ಸೂಪರ್ ಹೀರೋ ಪಾತ್ರದಲ್ಲಿ ಪ್ರಭಾಸ್, ಕನ್ನಡದ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ
Prabhas: ನಟ ಪ್ರಭಾಸ್ ಈಗಾಗಲೇ ‘ಬಾಹುಬಲಿ’, ‘ಕಲ್ಕಿ 2898 ಎಡಿ’ ಸಿನಿಮಾಗಳಲ್ಲಿ ಸೂಪರ್ ಹೀರೋ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇದೀಗ ಪೂರ್ಣ ಪ್ರಮಾಣದ ಆದರೆ ಹಾಲಿವುಡ್ ಸೂಪರ್ ಹೀರೋಗಳಿಗೆ ಭಿನ್ನವಾದ ರೀತಿಯ ಸೂಪರ್ ಹೀರೋ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಯಾವುದು ಆ ಸಿನಿಮಾ? ನಿರ್ದೇಶನ ಮಾಡುತ್ತಿರುವುದು ಯಾರು? ಇಲ್ಲಿದೆ ಪೂರ್ಣ ಮಾಹಿತಿ...

‘ಬಾಹುಬಲಿ’ ಭಾರತೀಯ ಚಿತ್ರರಂಗದ ಫ್ಯಾಂಟಸಿ ಸಿನಿಮಾ. ಪ್ರಭಾಸ್ ಒಂದು ರೀತಿ ಭಾರತೀಯ ಚಿತ್ರರಂಗದ ಹೊಸ ತಲೆಮಾರಿನ ಸೂಪರ್ ಹೀರೋ. ‘ಬಾಹುಬಲಿ’ ಬಳಿಕ ‘ಕಲ್ಕಿ’ ಸಿನಿಮಾದಲ್ಲಿಯೂ ಸೂಪರ್ ಹೀರೋ ರೀತಿಯ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರು. ಇದೀಗ ಪ್ರಭಾಸ್ ಮತ್ತೊಮ್ಮೆ ಸೂಪರ್ ಹೀರೋ ರೀತಿಯ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ. ಆದರೆ ಈ ಬಾರಿ ತುಸು ಭಿನ್ನ ರೀತಿಯ ಸೂಪರ್ ಹೀರೋ ಪಾತ್ರದಲ್ಲಿ ನಟಿಸಲಿದ್ದಾರೆ ನಟ ಪ್ರಭಾಸ್.
ಪ್ರಶಾಂತ್ ವರ್ಮಾ, ಪೌರಾಣಿಕ ಕತೆಗಳ ಪಾತ್ರಗಳನ್ನು ಹೊಸ ರೀತಿಯಲ್ಲಿ, ಹೊಸ ತಲೆಮಾರಿಗೆ ಇಷ್ಟವಾಗುವ ಸೂಪರ್ ಹೀರೋ ಪಾತ್ರಗಳ ರೀತಿಯಲ್ಲಿ ಸಿನಿಮಾಗಳ ಮೂಲಕ ಪ್ರೆಸೆಂಟ್ ಮಾಡುತ್ತಿದ್ದಾರೆ. ಈಗಾಗಲೇ ‘ಹನುಮ್ಯಾನ್’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿರುವ ಪ್ರಶಾಂತ್ ವರ್ಮಾ, ಯಶಸ್ಸು ಕಂಡಿದ್ದಾರೆ. ಈಗ ರಿಷಬ್ ಶೆಟ್ಟಿ ನಟನೆಯ ‘ಜೈ ಹನುಮಾನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಜೊತೆಗೆ ಹೊಸ ಸಿನಿಮಾದ ಒಪ್ಪಂದ ಮಾಡಿಕೊಂಡಿರುವ ಪ್ರಶಾಂತ್ ವರ್ಮಾ, ಪ್ರಭಾಸ್ ಜೊತೆಗೂ ಸಹ ಪೌರಾಣಿಕ ಕತೆಯ ಛಾಯೆ ಇರುವ ಸೂಪರ್ ಹೀರೋ ರೀತಿಯ ಸಿನಿಮಾ ಮಾಡಲಿದ್ದಾರೆ.
ಇತ್ತೀಚೆಗಷ್ಟೆ ಟ್ವಿಟ್ಟರ್ನಲ್ಲಿ ಸಂದೇಶ ಹಂಚಿಕೊಂಡಿದ್ದ ಪ್ರಶಾಂತ್ ವರ್ಮಾ, ತಾವು ದೊಡ್ಡ ನಟನೊಟ್ಟಿಗೆ ದೊಡ್ಡ ಪ್ರಾಜೆಕ್ಟ್ಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಸಿನಿಮಾದ ಪೋಸ್ಟರ್ಗಳು ಸಹ ಈಗಾಗಲೆ ರೆಡಿಯಾಗಿದ್ದು ಆದಷ್ಟು ಬೇಗ ಘೋಷಣೆ ಮಾಡುವುದಾಗಿ ಹೇಳಿಕೊಂಡಿದ್ದರು. ಮೂಲಗಳ ಪ್ರಕಾರ, ಪ್ರಶಾಂತ್ ವರ್ಮಾ, ಪ್ರಭಾಸ್ಗಾಗಿ ಹೊಸ ಸಿನಿಮಾ ಮಾಡುತ್ತಿದ್ದು, ಸಿನಿಮಾದ ಘೋಷಣೆ ಶೀಘ್ರವೇ ಆಗಲಿದೆ.
ಇದನ್ನೂ ಓದಿ:ಸಂಕ್ರಾಂತಿಗೆ ‘ಮಹಾವತಾರ ನರಸಿಂಹ’ನ ದರ್ಶನ ಮಾಡಿಸಿದ ಹೊಂಬಾಳೆ
ಈ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ನವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಜೊತೆಗೆ ಒಟ್ಟು ಮೂರು ಸಿನಿಮಾಗಳ ಮುಂಗಡ ಒಪ್ಪಂದವನ್ನು ಹೊಂಬಾಳೆ ಮಾಡಿಕೊಂಡಿದೆ. ‘ಸಲಾರ್ 2’ ಅದಾದ ಬಳಿಕ ಇನ್ನೆರಡು ಸಿನಿಮಾಗಳ ಒಪ್ಪಂದವನ್ನು ಪ್ರಭಾಸ್ ಜೊತೆಗೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಒಂದು ಪ್ರಶಾಂತ್ ವರ್ಮಾ ನಿರ್ದೇಶಿಸಲಿರುವ ಸಿನಿಮಾ ಆಗಲಿರಲಿದೆ.
ಪ್ರಭಾಸ್ ಕೈಯಲ್ಲಿ ಈಗಾಗಲೇ ಹಲವು ಸಿನಿಮಾಗಳಿವೆ. ಪ್ರಭಾಸ್ ಪ್ರಸ್ತುತ ರಘು ಹನುಪುಡಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರಾಜಾ ಸಾಬ್’ ಸಿನಿಮಾದ ಚಿತ್ರೀಕರಣವನ್ನೂ ಬಹುತೇಕ ಪೂರ್ಣಗೊಳಿಸಿದ್ದಾರೆ. ರಘು ಹನುಪುಡಿ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್ 2’ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Sun, 2 March 25