
ತಮಿಳು ಚಿತ್ರರಂಗದ ಪಾಲಿಗೆ ಕಹಿ ಸುದ್ದಿ ಕೇಳಿಬಂದಿದೆ. ಕಾಲಿವುಡ್ನಲ್ಲಿ ಜನಪ್ರಿಯರಾಗಿದ್ದ ಹಾಸ್ಯ ಕಲಾವಿದ ಮಯಿಲ್ಸಾಮಿ (Comedy Actor Mayilsamy) ಅವರು ನಿಧನರಾಗಿದ್ದಾರೆ. ಭಾನುವಾರ (ಫೆ.19) ಬೆಳಗ್ಗೆ ಅವರು ಕೊನೆಯುಸಿರು ಎಳೆದರು ಎಂದು ತಿಳಿದು ಬಂದಿದೆ. ಅವರ ಸಾವಿನ ಸುದ್ದಿಯನ್ನು ಕಲಾವಿದರ ಸಂಘವು ಖಚಿತಪಡಿಸಿದೆ. ಹೃದಯಾಘಾತದಿಂದ (Heart Attack) ಮಯಿಲ್ಸಾಮಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಖ್ಯಾತ ಕಲಾವಿದನ ನಿಧನಕ್ಕೆ ತಮಿಳು ಚಿತ್ರರಂಗದ ಅನೇಕರು ಕಂಬಿನಿ ಮಿಡಿದಿದ್ದಾರೆ. ನಟ ಕಮಲ್ ಹಾಸನ್ (Kamal Haasan), ಆರ್. ಶರತ್ಕುಮಾರ್, ಸಾಕ್ಷಿ ಅಗರ್ವಾಲ್ ಮುಂತಾದವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಮಯಿಲ್ಸಾಮಿ ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇತ್ತು. ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಮನೆಮಾತಾಗಿದ್ದರು. ಅಜಿತ್ ಕುಮಾರ್, ಕಮಲ್ ಹಾಸನ್, ದಳಪತಿ ವಿಜಯ್ ಸೇರಿಂದ ಅನೇಕ ಸ್ಟಾರ್ ಹೀರೋಗಳ ಜೊತೆ ಅವರು ನಟಿಸಿದ್ದರು. ಕಿರುತೆರೆಯ ಅನೇಕ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸಿದ್ದರು. ತಮಿಳು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.
ಇದನ್ನೂ ಓದಿ: Heart Attack: ತೆಂಗಿನಕಾಯಿ ಕೀಳಲು ಮರ ಏರಿದ್ದ ವ್ಯಕ್ತಿಗೆ ಮರದಲ್ಲೇ ಹೃದಯಾಘಾತ, ಸಾವು
‘ತಮ್ಮದೇ ಶೈಲಿಯಲ್ಲಿ ಹಾಸ್ಯ ನಟನೆ ಮಾಡುವುದರಲ್ಲಿ ನನ್ನ ಸ್ನೇಹಿತ ಮಯಿಲ್ಸಾಮಿ ಅವರು ಯಶಸ್ವಿ ಆಗಿದ್ದರು. ಎಲ್ಲರಿಗೂ ಅವರು ಸಹಕಾರ ನೀಡುತ್ತಿದ್ದರು. ಅವರಿಗೆ ನನ್ನ ನಮನಗಳು’ ಎಂದು ಕಮಲ್ ಹಾಸನ್ ಅವರು ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಇನ್ನೋರ್ವ ಫೇಮಸ್ ನಟ ಆರ್. ಶರತ್ ಕುಮಾರ್ ಕೂಡ ಸಂತಾಪ ಸೂಚಿಸಿದ್ದಾರೆ. ‘ಉತ್ತಮ ಸ್ನೇಹಿತ, ಒಳ್ಳೆಯ ಮನುಷ್ಯ, ಪರೋಪಕಾರಿ ಆಗಿದ್ದ ಮಯಿಲ್ಸಾಮಿ ನಿಧನದ ಸುದ್ಧಿ ತಿಳಿದು ಆಘಾತ ಆಯಿತು. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಚಿತ್ರರಂಗದ ಸಹೋದ್ಯೋಗಿಗಳಿಗೆ ನನ್ನ ಸಂತಾಪಗಳು’ ಎಂದು ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
நகைச்சுவை நடிப்பில் தனக்கென்று ஒரு பாணியை முன்னிறுத்தி வெற்றி கண்டவர் நண்பர் மயில்சாமி. உதவும் சிந்தையால் பலராலும் நினைக்கப்படுவார். அன்பு நண்பருக்கென் அஞ்சலி #Mayilsamy
— Kamal Haasan (@ikamalhaasan) February 19, 2023
ನಟಿ ಸಾಕ್ಷಿ ಅಗರ್ವಾಲ್ ಕೂಡ ಮಯಿಲ್ಸಾಮಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಈ ಸುದ್ದಿ ಕೇಳಿ ಆಘಾತ ಆಯಿತು. ನಿಮ್ಮ ಹಾಸ್ಯ ಪ್ರಜ್ಞೆ ಮತ್ತು ಪಾಸಿಟಿವ್ ಗುಣದಿಂದಾಗಿ ಶೂಟಿಂಗ್ ಸ್ಥಳದಲ್ಲಿ ಯಾವಾಗಲೂ ನಗು ಮತ್ತು ಖುಷಿ ತುಂಬಿರುತ್ತಿತ್ತು. ಮಯಿಲ್ಸಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಂತಾಪಗಳು’ ಎಂದು ಸಾಕ್ಷಿ ಅಗರ್ವಾಲ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Anekal: ಕಾಲೇಜಿನಲ್ಲಿ ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
‘ವೀರಂ’, ‘ಕಾಂಚನ’, ‘ವಸೀಗಾರ’, ‘ಗಿರಿ’, ‘ಗಿಲ್ಲಿ’ ಮುಂತಾದ ಸಿನಿಮಾಗಳಲ್ಲಿ ಮಯಿಲ್ಸಾಮಿ ನಟಿಸಿದ್ದರು. ತಮಿಳುನಾಡು ಸರ್ಕಾರ ನೀಡುವ ‘ಅತ್ಯುತ್ತಮ ಹಾಸ್ಯನಟ’ ರಾಜ್ಯ ಪ್ರಶಸ್ತಿ ಕೂಡ ಅವರಿಗೆ ಸಿಕ್ಕಿತ್ತು. ರಂಗಭೂಮಿ ಕಲಾವಿದನಾಗಿ, ಸ್ಟ್ಯಾಂಡಪ್ ಕಾಮಿಡಿಯನ್ ಆಗಿಯೂ ಅವರು ಗುರುತಿಸಿಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:47 pm, Sun, 19 February 23