Priyamani: ‘ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮದುವೆ ಅಸಿಂಧು’; ಮುಸ್ತಫಾ ರಾಜ್ ಮೊದಲ ಪತ್ನಿ ಆರೋಪ

ಪ್ರಿಯಾಮಣಿ ಮತ್ತು ಅವರ ಪತಿ ಮುಸ್ತಾಫಾ ರಾಜ್ ಅವರ ಮದುವೆ ಕಾನೂನಿನ ಪ್ರಕಾರ ಅಸಿಂಧು ಎಂದು ಮುಸ್ತಫಾರ ಮೊದಲ ಪತ್ನಿ ಆಯೆಷಾ ಆರೋಪಿಸಿದ್ದಾರೆ. ಮುಸ್ತಾಫಾ ಮತ್ತು ತಾನು ಅಧಿಕೃತವಾಗಿ ವಿಚ್ಛೇದನವನ್ನು ಪಡೆದಿಲ್ಲ ಎಂದು ಈ ವೇಳೆ ಅವರು ಹೇಳಿಕೆ ನೀಡಿದ್ದಾರೆ.

Priyamani: ‘ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮದುವೆ ಅಸಿಂಧು’; ಮುಸ್ತಫಾ ರಾಜ್ ಮೊದಲ ಪತ್ನಿ ಆರೋಪ
ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ (ಫೈಲ್ ಚಿತ್ರ)

ಫ್ಯಾಮಿಲಿ ಮ್ಯಾನ್ ವೆಬ್  ಸರಣಿಯಿಂದ ದೇಶಕ್ಕೇ ಪರಿಚಿತರಾಗಿರುವ, ಕನ್ನಡದ ಖ್ಯಾತ ನಟಿ ಪ್ರಿಯಾಮಣಿ ಅವರ ದಾಂಪತ್ಯದ ಕುರಿತು ಅವರ ಪತಿಯ ಮೊದಲ ಪತ್ನಿ ತಗಾದೆ ತೆಗೆದಿದ್ದಾರೆ. ನಟಿ ಪ್ರಿಯಾಮಣಿ ಅವರ ಪತಿ ಮುಸ್ತಫಾ ರಾಜ್ ಅವರು ತಮ್ಮ ಮೊದಲ ಪತ್ನಿ ಆಯೆಷಾ ಅವರಿಂದ 2013ರಲ್ಲಿ ದೂರವಾಗಿದ್ದರು. ನಂತರ 2017ರಲ್ಲಿ ಪ್ರಿಯಾಮಣಿ ಅವರನ್ನು ವಿವಾಹವಾದರು. ಮುಸ್ತಫಾ ಮತ್ತು ಆಯೆಷಾ ಅವರಿಗೆ ಇಬ್ಬರು ಮಕ್ಕಳಿದ್ಧಾರೆ. ಈಗ ಮುಸ್ತಫಾ ವಿರುದ್ಧ ಆಯೆಷಾ ಆರೋಪ ಮಾಡಿದ್ದು, ಕಾನೂನಿನ ಪ್ರಕಾರ ನಾವಿನ್ನೂ ಬೇರ್ಪಟ್ಟಿಲ್ಲ. ನಾನೀಗಲೂ ಅವರ ಪತ್ನಿ. ಆದ್ದರಿಂದ ಪ್ರಿಯಾಮಣಿ ಮತ್ತು ಮುಸ್ತಫಾ ಅವರ ಮದುವೆ ಅಸಿಂಧು ಎಂದಿದ್ದಾರೆ. ಆದರೆ, ಮುಸ್ತಫಾ ರಾಜ್ ಈ ಆರೋಪವನ್ನು ನಿರಾಕರಿಸಿದ್ದಾರೆ.

ಲೀಡಿಂಗ್ ಡೈಲಿಗೆ ಮುಸ್ತಫಾ ರಾಜ್ ನೀಡಿರುವ ಪ್ರತಿಕ್ರಿಯೆಯಲ್ಲಿ ಆಯೆಷಾ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ನನ್ನ ವಿರುದ್ಧ ಸುಖಾಸುಮ್ಮನೆ ಆರೋಪಿಸಲಾಗುತ್ತಿದೆ. ನಾನು ಆಯೆಷಾ ಅವರಿಗೆ ಮಕ್ಕಳನ್ನು ಬೆಳೆಸುವುದಕ್ಕಾಗಿ ಹಣವನ್ನು ನೀಡುತ್ತಿದ್ದೇನೆ. ಅದಕ್ಕಿಂತಲೂ ಹೆಚ್ಚು ಹಣವನ್ನು ಪಡೆಯುವುದಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಆಯೆಷಾ ಅವರು ಆರೋಪಿಸಿರುವಂತೆ ಕೌಟುಂಬಿಕ ದೌರ್ಜನ್ಯ ನಡೆದಿರುವುದೇ ಹೌದಾದರೆ ಇಷ್ಟು ಸಮಯ ಅವರು ಏಕೆ ಸುಮ್ಮನಿದ್ದರು ಎಂದು ಮುಸ್ತಫಾ ಮರು ಪ್ರಶ್ನಿಸಿದ್ದಾರೆ.

ಆಯೆಷಾ  ಅವರ ಪ್ರಕಾರ, ಮುಸ್ತಫಾ ಅವರು ಈಗಲೂ ಅವರ ಪತಿ. ಆದ್ದರಿಂದಲೇ ಕಾನೂನಿನ ಪ್ರಕಾರ ಮುಸ್ತಫಾ- ಪ್ರಿಯಾಮಣಿ ಮದುವೆ ಅಸಿಂಧುವಾಗಿದೆ. ಪ್ರಿಯಾಮಣಿ ಅವರನ್ನು ಮದುವೆಯಾಗುವುದಕ್ಕೂ ಮೊದಲು ಅವರು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿರಲಿಲ್ಲವಂತೆ. ನ್ಯಾಯಾಲಯಕ್ಕೆ ತಾನು ಅವಿವಾಹಿತ ಎಂದು ತಿಳಿಸಿ ಪ್ರಿಯಾಮಣಿ ಅವರನ್ನು ಮುಸ್ತಫಾ ಮದುವೆಯಾಗಿದ್ದಾರೆ ಎಂದು ಆಯೆಷಾ ಅವರು ಆರೋಪಿಸಿದ್ದಾರೆ.

ಇದುವರೆಗೆ ಈ ವಿಷಯವನ್ನು ಏಕೆ ಪ್ರಸ್ತಾಪಿಸಿರಲಿಲ್ಲ ಎಂಬ ಮುಸ್ತಫಾ ಅವರ ಪ್ರಶ್ನೆಗೆ ಉತ್ತರಿಸಿರುವ ಆಯೆಷಾ, “ಎರಡು ಮಕ್ಕಳ ತಾಯಿಯಾಗಿ ನಾನೇನು ಮಾಡಲಿ ಹೇಳಿ? ಸಾತ್ವಿಕವಾದ ದಾರಿಯಿಂದ ನಾನು ಇದನ್ನು ಸರಿದೂಗಿಸಲು ಪ್ರಯತ್ನಪಟ್ಟೆ. ಆದರೆ ಅವರು(ಮುಸ್ತಫಾ) ನನ್ನ ವಿರುದ್ಧ ತಿರುಗಿಬಿದ್ದಾಗ  ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನನಗೀಗ ಅನಿವಾರ್ಯವಾಗಿದೆ” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಪ್ರಿಯಾಮಣಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪತಿ ಮುಸ್ತಫಾ ರಾಜ್ ಅವರ ಬದುಕಿನಲ್ಲಿ ಪ್ರವೇಶವಾದ ನಂತರ ಬದುಕು ಹೇಗೆ ಬದಲಾಯಿತು ಎಂದು ಹೇಳಿಕೊಂಡಿದ್ದರು. “ಅವರು(ಮುಸ್ತಫಾ) ನನಗೆ ಅದೃಷ್ಟದ ರೇಖೆ ಇದ್ದಂತೆ. ಅವರು ನನ್ನ ಬದುಕಿಗೆ ಬಂದ ನಂತರ ನಾನು ಮತ್ತಷ್ಟು ಬ್ಯುಸಿಯಾದೆ. ನನ್ನೆಲ್ಲಾ ಕೆಲಸಗಳಿಗೆ ಸದಾ ಬೆಂಬಲ ನೀಡುವ ಮುಸ್ತಫಾ ಅವರನ್ನು ನನಗೆ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಪ್ರಿಯಾಮಣಿ ಹೇಳಿದ್ದರು.

ಇದನ್ನೂ ಓದಿ: ‘ಕರಿಯ 2’ ನಿರ್ದೇಶಕರ ಜೊತೆ ‘ಬಾಡಿ ಗಾಡ್’ ಕಥೆ ಹೇಳಲು ಬಂದ ‘ಮಠ’ ಗುರುಪ್ರಸಾದ್​​

ಇದನ್ನೂ ಓದಿ: Rishab Shetty: ತೆಲುಗಿನಲ್ಲೂ ಮಿಂಚಲು ತಯಾರಾಗಿದ್ದಾನೆ ಕನ್ನಡದ ‘ಹೀರೋ’!

(Actress Priyamani and Mustafa Raj marriage is Invalid says Mustafa s first wife Ayesha)