Puneeth Rajkumar: ಕಂಠೀರವ ಸ್ಟುಡಿಯೋದಲ್ಲಿ ಭಾನುವಾರ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ
Puneeth Rajkumar Funeral: ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರ ಸಮಾಧಿಯ ಪಕ್ಕದಲ್ಲೇ ಭಾನುವಾರ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರು: ಹೃದಯಾಘಾತದಿಂದ ನಿಧನರಾಗಿರುವ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar Funeral) ಅವರ ಅಂತಿಮ ದರ್ಶನಕ್ಕೆ ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಇಡೀ ದಿನ ಅಭಿಮಾನಿಗಳು ಹಾಗೂ ಆತ್ಮೀಯರಿಗೆ ಅಪ್ಪು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರ ಸಮಾಧಿಯ ಪಕ್ಕದಲ್ಲೇ ಭಾನುವಾರ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ.
ಪುನೀತ್ ರಾಜ್ಕುಮಾರ್ ಅವರ ಮಗಳು ಅಮೆರಿಕದಿಂದ ಆಗಮಿಸಬೇಕಿರುವ ಹಿನ್ನೆಲೆ ಭಾನುವಾರ ನಟ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಪುನೀತ್ ರಾಜ್ಕುಮಾರ್ಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅವರ ತಂದೆ-ತಾಯಿಯಾದ ಡಾ. ರಾಜ್ ಕುಮಾರ್ ಹಾಗೂ, ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.
ಜಿಮ್ನಲ್ಲಿ ವರ್ಕೌಟ್ ಮಾಡಿದ ಬಳಿಕ ಹೃದಯಾಘಾತದಿಂದಾಗಿ ಇಂದು ವಿಧಿವಶರಾಗಿರುವ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆಯಿಂದ ನಾಳೆ ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಪುನೀತ್ ಅವರ ಅಭಿಮಾನಿಗಳು ಈ ದುಃಖಕರ ಸನ್ನಿವೇಶದಲ್ಲಿ ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು. ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಈ ಮೊದಲು ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿಯ ಪುನೀತ್ ಫಾರ್ಮ್ಹೌಸ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿತ್ತು. ಪುನೀತ್ ರಾಜ್ಕುಮಾರ್ ಈ ಜಾಗದಲ್ಲಿ ಡಾ. ರಾಜಕುಮಾರ್ ಶಾಲೆ ಆರಂಭಿಸಬೇಕೆಂಬ ಕನಸು ಕಂಡಿದ್ದರು. ಆದರೆ, ಈ ಫಾರ್ಮ್ಹೌಸಿನ ಬದಲು ಕಂಠೀರವ ಸ್ಟುಡಿಯೋದಲ್ಲೇ ಪುನೀತ್ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲೇ ದೊಡ್ಮನೆಯ ಪ್ರೀತಿಯ ಅಪ್ಪು ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ.
ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ರಜೆ: ಪುನೀತ್ ರಾಜ್ಕುಮಾರ್ ನಿಧನಕ್ಕೆ ಶೋಕ
Puneeth Rajkumar Songs: ಕಾಣದಂತೆ ಮಾಯವಾದನು!; ಪುನೀತ್ ರಾಜ್ಕುಮಾರ್ ಹಾಡಿದ ಟಾಪ್ 20 ಹಾಡುಗಳಿವು
Published On - 8:31 pm, Fri, 29 October 21