‘ನನ್ನ ಮತ್ತು ಮುಸ್ತಫಾ ರಾಜ್ ಸಂಬಂಧ ಭದ್ರವಾಗಿದೆ’: ನಟಿ ಪ್ರಿಯಾಮಣಿ ಸ್ಪಷ್ಟನೆ

Priyamani: ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಪ್ರಿಯಾಮಣಿ ಮತ್ತು ಮುಸ್ತಫಾ ಸಂಬಂಧದ ಕುರಿತು ತಗಾದೆ ತೆಗೆದಿರುವ ಬೆನ್ನಲ್ಲೇ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ತನ್ನ ಮತ್ತು ಮುಸ್ತಫಾ ಅವರ ಸಂಬಂಧ  ಭದ್ರವಾಗಿದೆ ಎಂದು ಅವರು ಹೇಳಿದ್ದಾರೆ.

‘ನನ್ನ ಮತ್ತು ಮುಸ್ತಫಾ ರಾಜ್ ಸಂಬಂಧ ಭದ್ರವಾಗಿದೆ’: ನಟಿ ಪ್ರಿಯಾಮಣಿ ಸ್ಪಷ್ಟನೆ
ಮುಸ್ತಫಾ ರಾಜ್ ಮತ್ತು ಪ್ರಿಯಾಮಣಿ

ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಮೂಲಕ ದೇಶದ ಚಿತ್ರ ಪ್ರೇಮಿಗಳ ಮನಗೆದ್ದಿರುವ ಕನ್ನಡದ ನಟಿ ಪ್ರಿಯಾಮಣಿ ಅವರ ದಾಂಪತ್ಯದ ಕುರಿತು ಎದ್ದಿರುವ ಆರೋಪಕ್ಕೆ ಉತ್ತರಿಸಿದ್ಧಾರೆ. ತನ್ನ ಮತ್ತು ಮುಸ್ತಫಾ ರಾಜ್ ಅವರ ಬಾಂಧವ್ಯ ಬಹಳ ಭದ್ರವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಹಂಗಾಮಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಸ್ತಫಾ ಅವರು ಪ್ರಸ್ತುತ ಅಮೇರಿಕಾದಲ್ಲಿದ್ದಾರೆ. ಹಾಗಿದ್ದರೂ ಸಹ ನಮ್ಮ ಸಂಬಂಧ ಬಹಳ ಗಟ್ಟಿಯಾಗಿದೆ. ದಿನವೂ ನಾವು ಮಾತನಾಡುತ್ತೇವೆ. ನಮ್ಮ ದೈನಂದಿನ ಆಗುಹೋಗುಗಳನ್ನೂ ಸಾವಧಾನವಾಗಿ ಚರ್ಚಿಸುತ್ತೇವೆ ಎಂದಿದ್ದಾರೆ. 

ಮುಸ್ತಫಾರ ಮೊದಲ ಪತ್ನಿ ಆಯೆಷಾ ಅವರು ಆರೋಪಿಸಿರುವ ಪ್ರಕಾರ ಪ್ರಿಯಾಮಣಿ ಮತ್ತು ಮುಸ್ತಫಾರ ಮದುವೆ ಅಸಿಂಧುವಾಗಿದೆ. ಕಾರಣ, ಮುಸ್ತಫಾ ರಾಜ್ ಅವರಿಗಿನ್ನೂ ವಿಚ್ಛೇದನ ನೀಡಿಲ್ಲ. ಜೊತೆಗೆ ಮುಸ್ತಫಾ ಪ್ರಿಯಾಮಣಿ ಅವರನ್ನು ಮದುವೆಯಾಗುವಾಗ ಅವರು ತಾನಿನ್ನೂ ಅವಿವಾಹಿತ ಎಂದು ದಾಖಲೆಯಲ್ಲಿ ನಮೂದಿಸಿದ್ದರು ಎಂದು ಆಯೆಷಾ ಆರೋಪಿಸಿದ್ದರು. ಮುಸ್ತಫಾ ಹಾಗೂ ಆಯೆಷಾರಿಗೆ ಈರ್ವರು ಮಕ್ಕಳಿದ್ದಾರೆ. ಇವರು 2013ರಲ್ಲಿ ಬೇರೆಯಾಗಿದ್ದರು.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಪ್ರಿಯಾಮಣಿ ಆಯೆಷಾ ಆರೋಪವನ್ನು ಅಲ್ಲಗಳೆದಿದ್ದಾರೆ. “ನನ್ನ ಮತ್ತು ಮುಸ್ತಫಾ ಸಂಬಂಧ ಬಹಳ ಚೆನ್ನಾಗಿದ್ದು, ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದೇವೆ. ಉತ್ತಮ ಸಂವಹನವೇ ಒಳ್ಳೆಯ ಸಂಬಂಧಕ್ಕೆ ಆಧಾರ ಎಂಬುದನ್ನು ಇಬ್ಬರೂ ನಂಬಿದ್ದೇವೆ. ಒಂದು ವೇಳೆ ನಾನು ಚಿತ್ರೀಕರಣದಿಂದಾಗಿ ಬ್ಯುಸಿ ಇದ್ದರೂ, ಕ್ಷೇಮ ಸಮಾಚಾರವನ್ನು ಮಾತನಾಡುವುದನ್ನು ತಪ್ಪಿಸುವುದಿಲ್ಲ. ಅದೇ ರೀತಿ ಮುಸ್ತಫಾ ಅವರು ತಮ್ಮ ಕೆಲಸದ ಒತ್ತಡದ ನಡುವೆ ಇದ್ದರೆ ನಾನು ಅದನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇಬ್ಬರಿಗೂ ಸಮಯಾವಕಾಶ ಒದಗಿದಾಗ ಮನಬಿಚ್ಚಿ ಮಾತನಾಡುತ್ತೇವೆ. ಇದರಿಂದಾಗಿ ನಮ್ಮ ಸಂಬಂಧ ಬಹಳ ಗಟ್ಟಿಯಾಗಿದೆ” ಎಂದು ಅವರು ವಿವರಿಸಿದ್ದಾರೆ.

ಮುಂದುವರೆದು ಮಾತನಾಡಿದ ಪ್ರಿಯಾಮಣಿ, “ನಾವು ದಣಿದಿರುವಾಗ ಮತ್ತೊಬ್ಬರು ನಮ್ಮೊಂದಿಗಿದ್ದಾರೆ ಎಂಬ ಭಾವವೇ ಬಹಳ ಭದ್ರತೆಯ ಭಾವವನ್ನು ನೀಡುತ್ತದೆ. ಇದೇ ಪ್ರತೀ ಸಂಬಂಧವನ್ನು ಕಾಪಿಡುವುದು” ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಮಣಿ ಮತ್ತು ಮುಸ್ತಫಾ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆಯೆಷಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಮುಸ್ತಫಾ ರಾಜ್, ಆಯೆಷಾ ನನ್ನಿಂದ ಮತ್ತಷ್ಟು ಹಣವನ್ನು ಪಡೆಯಲು ಈ ಆರೋಪ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Priyamani: ‘ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮದುವೆ ಅಸಿಂಧು’; ಮುಸ್ತಫಾ ರಾಜ್ ಮೊದಲ ಪತ್ನಿ ಆರೋಪ

ಇದನ್ನೂ ಓದಿ: ಅರವಿಂದ್​-ದಿವ್ಯಾ ಉರುಡುಗ ಸಂಬಂಧದಲ್ಲಿ ಬಿರುಕು; ಇದು ಯಾರೂ ನಿರೀಕ್ಷಿಸದ ಸಂಗತಿ

(Priyamani Clarifies that her and Mustafa Raj’s relationship is very secure)