Sidhu Moose Wala: ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಗುಂಡೇಟಿನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ

Sidhu Moose Wala Death: ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದ ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಿಧು ಅವರ ಭದ್ರತೆ ಹಿಂಪಡೆದ ಬೆನ್ನಲ್ಲೇ ಈ ಘಟನೆ ನಡೆದಿದೆ.

Sidhu Moose Wala: ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಗುಂಡೇಟಿನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ
ಸಿಧು ಮೂಸೆ ವಾಲಾ
Updated By: shivaprasad.hs

Updated on: May 29, 2022 | 7:36 PM

ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ (Congress) ಸೇರಿದ್ದ ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ (Sidhu Moose Wala) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೂಸೆ ವಾಲಾ ಅವರು ಮಾನ್ಸಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಮ್​ ಆದ್ಮಿ ಪಾರ್ಟಿಯ ಡಾ.ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಮೂಸೆ ವಾಲಾ ಪರಾಭವಗೊಂಡಿದ್ದರು. ಮಾನ್ಸಾ ಜಿಲ್ಲೆಯ ಮೂಸೆ ಎಂಬ ಹಳ್ಳಿಯಿಂದ ಬಂದ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಸಿಧು ಮೂಸೆ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಬೆನ್ನಲ್ಲೇ ಸಿಧು ಅವರು ಹತ್ಯೆಗೀಡಾಗಿದ್ದಾರೆ. ಸಿಧು ಅವರು ಪ್ರಯಾಣಿಸುತ್ತಿದ್ದ ವಾಹನದ ವಿಡಿಯೋವನ್ನು ಎಎನ್​ಐ ಹಂಚಿಕೊಂಡಿದೆ.

ಹಾಡುಗಳಿಂದ ಖ್ಯಾತರಾಗಿದ್ದ ಸಿಧು:

ಮಾನ್ಸಾ ಜಿಲ್ಲೆಯ ಮೂಸೆ ವಾಲಾ ಗ್ರಾಮದಲ್ಲಿ 1993ರ ಜೂನ್ 17ರಂದು ಜನಿಸಿದ್ದ ಸಿಧು ಅವರಿಗೆ ಮಿಲಿಯನ್‌ಗಟ್ಟಲೆ ಅಭಿಮಾನಿಗಳಿದ್ದಾರೆ. ಗ್ಯಾಂಗ್​ಸ್ಟರ್ ರಾಪ್ ಹಾಡುಗಳ ಮೂಲಕ ಅವರು ಪ್ರಸಿದ್ಧರಾಗಿದ್ದರು. ಅವರ ಹಾಡುಗಳು ವಿವಾದ ಕೂಡ ಸೃಷ್ಟಿಸಿತ್ತು. ಬಂದೂಕು ಸಂಸ್ಕೃತಿಯನ್ನು ಹಾಗೂ ದರೋಡೆಯನ್ನು ಅವರ ಹಾಡುಗಳು ಉತ್ತೇಜಿಸುತ್ತವೆ ಎಂಬ ಆರೋಪ ಸಿಧು ಮೇಲಿತ್ತು.

2019ರ ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗಿದ್ದ ಅವರ ಹಾಡು ‘ಜಟ್ಟಿ ಜೆನಾಯ್ ಮೊರ್ಹ್ ದಿ ಬಂದೂಕ್ ವಾರ್ಗಿ’ 18 ನೇ ಶತಮಾನದ ಸಿಖ್ ಯೋಧ ಮೈ ಭಾಗೋ ಅವರ ಉಲ್ಲೇಖ ಹೊಂದಿರುವುದು ವಿವಾದ ಹುಟ್ಟುಹಾಕಿತ್ತು. ಸಿಖ್ ಯೋಧರನ್ನು ಕೆಟ್ಟದಾಗಿ ತೋರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಸಿಧು ಕ್ಷಮೆಯಾಚಿಸಿದ್ದರು.

2020ರಲ್ಲಿ ರಿಲೀಸ್ ಆಗಿದ್ದ ಮತ್ತೊಂದು ಹಾಡು ‘ಸಂಜು’ ಕೂಡ ವಿವಾದ ಸೃಷ್ಟಿಸಿತ್ತು. ತಮ್ಮನ್ನು ಸಂಜಯ್ ದತ್​ಗೆ ಸಿಧು ಹೋಲಿಸಿಕೊಂಡಿದ್ದರು. 2020ರ ಮೇಯಲ್ಲಿ ಬರ್ನಾಲಾ ಗ್ರಾಮದಲ್ಲಿ ಫೈರಿಂಗ್ ರೇಂಜ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಕ್ಲಿಪ್​ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಮೇಲೆ ಸಿಧು ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಸಂಗ್ರೂರ್ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.

ಸಂತಾಪ ಸೂಚಿಸಿದ ಕಾಂಗ್ರೆಸ್:

ಕಾಂಗ್ರೆಸ್ ಪಕ್ಷವು ಸಿಧು ಮರಣಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ‘ಪಂಜಾಬ್‌ನ ಕಾಂಗ್ರೆಸ್ ಅಭ್ಯರ್ಥಿ ಮತ್ತು ಪ್ರತಿಭಾವಂತ ಸಂಗೀತಗಾರ ಸಿಧು ಮೂಸ್ ವಾಲಾ ಅವರ ಹತ್ಯೆಯು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇಡೀ ರಾಷ್ಟ್ರಕ್ಕೆ ಭೀಕರ ಆಘಾತ ತಂದಿದೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಸಂತಾಪಗಳು’ ಎಂದು ಬರೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Sun, 29 May 22