
ಪ್ರಭಾಸ್ (Prabhas) ಭಾರತದ ಟಾಪ್ ಪ್ಯಾನ್ ಇಂಡಿಯಾ (Pan India) ನಟ. ಅವರ ಸಂಭಾವನೆ ನೂರು ಕೋಟಿಯನ್ನೂ ದಾಟಿದೆ. ಕೆಲ ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆಯನ್ನೂ ಸಹ ಪ್ರಭಾಸ್ ಪಡೆಯುತ್ತಿದ್ದಾರೆ. ಅವರಿಗಿರುವ ಮಾರುಕಟ್ಟೆಗೆ ತಕ್ಕಂತೆ ಸಂಭಾವನೆ ನಿಗದಿ ಪಡಿಸಿಕೊಂಡಿದ್ದಾರೆ. ಆದರೆ ಅವರಿಂದಾಗಿ ಅವರ ಸಿನಿಮಾಗಳ ತಂತ್ರಜ್ಞರ ಸಂಭಾವನೆಯೂ ಏರಿಕೆ ಆಗಿದೆ. ಇದೀಗ ಪ್ರಭಾಸ್ ‘ದಿ ರಾಜಾ ಸಾಬ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ? ಆ ಸಂಭಾವನೆ ಮೊತ್ತದಲ್ಲಿ ನಾಲ್ಕೈದು ‘ಸು ಫ್ರಂ ಸೋ’ ರೀತಿಯ ಸಿನಿಮಾ ನಿರ್ಮಾಣ ಮಾಡಿ ಬಿಡಬಹುದು.
‘ದಿ ರಾಜಾ ಸಾಬ್’ ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ ಹೆಸರಿನ ನಿರ್ದೇಶಕ. ಈ ಹಿಂದೆ ಈ ನಿರ್ದೇಶಕನಿಂದ ಭಾರಿ ದೊಡ್ಡ ಹಿಟ್ ಸಿನಿಮಾಗಳು ಯಾವುವೂ ಮೂಡಿ ಬಂದಿಲ್ಲ. ತೀರಾ ಸಾಧಾರಣ ಎನ್ನಬಹುದಾದ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ದೊಡ್ಡ ಸ್ಟಾರ್ ನಟರುಗಳೊಟ್ಟಿಗೆ ಕೆಲಸ ಮಾಡಿದ್ದು ಸಹ ಇಲ್ಲ. ಆದರೂ ಪ್ರಭಾಸ್, ಕೇವಲ ಮಾರುತಿ ಹೇಳಿದ ಕತೆ ಇಷ್ಟವಾಗಿ ಅವರೊಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡರು ಮಾತ್ರವಲ್ಲದೆ, ‘ದಿ ರಾಜಾ ಸಾಬ್’ ಸಿನಿಮಾಕ್ಕೆ ತಮ್ಮ ಜೀವನದ ಎರಡು ವರ್ಷಕ್ಕೂ ಹೆಚ್ಚು ಸಮಯ ಸಹ ನೀಡಿದ್ದಾರೆ.
‘ದಿ ರಾಜಾ ಸಾಬ್’ ಸಿನಿಮಾ ಇದೇ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರುತಿ, ಈ ಸಿನಿಮಾಕ್ಕೆ ತಾವು ಪಡೆದ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಮಾರುತಿ ಅವರಿಗೆ ಬರೋಬ್ಬರಿ 18 ಕೋಟಿ ರೂಪಾಯಿ ಸಂಭಾವನೆ ದೊರೆತಿದೆಯಂತೆ. ಇದು ಸಾಮಾನ್ಯ ಮೊತ್ತವಲ್ಲ. ಅದೂ ದೊಡ್ಡ ಹೆಸರು ಮಾಡದ ನಿರ್ದೇಶಕರೊಬ್ಬರಿಗೆ ಇಷ್ಟು ದೊಡ್ಡ ಸಂಭಾವನೆ ಸಿಗುವುದು ಬಹಳ ಅಪರೂಪ.
ಇದನ್ನೂ ಓದಿ:‘ಸ್ಪಿರಿಟ್’ ಚಿತ್ರಕ್ಕಾಗಿ ಶರ್ಟ್ಲೆಸ್ ಆದ ಪ್ರಭಾಸ್; ಸಖತ್ ರಾ ಆಗಿದೆ ಪೋಸ್ಟರ್
‘ದಿ ರಾಜಾ ಸಾಬ್’ ಸಿನಿಮಾಕ್ಕೆ ನನ್ನ ಜೀವನದ ಕಳೆದ ಮೂರು ವರ್ಷಗಳನ್ನು ವ್ಯಯಿಸಿದ್ದೇನೆ ಹಾಗಾಗಿ ಆ ಮೂರು ವರ್ಷಗಳನ್ನು ಸೇರಿಸಿ 18 ಕೋಟಿ ಸಂಭಾವನೆ ನೀಡಿದ್ದಾರೆ ಎಂದಿದ್ದಾರೆ. ಇದಕ್ಕೆ ಪರೋಕ್ಷ ಕಾರಣ ಪ್ರಭಾಸ್ ಎಂದೂ ಸಹ ಮಾರುತಿ ಹೇಳಿಕೊಂಡಿದ್ದಾರೆ. ಅಂದಹಾಗೆ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರುಗಳಿಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗುತ್ತದೆ. ರಾಜಮೌಳಿ ಅವರಿಗೆ ಯಾವ ಸ್ಟಾರ್ ನಟರಿಗೂ ನೀಡದಷ್ಟು ಸಂಭಾವನೆ ನೀಡಲಾಗುತ್ತಿದೆ ‘ವಾರಣಾಸಿ’ ಸಿನಿಮಾಕ್ಕೆ. ಬೋಯಪಾಟಿ ಸೀನು ಅವರಿಗೂ ಸಹ ಸುಮಾರು 10 ಕೋಟಿಗೂ ಹೆಚ್ಚು ಮೊತ್ತದ ಸಂಭಾವನೆ ನೀಡಲಾಗುತ್ತದೆಯಂತೆ.
ಇನ್ನು ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ಮೊದಲ ಬಾರಿಗೆ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಅವರದ್ದು ದ್ವಿಪಾತ್ರ ಮಾತ್ರವಲ್ಲದೆ ಸಿನಿಮಾನಲ್ಲಿ ಸಂಜಯ್ ದತ್ ಸಹ ನಟಿಸಿದ್ದಾರೆ. ಸಿನಿಮಾನಲ್ಲಿ ಮಾಳವಿಕಾ ಮೋಹನನ್, ರಿಧಿ ಕುಮಾರ್, ನಿಧಿ ಅಗರ್ವಾಲ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ