‘ಆದಿಪುರುಷ್’ ಸಿನಿಮಾ (Adipurush Movie) ಕಳೆದ ತಿಂಗಳು ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಮೆಚ್ಚುಗೆ ಪಡೆಯಬಹುದು ಎಂಬುದು ಚಿತ್ರತಂಡದ ಆಲೋಚನೆ ಆಗಿತ್ತು. ಆದರೆ, ಹಾಗಾಗಲೇ ಇಲ್ಲ. ರಾಮಾಯಣದ (Ramayana) ಕಥೆ ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಸಿನಿಮಾಗೆ ಸಾಕಷ್ಟು ಹಿನ್ನಡೆ ಆಯಿತು. ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲೇ ಚಿತ್ರಕ್ಕೆ ಹಿನ್ನಡೆ ಆಗುವಂಥ ಘಟನೆ ನಡೆದಿದೆ. ಇದು ತಂಡದ ಆತಂಕ ಹೆಚ್ಚಿಸಿದೆ.
ಇತ್ತೀಚೆಗೆ ಪೈರಸಿ ಕಾಟ ಜೋರಾಗಿದೆ. ಯಾವುದೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆದರೆ ಅದರ ಥಿಯೇಟರ್ ಪ್ರಿಂಟ್ ಆನ್ಲೈನ್ನಲ್ಲಿ ಲೀಕ್ ಆಗುತ್ತದೆ. ಆದರೆ, ಎಚ್ಡಿ ಪ್ರಿಂಟ್ ಬೇಕು ಎಂದರೆ ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುವವರೆಗೆ ಕಾಯಲೇಬೇಕು. ಆದರೆ, ‘ಆದಿಪುರುಷ್’ ವಿಚಾರದಲ್ಲಿ ಹಾಗಾಗಿಲ್ಲ. ಸಿನಿಮಾ ಒಟಿಟಿಗೆ ರಿಲೀಸ್ ಆಗುವ ಮೊದಲೇ ಎಚ್ಡಿ ಪ್ರಿಂಟ್ ಸೋರಿಕೆ ಆಗಿದೆ. ಕೆಲವರು ಇದನ್ನು ಯೂಟ್ಯೂಬ್ನಲ್ಲೂ ಅಪ್ಲೋಡ್ ಮಾಡಿದ್ದಾರೆ.
ಥಿಯೇಟರ್ನಲ್ಲಿ ಸೋತ ಸಿನಿಮಾಗಳು ಒಟಿಟಿಯಲ್ಲಿ ಮೆಚ್ಚುಗೆ ಪಡೆದ ಉದಾಹರಣೆ ಇದೆ. ಈಗ ‘ಆದಿಪರುಷ್’ ತಂಡ ಕೂಡ ಅದೇ ಭರವಸೆಯಲ್ಲಿ ಇದೆ. ಹೀಗಿರುವಾಗಲೇ ಸಿನಿಮಾದ ಎಚ್ಡಿ ಪ್ರಿಂಟ್ ಲೀಕ್ ಆಗಿದ್ದು, ಒಂದಷ್ಟು ಮಂದಿ ಇದನ್ನೇ ಡೌನ್ಲೋಡ್ ಮಾಡಿಕೊಂಡು ನೋಡುತ್ತಿದ್ದಾರೆ. ಇನ್ನು, ಯೂಟ್ಯೂಬ್ನಲ್ಲೂ ಇದೇ ವಿಡಿಯೋ ಅಪ್ಲೋಡ್ ಆಗಿತ್ತು. ಒಂದು ಗಂಟೆಯ ಬಳಿಕ ಅದನ್ನು ಡಿಲೀಟ್ ಮಾಡಿಸಲಾಗಿದೆ.
ಇದನ್ನೂ ಓದಿ: ‘ಆದಿಪುರುಷ್’ ಬಾಕ್ಸ್ ಆಫೀಸ್ ಲೆಕ್ಕಾಚಾರ ಫೇಕ್? ಮೂಡಿದೆ ಅನುಮಾನ
‘ಆದಿಪುರುಷ್’ ಚಿತ್ರಕ್ಕೆ ಓಂ ರಾವತ್ ಅವರ ನಿರ್ದೇಶನ ಇದೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡರೆ, ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅವರು ಅಬ್ಬರಿಸಿದ್ದಾರೆ. ಅವರ ಪಾತ್ರವನ್ನು ಅನೇಕರು ಟೀಕೆ ಮಾಡಿದ್ದಾರೆ. ಸಿನಿಮಾದಲ್ಲಿ ಅನಾವಶ್ಯಕ ಗ್ಲಾಮರ್ ತುರುಕಿದ್ದು, ಹನುಮಂತನ ಸಂಭಾಷಣೆ ಸೇರಿ ಅನೇಕ ವಿಚಾರಗಳನ್ನು ಟೀಕೆ ಮಾಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ