ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆ ಮಿತಿ ಮೀತಿ ಹರಡುತ್ತಿದೆ. ಜತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇಂದು ಒಂದೇ ದಿನ ಭಾರತದಲ್ಲಿ 2.92 ಲಕ್ಷ ಹೊಸ ಕೊರೊನಾ ಕೇಸ್ಗಳು ವರದಿ ಆಗಿವೆ. ಕೊರೊನಾ ವೈರಸ್ನಿಂದ ಚಿತ್ರರಂಗ ಕೂಡ ಸಂಕಷ್ಟಕ್ಕೆ ತುತ್ತಾಗಿದೆ. ಈ ಮಧ್ಯೆ, ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಕೊರೊನಾ ವೈರಸ್ ತಗುಲಿ ಮೃತಪಡುತ್ತಿದ್ದಾರೆ. 2,000 ಚಿತ್ರಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದ ಹಾಗೂ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮಸ್ತಾನ್ ಕೊರೊನಾ ಸೋಂಕಿಗೆ ತುತ್ತಾಗಿ ನಿಧನರಾಗಿದ್ದಾರೆ.
ಮಸ್ತಾನ್ ಅವರಿಗೆ 63 ವರ್ಷ ವಯಸ್ಸಾಗಿತ್ತು. ಸುಮಾರು 42 ವರ್ಷಗಳಿಂದ ಚಿತ್ರರಂಗದಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಸಾವಿರಾರು ಕನ್ನಡ ಚಲನಚಿತ್ರಗಳ ಚಿತ್ರ ವಿನ್ಯಾಸಕಾರರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಶುಕ್ಲಾಂಬರದರಂ, ಕಲ್ಲೇಶಿ ಮಲ್ಲೇಶಿ, ಸಿತಾರ ಎಂಬ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಸುಮಾರು 2,000 ಚಿತ್ರಗಳಿಗೆ ಡಿಸೈನರ್ ಆಗಿ ನಿರ್ವಹಿಸಿದ್ದು ಅವರ ಹೆಚ್ಚುಗಾರಿಕೆ. ಮಸ್ತಾನ್ ಅವರಿಗೆ ಇತ್ತೀಚೆಗೆ ಕೊರೊನಾ ವೈರಸ್ ಅಂಟಿತ್ತು. ಹೀಗಾಗಿ ಅವರನ್ನು ಹೆಸರುಘಟ್ಟ ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಮಸ್ತಾನ್ ಅವರ ಅಗಲಿಕೆಗೆ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ. ಕನ್ನಡ ಚಿತ್ರರಂಗದ ನಿರ್ದೇಶಕರು ಹಾಗೂ ಕಲಾವಿದರು ಅವರ ಆತ್ಮಕ್ಕೆ ಶಾಂತಿಕೋರಿದ್ದಾರೆ. ಕೊರೊನಾ ಎರಡನೇ ಅಲೆಗೆ ಅನೇಕ ಸೆಲೆಬ್ರಿಟಿಗಳು ಕೂಡ ನಿಧನರಾಗುತ್ತಿದ್ದಾರೆ. ಹಿರಿಯ ನಟ ಕಿಶೋರ್ ನಂದಲಸ್ಕರ್ ಅವರು ಮಂಗಳವಾರ (ಏ.20) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದರು. ಹಿಂದಿ ಮತ್ತು ಮರಾಠಿ ಸಿನಿಮಾಗಳ ಮೂಲಕ ಕಿಶೋರ್ ನಂದಲಸ್ಕರ್ ಫೇಮಸ್ ಆಗಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಿಶೋರ್ ನಿಧನರಾದ ಸುದ್ದಿಯನ್ನು ಅವರು ಮೊಮ್ಮಗ ಖಚಿತಪಡಿಸಿದ್ದಾರೆ. ಕಳೆದ ಬುಧವಾರ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಏ.20ರಂದು ಮಧ್ಯಾಹ್ನ 12.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದರು.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಬೆನ್ನಲ್ಲೇ ರೈಡರ್ ಚಿತ್ರತಂಡಕ್ಕೂ ಕೊರೊನಾ