೆ ರಾಜಮೌಳಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಧ್ವನಿ ನೀಡಿದ್ದಾರೆ. ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸಿದೆ.
ಇದನ್ನೂ ಓದಿ:
‘ಮೆಹಬೂಬಾ..’ ಹಾಡಿಗೆ ಅತೀ ಕೆಟ್ಟದಾಗಿ ಡಾನ್ಸ್ ಮಾಡಿದ ರಾನು ಮಂಡಲ್; ನೆಟ್ಟಿಗರಿಂದ ಛೀಮಾರಿ
Salman Khan: ‘ನನ್ನೆಲ್ಲಾ ಪ್ರೇಯಸಿಯರಿಗೆ ಮದುವೆಯಾಗಿದೆ’ ಎಂದು ಅಲವತ್ತುಕೊಂಡ ಸಲ್ಮಾನ್ ಖಾನ್; ಮುಂದಿನ ಕತೆ ಏನು?