Mahesh Babu: ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಸಿಕ್ಕ ಖಡಕ್ ವಿಲನ್
ರಾಜಮೌಳಿ ನಿರ್ದೇಶನದ ಹೊಸ ಸಿನಿಮಾ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈವರೆಗೆ ಚಿತ್ರದ ಪಾತ್ರವರ್ಗದ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ಈಗ ಚಿತ್ರದ ವಿಲನ್ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ಪೃಥ್ವಿರಾಜ್ ಸುಕುಮಾರನ್ ಸಿನಿಮಾಗೆ ವಿಲನ್ ಎಂದು ವರದಿ ಆಗಿದೆ.
ಎಸ್ಎಸ್ ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಇದೆ. ಇದಕ್ಕೆ ಕಾರಣ ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಅವರ ನಟನೆಯ 29ನೇ ಸಿನಿಮಾ ಇದು. ‘ಗುಂಟೂರು ಖಾರಂ’ ಸಿನಿಮಾ ಸಾಧಾರಣ ಯಶಸ್ಸು ಕಂಡ ಬೆನ್ನಲ್ಲೇ ಮಹೇಶ್ ಬಾಬು ಈ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ದಪ್ಪ ಆಗುತ್ತಿದ್ದಾರೆ. ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುತ್ತಿದ್ದಾರೆ. ಈ ಮಧ್ಯೆ ಸಿನಿಮಾದ ವಿಲನ್ ಬಗ್ಗೆ ಅಪ್ಡೇಟ್ ಒಂದು ಸಿಕ್ಕಿದೆ.
ರಾಜಮೌಳಿ ಸಿನಿಮಾಗಳಲ್ಲಿ ವಿಲನ್ಗೂ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ವಿಲನ್ಗಳನ್ನು ಭರ್ಜರಿಯಾಗಿ ಸಿದ್ಧಪಡಿಸುತ್ತಾರೆ ಅವರು. ‘ಈಗ’ ಚಿತ್ರದಲ್ಲಿ ಸುದೀಪ್, ‘ಬಾಹುಬಲಿ’ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಹೀಗೆ ಅವರ ಸಿನಿಮಾದ ವಿಲನ್ಗಳು ಗಮನ ಸೆಳೆದಿದ್ದಾರೆ. ಈಗ ರಾಜಮೌಳಿ ಹೊಸ ಚಿತ್ರಕ್ಕೂ ಖಡಕ್ ವಿಲನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಬೇರಾರೂ ಅಲ್ಲ ಪೃಥ್ವಿರಾಜ್ ಸುಕುಮಾರನ್.
ಇತ್ತೀಚೆಗಷ್ಟೇ ರಿಲೀಸ್ ಆದ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಪೃಥ್ವಿರಾಜ್ ವಿಲನ್ ಮಾಡಿದ್ದರು. ಈ ಸಿನಿಮಾ ಸೋತಿದ್ದರೂ ಪೃಥ್ವಿರಾಜ್ ನಟನೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈ ಪವರ್ಫುಲ್ ಪಾತ್ರವನ್ನು ಜನರು ಕೊಂಡಾಡಿದ್ದರು. ಈಗ ರಾಜಮೌಳಿ ಕೂಡ ಪೃಥ್ವಿರಾಜ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಪೃಥ್ವಿರಾಜ್ ಅವರು ಈ ಸಿನಿಮಾದ ಆಫರ್ನ ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ.
ಸದ್ಯ ರಾಜಮೌಳಿ ಅವರು ಪಾತ್ರವರ್ಗದ ಆಯ್ಕೆಯಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸವನ್ನು ಅವರು ಪೂರ್ಣಗೊಳಿಸಿದ್ದಾರೆ. ಆಫ್ರಿಕಾದ ಕಾಡುಗಳಲ್ಲಿ ಸಿನಿಮಾದ ಕಥೆ ಸಾಗಲಿದೆಯಂತೆ. ಇದಕ್ಕಾಗಿ ಸೋನಿ ಪಿಕ್ಚರ್ಸ್ ಅಥವಾ ಡಿಸ್ನಿ ಸ್ಟುಡಿಯೋದಲ್ಲಿ ಸೆಟ್ ಹಾಕುವ ಆಲೋಚನೆ ರಾಜಮೌಳಿಗೆ ಇದೆ. 2025ರಲ್ಲಿ ಸಿನಿಮಾ ತೆರೆಗೆ ಬರಬಹುದು.
ಇದನ್ನೂ ಓದಿ: ಎರಡು ಬಾರಿ ಮೆಗಾಸ್ಟಾರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಪೃಥ್ವಿರಾಜ್ ಸುಕುಮಾರನ್
ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್ ಬೇಡಿಕೆ ಹೆಚ್ಚಿದೆ. ಅವರು ಕೇವಲ ಮಲಯಾಳಂ ಮಾತ್ರವಲ್ಲದೆ ಇತರ ಭಾಷೆಗಳ ಸಿನಿಮಾ ಆಫರ್ಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈ ಮೂಲಕ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀರೋ ಹಾಗೂ ವಿಲನ್ ಪಾತ್ರವನ್ನು ಅವರು ಒಪ್ಪಿ ನಟಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.