‘ಕೆಜಿಎಫ್ 3’ ಸದ್ಯಕ್ಕಿಲ್ಲ, ‘ಡ್ರ್ಯಾಗನ್’ ಬಳಿಕ ‘ಸಲಾರ್ 2’ ಕೆಲಸ ಶುರು; ಪ್ರಶಾಂತ್ ನೀಲ್ ಸ್ಪಷ್ಟನೆ

‘ಕೆಜಿಎಫ್ 3’ ಸಿನಿಮಾ ಯಾವಾಗ ಸೆಟ್ಟೇರಬಹುದು ಎಂದು ಕೇಳುವ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗಿದೆ. ಈ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಅವರು ಸದ್ಯಕ್ಕೆ ಯಾವುದೇ ನಿರ್ಧಾರ ಮಾಡಿಲ್ಲ. ‘ಡ್ರ್ಯಾಗನ್’ ಸಿನಿಮಾ ಕೆಲಸಗಳು ಮುಗಿದ ಬಳಿಕ ಅವರು ‘ಸಲಾರ್ 2’ ಚಿತ್ರದ ಕೆಲಸ ಆರಂಭಿಸಲಿದ್ದಾರೆ.

‘ಕೆಜಿಎಫ್ 3’ ಸದ್ಯಕ್ಕಿಲ್ಲ, ‘ಡ್ರ್ಯಾಗನ್’ ಬಳಿಕ ‘ಸಲಾರ್ 2’ ಕೆಲಸ ಶುರು; ಪ್ರಶಾಂತ್ ನೀಲ್ ಸ್ಪಷ್ಟನೆ
Yash, Prabhas

Updated on: May 21, 2026 | 8:23 PM

ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಕಾಂಬಿನೇಷನ್‌ನ ‘ಸಲಾರ್: ಪಾರ್ಟ್ 1 – ಸೀಸ್‌ಫೈರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಈಗ ಚಿತ್ರದ ಮುಂದಿನ ಭಾಗ ‘ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ’ (Salaar 2) ಚಿತ್ರಕ್ಕಾಗಿ ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ, ಈ ಬಿಗ್ ಬಜೆಟ್ ಸೀಕ್ವೆಲ್ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮಹತ್ವದ ಅಪ್ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ‘ಕೆಜಿಎಫ್ 3’ (KGF 3) ಕುರಿತು ಅಪ್​ಡೇಟ್ ತಿಳಿಯಲು ಕಾದಿದ್ದ ಅಭಿಮಾನಿಗಳಿಗೆ ಬೇಸರ ಆಗಿದೆ.

ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅಭಿನಯದ ‘ಡ್ರ್ಯಾಗನ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವು 2027ರ ಜೂನ್ 11ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರದ ಚಿತ್ರೀಕರಣ ಮುಗಿದ ತಕ್ಷಣವೇ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ‘ಸಲಾರ್ 2’ ಚಿತ್ರದ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ಗಲಾಟಾ ಪ್ಲಸ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ನೀಲ್, ‘ಡ್ರ್ಯಾಗನ್ ಸಿನಿಮಾ ಮುಗಿದ ತಕ್ಷಣವೇ ‘ಸಲಾರ್ 2’ ಶೂಟಿಂಗ್ ಆರಂಭವಾಗಲಿದೆ’ ಎಂದಿದ್ದಾರೆ. ಇದೇ ವೇಳೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಕೆಜಿಎಫ್: ಚಾಪ್ಟರ್ 3’ ಚಿತ್ರದ ಬಗ್ಗೆಯೂ ಮಾತನಾಡಿದ ಅವರು, ‘ಕೆಜಿಎಫ್ ಫ್ರಾಂಚೈಸಿಗೆ ನಾನು ಯಾವಾಗ ಮರಳುತ್ತೇನೆ ಎಂಬ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ.

ತಮ್ಮ ಡಾರ್ಕ್ ಥೀಮ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್, ‘ಡ್ರ್ಯಾಗನ್’ ಚಿತ್ರದ ನಂತರ ಈ ಶೈಲಿಯ ಸಿನಿಮಾಗಳಿಗೆ ವಿರಾಮ ನೀಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಹೆಚ್ಚು ಬಣ್ಣಗಳಿಂದ ಕೂಡಿರುವ ಪೌರಾಣಿಕ ಕಥಾಹಂದರ ಹೊಂದಿರುವ ಚಿತ್ರ ಸರಣಿಯೊಂದನ್ನು ಮಾಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಇದರೊಂದಿಗೆ, ಒಂದು ಸಣ್ಣ ಬಜೆಟ್‌ನ ಭಾವನಾತ್ಮಕ ಕೌಟುಂಬಿಕ ಡ್ರಾಮಾ ಸಿನಿಮಾ ಮಾಡುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಕೆಗಳಿಂದ ರೋಸಿಹೋದ ಪ್ರಶಾಂತ್ ನೀಲ್, ಬದಲಾಗುವ ನಿರ್ಧಾರ ಮಾಡಿದ ನಿರ್ದೇಶಕ

‘ಸಲಾರ್ 1’ ಚಿತ್ರದಲ್ಲಿ ದೇವ (ಪ್ರಭಾಸ್) ಮತ್ತು ವರದರಾಜ ಮನ್ನಾರ್ (ಪೃಥ್ವಿರಾಜ್) ನಡುವಿನ ಸ್ನೇಹ ಹಾಗೂ ರಾಜಕೀಯ ದ್ರೋಹದ ಕಥೆಯನ್ನು ತೋರಿಸಲಾಗಿತ್ತು. ಎರಡನೇ ಭಾಗದಲ್ಲಿ ಇವರಿಬ್ಬರ ನಡುವಿನ ಮಹಾ ಯುದ್ಧ ಮತ್ತು ಸಿಂಹಾಸನಕ್ಕಾಗಿ ನಡೆಯುವ ಸಂಘರ್ಷವನ್ನು ಅನಾವರಣಗೊಳಿಸಲಾಗುತ್ತದೆ. ಚಿತ್ರದಲ್ಲಿ ಜಗಪತಿ ಬಾಬು, ಬಾಬಿ ಸಿಂಹ, ಈಶ್ವರಿ ರಾವ್, ಶ್ರುತಿ ಹಾಸನ್ ಮತ್ತು ಶ್ರಿಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us