ಎರಡೇ ದಿನಕ್ಕೆ ತೀವ್ರವಾಗಿ ಕುಸಿದ ‘ದಿ ರಾಜಾ ಸಾಬ್’ ಸಿನಿಮಾ ಕಲೆಕ್ಷನ್
ಪ್ರಭಾಸ್ ಜತೆ ಸ್ಟಾರ್ ಕಲಾವಿದರು ನಟಿಸಿದ್ದರೂ ಕೂಡ ‘ದಿ ರಾಜಾ ಸಾಬ್’ ಚಿತ್ರದ ಕಲೆಕ್ಷನ್ 2ನೇ ದಿನ ಕಡಿಮೆ ಆಗಿದೆ. ಮೊದಲ ದಿನ ಈ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿದ್ದರೂ ಸಹ 2ನೇ ದಿನದ ಕಲೆಕ್ಷನ್ ಶೇಕಡ 50ರಷ್ಟು ಕುಸಿದಿದೆ. ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರ ಬಿಡುಗಡೆ ಆಗುತ್ತಿದ್ದು, ‘ದಿ ರಾಜಾ ಸಾಬ್’ ಕಲೆಕ್ಷನ್ ಇನ್ನಷ್ಟು ಕುಸಿಯಲಿದೆ.

ಪ್ರಭಾಸ್ ಅಭಿಮಾನಿಗಳು ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿಲ್ಲ. ಬಾಕ್ಸ್ ಆಫೀಸ್ನಲ್ಲಿ ಕೇವಲ 2ನೇ ದಿನಕ್ಕೆ ಕಲೆಕ್ಷನ್ ಕುಸಿತ ಕಂಡಿರುವುದು ಈ ಮಾತಿಗೆ ಸಾಕ್ಷಿ. ಇದು ಹಾರರ್ ಸಿನಿಮಾ. ಇದೇ ಮೊದಲ ಬಾರಿಗೆ ಪ್ರಭಾಸ್ (Prabhas) ಅವರು ಹಾರರ್ ಸಿನಿಮಾ ಮಾಡಿದ್ದಾರೆ. ಆ ಕಾರಣದಿಂದಲೂ ಹೈಪ್ ಇತ್ತು. ಆದರೆ ಪ್ರೇಕ್ಷಕರಿಗೆ ಈ ಸಿನಿಮಾ ಅಷ್ಟೇನೂ ಇಷ್ಟ ಆಗಿಲ್ಲ. ಆದ್ದರಿಂದ 2ನೇ ದಿನವೇ ಕಲೆಕ್ಷನ್ (The Raja Saab Box Office Collection) ಕುಸಿದಿದೆ. ಮುಂದಿನ ದಿನಗಳಲ್ಲಿ ‘ದಿ ರಾಜಾ ಸಾಬ್’ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಇನ್ನಷ್ಟು ಕಡಿಮೆ ಆಗಲಿದೆ.
ಪ್ರಭಾಸ್ ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ದೊಡ್ಡದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಫೇಮಸ್ ಆಗಿದ್ದಾರೆ. ಹಾಗಾಗಿ ಮೊದಲ ದಿನ ಅವರ ಎಲ್ಲ ಸಿನಿಮಾಗಳು ಒಳ್ಳೆಯ ಓಪನಿಂಗ್ ಪಡೆಯುತ್ತವೆ. ‘ದಿ ರಾಜಾ ಸಾಬ್’ ಸಿನಿಮಾದ ವಿಚಾರದಲ್ಲೂ ಹಾಗೆಯೇ ಆಯಿತು. ಪ್ರೀಮಿಯರ್ ಶೋ ಮತ್ತು ಮೊದಲ ದಿನದ ಶೋಗಳು ಹೌಸ್ಫುಲ್ ಆದವು. 2ನೇ ದಿನ ಹವಾ ತಗ್ಗಿತು.
‘ದಿ ರಾಜಾ ಸಾಬ್’ ಸಿನಿಮಾಗೆ ಪ್ರೀಮಿಯರ್ ಶೋನಿಂದ 9.15 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೊದಲ ದಿನ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರಿಂದ 53.75 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಆದರೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ದಿನ ಜನರು ಚಿತ್ರಮಂದಿರಕ್ಕೆ ಬರುವುದು ಕಡಿಮೆ ಆಯಿತು. 2ನೇ ದಿನ ಆಗಿದ್ದು 27.73 ಕೋಟಿ ರೂಪಾಯಿ ಪಾತ್ರ.
ಅಂದರೆ, ಮೊದಲ ದಿನದಿಂದ 2ನೇ ದಿನಕ್ಕೆ ಅಂದಾಜು ಶೇಕಡ 50ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ಕೂಡ ಪ್ರೀಮಿಯರ್ ಶೋ ಹಾಗೂ 2 ದಿನಗಳ ಕಲೆಕ್ಷನ್ ಸೇರಿ ಒಟ್ಟು 90.63 ಕೋಟಿ ರೂಪಾಯಿ ಆಗಿದೆ ಎಂದು sacnilk ವರದಿ ಮಾಡಿದೆ. ಅಂದಾಜು 400 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಅದಕ್ಕೆ ಹೋಲಿಸಿದರೆ ಈಗ ಆಗುತ್ತಿರುವ ಕಲೆಕ್ಷನ್ ಸಮಾಧಾನಕರವಾಗಿಲ್ಲ.
ಇದನ್ನೂ ಓದಿ: ಚಿತ್ರಮಂದಿರಕ್ಕೆ ಬೆಂಕಿ ಇಟ್ಟ ಪ್ರಭಾಸ್ ಫ್ಯಾನ್ಸ್; ‘ದಿ ರಾಜಾ ಸಾಬ್’ ನೋಡುವಾಗ ಘಟನೆ
ಜನವರಿ 12ರಂದು ಮೆಗಾ ಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಬಿಡುಗಡೆ ಆಗಲಿದೆ. ಆಗ ‘ದಿ ರಾಜಾ ಸಾಬ್’ ಸಿನಿಮಾಗೆ ಸಹಜವಾಗಿಯೇ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಲಿದೆ. ಅದರಿಂದಾಗಿ ಈ ಚಿತ್ರದ ಕಲೆಕ್ಷನ್ ಇನ್ನಷ್ಟು ಕುಸಿತ ಕಾಣಲಿದೆ. ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಸಂಜಯ್ ದತ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




