
ಪ್ರಶಾಂತ್ ನೀಲ್ (Prashanth Neel), ಪ್ರಸ್ತುತ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಈ ವರೆಗೆ ನಾಲ್ಕು ಸಿನಿಮಾಗಳನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಎಲ್ಲವೂ ಸೂಪರ್ ಹಿಟ್. ಪ್ರಶಾಂತ್ ನೀಲ್, ಕಮರ್ಶಿಯಲ್, ಮಾಸ್ ಸಿನಿಮಾಗಳಿಗೆ ಭಿನ್ನ ವ್ಯಾಕರಣ ನೀಡಿದ ನಿರ್ದೇಶಕ. ತಮ್ಮ ಡಾರ್ಕ್ ಕಲರ್ ಗ್ರೇಡಿಂಗ್, ಮೊನಚು ಸಂಭಾಷಣೆ, ಭಿನ್ನವಾಗಿ ಕತೆ ಹೇಳುವ ರೀತಿ, ನಿರೂಪಣಾ ಶೈಲಿಯಿಂದ ತಮ್ಮದೇ ಒಂದು ಭಿನ್ನ ಶೈಲಿಯನ್ನೇ ಅವರು ಸೃಷ್ಟಿಸಿದ್ದಾರೆ. ಆದರೆ ಈಗ ಪ್ರಶಾಂತ್ ನೀಲ್ ತಮ್ಮ ಶೈಲಿಯನ್ನೇ ಕೈಬಿಡುತ್ತಿದ್ದಾರೆ.
ಇದೀಗ ಜೂ ಎನ್ಟಿಆರ್ ನಟಿಸಿರುವ ‘ಡ್ರ್ಯಾಗನ್’ ಸಿನಿಮಾ ಅನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಟೀಸರ್ ನಿನ್ನೆಯಷ್ಟೆ (ಮೇ 20) ಬಿಡುಗಡೆ ಆಗಿದೆ. ನೀಲ್ ಅವರ ಈ ಹಿಂದಿನ ಸಿನಿಮಾಗಳಾದ ‘ಸಲಾರ್’, ‘ಕೆಜಿಎಫ್’ ರೀತಿ, ‘ಡ್ರ್ಯಾಗನ್’ ಸಹ ಕಡುಕಪ್ಪು ಬಣ್ಣದ ಥೀಮ್ ಅನ್ನು ಹೊಂದಿದೆ. ಅದೇ ಬ್ಯಾಟಲ್ ಫೀಲ್ಡ್, ಅದೇ ಸ್ಟೋರಿ ನರೇಟರ್ (ಕಥಾ ನಿರೂಪಕನ ಪಾತ್ರ). ಅಬ್ಬರದ ಸಂಗೀತ. ಸಿಂಗಲ್ ವಲ್ರ್ಡ್ ಡೈಲಾಗ್ಗಳು ಸಿನಿಮಾನಲ್ಲಿವೆ. ಟೀಸರ್ ಅನ್ನು ಬಹಳ ಜನ ಮೆಚ್ಚಿದ್ದಾರಾದರೂ, ನೀಲ್ ತಮ್ಮ ಹಳೆಯ ಸಿನಿಮಾಗಳ ಮಾದರಿಯನ್ನೇ ಇಲ್ಲೂ ಅನುಸರಿಸಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.
ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ಇನ್ನೆರಡು ಸಿನಿಮಾಗಳ ಬಳಿಕ ತಮ್ಮ ಶೈಲಿಯನ್ನು ಬದಲಾವಣೆ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ. ಇನ್ನು ಮುಂದೆ ಡಾರ್ಕ್ ಥೀಮ್ಗಳು ಇರುವುದಿಲ್ಲ. ಸಾಕಷ್ಟು ಮಂದಿ ನನ್ನ ಶೈಲಿಯ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಕೆಲವರು ನನ್ನೊಟ್ಟಿಗೆ ನೇರವಾಗಿ ವಾಗ್ವಾದ ಸಹ ಮಾಡಿದ್ದಾರೆ. ಆದರೆ ಇನ್ನು ಮುಂದೆ ನಾನು ನನ್ನ ನೈಜ ಶೈಲಿಯನ್ನು ಬಳಸುವುದಿಲ್ಲ ಎಂದಿದ್ದಾರೆ. ಇದು ನಿಜಕ್ಕೂ ದೊಡ್ಡ ನಿರ್ಧಾರವೇ ಆಗಿದೆ.
ಇದನ್ನೂ ಓದಿ:ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್ಗೆ ಧನ್ಯವಾದ ಹೇಳಿದ ಜೂ ಎನ್ಟಿಆರ್
ಪ್ರಶಾಂತ್ ನೀಲ್ ಅವರು ‘ಸಲಾರ್ 2’, ‘ಡ್ರ್ಯಾಗನ್ 2’ ಸಿನಿಮಾಗಳನ್ನು ನಿರ್ದೇಶಿಸಲಿದ್ದು, ಆ ಎರಡು ಸಿನಿಮಾಗಳ ಬಳಿಕ ನೀಲ್ ಅವರು ತಮ್ಮ ಶೈಲಿಯನ್ನೇ ಬದಲಿಸಲಿದ್ದಾರೆ. ‘ನನ್ನ ಸಿನಿಮಾಗಳಲ್ಲಿ ಇನ್ನು ಮುಂದೆ ಹೆಚ್ಚು ಬಣ್ಣಗಳು ಕಾಣಲಿವೆ. ಇಂಟೆನ್ಸ್ ಕತೆಯ ಹೊರತಾಗಿ ಭಿನ್ನ ಕತೆಗಳು ಸಹ ಇರಲಿವೆ’ ಎಂದಿದ್ದಾರೆ. ‘ಹಾಗಿದ್ದರೆ ನಿಮ್ಮ ಸಿನಿಮಾನಲ್ಲಿ ಪಿಂಕ್ ಬಣ್ಣವನ್ನೂ ನೋಡಬಹುದೇ?’ ಎಂಬ ಪ್ರಶ್ನೆಗೆ, ‘ಖಂಡಿತ ಹೌದು’ ಎಂದಿದ್ದಾರೆ ನೀಲ್.
ಡಾರ್ಕ್ ಥೀಮ್, ಪಾತಕಿಗಳ ಪ್ರಪಂಚವನ್ನು ಸೃಷ್ಟಿಸುವುದು, ಮುಖ್ಯವಾದ ಹಲವು ಪಾತ್ರಗಳ ಸೃಷ್ಟಿಸಿ ಅವರನ್ನು ಕತೆಯಲ್ಲಿ ಕನೆಕ್ಟ್ ಮಾಡುವುದು ಮೂರನೇ ಒಂದು ಪಾತ್ರದ ಮೂಲಕ ಕತೆಯನ್ನು ನರೇಟ್ ಮಾಡಿಸುವುದು ಇವು ಪ್ರಶಾಂತ್ ನೀಲ್ ಅವರ ಶೈಲಿ. ಇದರಿಂದ ನೀಲ್ ಅವರಿಗೆ ಭಾರಿ ಯಶಸ್ಸು ಸಹ ಸಿಕ್ಕಿದೆ. ಆದರೆ ಇನ್ನು ಮುಂದೆ ಆ ಶೈಲಿಯನ್ನೇ ಬಿಡಲಿದ್ದಾರಂತೆ ನೀಲ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ