
ಪ್ರಭಾಸ್ (Prabhas) ನಟನೆಯ ಸಿನಿಮಾ ಬಿಡುಗಡೆ ಆಗಿ ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಅವರ ಮುಂದಿನ ಸಿನಿಮಾ ‘ದಿ ರಾಜ್ ಸಾಬ್’ ಈಗಾಗಲೇ ಎರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಇದೇ ವರ್ಷ ‘ದಿ ರಾಜ್ ಸಾಬ್’ ಬಿಡುಗಡೆ ಆಗಲಿದೆ. ಪ್ರಭಾಸ್ ‘ದಿ ರಾಜ್ ಸಾಬ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಅದರ ಜೊತೆಗೆ ‘ಫೌಜಿ’ ಸಿನಿಮಾದ ಚಿತ್ರೀಕರಣವನ್ನೂ ಬಹುತೇಕ ಪೂರ್ಣಗೊಳಿಸಿದ್ದಾರೆ. ಇದೀಗ ಪ್ರಭಾಸ್ ನಟನೆಯ ಮತ್ತೊಂದು ಸಿನಿಮಾದ ಚಿತ್ರೀಕರಣದ ದಿನಾಂಕ ಹೊರಬಿದ್ದಿದೆ.
ತಮ್ಮ ವೈಯಲೆಂಟ್, ಔಟ್ ಆಧಿ ಬಾಕ್ಸ್ ಸಿನಿಮಾಗಳಿಂದ ಹೆಸರಾಗಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾನಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಸ್ಪಿರಿಟ್’ ಎಂದು ಹೆಸರಿಟ್ಟಿದ್ದು ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಸಂದೀಪ್ ಅವರು ಸಿನಿಮಾದ ಚಿತ್ರೀಕರಣಕ್ಕೆ ಎಲ್ಲ ಸಜ್ಜಾಗಿದ್ದು, ಸಿನಿಮಾದ ಚಿತ್ರೀಕರಣ ಯಾವಾಗಿನಿಂದ ಪ್ರಾರಂಭ ಆಗಲಿದೆ ಎಂಬುದನ್ನು ಇತ್ತೀಚೆಗಿನ ಸಂದರ್ಶನದಲ್ಲಿ ಹೇಳೀಕೊಂಡಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾದ ಪ್ರಚಾರಕ್ಕಾಗಿ ಮಾಡಿದ್ದ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿರುವ ಸಂದೀಪ್ ರೆಡ್ಡಿ ವಂಗಾ, ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭ ಮಾಡಲಿದ್ದೇವೆ ಎಂದು ಖಚಿತಪಡಿಸಿದ್ದಾರೆ. ಮಾತ್ರವಲ್ಲದೆ, ಕೇವಲ ಒಂದೇ ಸ್ಟ್ರೆಚ್ನಲ್ಲಿ ಇಡೀ ಸಿನಿಮಾದ ಚಿತ್ರೀಕರಣ ಮುಗಿಸಲಿದ್ದಾರಂತೆ. ಅಂದರೆ ಸುಮಾರು ನಾಲ್ಕೈದು ತಿಂಗಳಲ್ಲಿ ಇಡೀ ಸಿನಿಮಾದ ಚಿತ್ರೀಕರಣ ಮುಗಿಸಲಿದ್ದಾರೆ ಸಂದೀಪ್ ರೆಡ್ಡಿ ವಂಗಾ.
ಇದನ್ನೂ ಓದಿ:ಸಂದೀಪ್ ರೆಡ್ಡಿ ವಂಗಾ ಸಿನಿಮಾ ಬಗ್ಗೆ ಮಾತನಾಡಿದ ತೃಪ್ತಿ ದಿಮ್ರಿ
ಈ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆಗಬೇಕಿತ್ತು. ಸಂದೀಪ್ ರೆಡ್ಡಿ ವಂಗಾ ಜೊತೆಗೆ ಭಿನ್ನಾಭಿಪ್ರಾಯ ಮೂಡಿದ ಕಾರಣದಿಂದಾಗಿ ದೀಪಿಕಾ ಅವರು ಸಿನಿಮಾದಿಂದ ಹೊರಬಂದಿದ್ದು, ಅವರ ಜಾಗಕ್ಕೆ ಬಾಲಿವುಡ್ ನಟಿ ತೃಪ್ತಿ ದಿಮ್ರಿಯವರನ್ನು ಸಂದೀಪ್ ರೆಡ್ಡಿ ವಂಗಾ ಹಾಕಿಕೊಂಡಿದ್ದಾರೆ. ಸಿನಿಮಾವು ನಿಯತ್ತಾದ ಪೊಲೀಸ್ ಅಧಿಕಾರಿಯೊಬ್ಬನ ಕತೆಯನ್ನು ಒಳಗೊಂಡಿದೆಯಂತೆ. ಪೊಲೀಸ್ ಅಧಿಕಾರಿಯೊಬ್ಬ ತನ್ನ ನೈತಿಕತೆ ಕಾರಣಕ್ಕೆ ಉದ್ಯೋಗ ಕಳೆದುಕೊಳ್ಳುವುದು ಆ ಬಳಿಕ ಕುಟುಂಬವನ್ನು ಕಳೆದುಕೊಳ್ಳುವುದು ಕೊನೆಗೆ ವಿದೇಶದಲ್ಲೆಲ್ಲೋ ಇದ್ದು ತನಗೆ ಹಾನಿ ಮಾಡಿದ ವಿಲನ್ ಅನ್ನು ಹುಡುಕಿ ಕೊಲ್ಲುವ ಕತೆ ಸಿನಿಮಾದಲ್ಲಿದೆಯಂತೆ.
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದೆ. ಮುಂದಿನ ವರ್ಷ ‘ಫೌಜಿ’ ಸಿನಿಮಾ ತೆರೆಗೆ ಬರಲಿದೆ. ಅದಾದ ಬಳಿಕ ‘ಸ್ಪಿರಿಟ್’ ಸಿನಿಮಾ ಬಿಡುಗಡೆ ಆಗಲಿದೆ. ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣದ ಬಳಿಕ ಪ್ರಭಾಸ್ ‘ಸಲಾರ್ 2’ ಸಿನಿಮಾನಲ್ಲಿ ಭಾಗಿ ಆಗಲಿದ್ದಾರೆ. ಅದರ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ