Box Office Collections: ಈ ವರ್ಷ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರ ಯಾವುದು ಗೊತ್ತಾ?
Doctor Strange in the Multiverse of Madness BO Collectios: ಈ ವರ್ಷ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂಬ ದಾಖಲೆ ಇದುವರೆಗೆ ‘ದಿ ಬ್ಯಾಟ್ಮ್ಯಾನ್’ ಹೆಸರಿನಲ್ಲಿತ್ತು. ಡಿಸಿ ನಿರ್ಮಾಣದ ಆ ಚಿತ್ರ ವಿಶ್ವಾದ್ಯಂತ ಒಟ್ಟಾರೆ 769 ಮಿಲಿಯನ್ ಡಾಲರ್ (ಸುಮಾರು 5,974 ಕೋಟಿ ರೂ) ಗಳಿಸಿತ್ತು. ಇದೀಗ ಆ ದಾಖಲೆಯನ್ನು ಮುರಿದಿದೆ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’.
ಕೊರೊನಾ ಸಾಂಕ್ರಮಿಕದಿಂದ ಹೊಡೆತ ತಿಂದಿದ್ದ ಚಿತ್ರರಂಗ ಈಗ ಭರ್ಜರಿಯಾಗಿ ಚೇತರಿಸಿಕೊಳ್ಳುತ್ತಿದೆ. ಇದು ಭಾರತೀಯ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಹಾಲಿವುಡ್ ಚಿತ್ರಗಳೂ ಕೂಡ ಬಾಕ್ಸಾಫೀಸ್ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿವೆ. ಇತ್ತೀಚೆಗೆ ತೆರೆ ಕಂಡಿದ್ದ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ (Doctor Strange in the Multiverse of Madness)ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿರುವ ಚಿತ್ರವು ಇದೀಗ ಹೊಸ ದಾಖಲೆ ಬರೆದಿದೆ. ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರದಲ್ಲಿ ಬೆನೆಡಿಕ್ಟ್ ಕಂಬರ್‌ಬ್ಯಾಚ್ ಮತ್ತು ಎಲಿಜಬೆತ್ ಓಲ್ಸೆನ್ನ ನಟಿಸಿದ್ದಾರೆ. ಈ ವರ್ಷ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂಬ ದಾಖಲೆ ಇದುವರೆಗೆ ‘ದಿ ಬ್ಯಾಟ್ಮ್ಯಾನ್’ ಹೆಸರಿನಲ್ಲಿತ್ತು. ಡಿಸಿ ನಿರ್ಮಾಣದ ಆ ಚಿತ್ರ ವಿಶ್ವಾದ್ಯಂತ ಒಟ್ಟಾರೆ 769 ಮಿಲಿಯನ್ ಡಾಲರ್ ಗಳಿಸಿತ್ತು. ರೂಪಾಯಿಯ ಲೆಕ್ಕಾಚಾರದಲ್ಲಿ ಇದನ್ನು ನೋಡುವುದಾದರೆ ಸುಮಾರು 5,974 ಕೋಟಿ ರೂಗಳು. ಇದೀಗ ಆ ದಾಖಲೆಯನ್ನು ಮುರಿದಿದೆ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’.
ಫೋರ್ಬ್ಸ್ ವರದಿಯ ಪ್ರಕಾರ ಶನಿವಾರದವರೆಗಿನ ಲೆಕ್ಕಾಚಾರದಲ್ಲಿ ಬೆನೆಡಿಕ್ಟ್ ಕಂಬರ್‌ಬ್ಯಾಚ್ ನಟನೆಯ ಚಿತ್ರವು ಸುಮಾರು 800 ಮಿಲಿಯನ್ ಡಾಲರ್ ಗಳಿಸಿದೆ. ಅರ್ಥಾತ್ ಭಾರತೀಯ ಕರೆನ್ಸಿ ಮೊತ್ತದಲ್ಲಿ ಸುಮಾರು 6,215 ಕೋಟಿ ರೂಗಳು. ವೀಕೆಂಡ್ ಆಗಿರುವ ಕಾರಣ, ಭಾನುವಾರದ ವೇಳೆಗೆ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗಲಿದೆ. ಅಮೇರಿಕಾದಲ್ಲಿ ಚಿತ್ರವು $350 ಮಿಲಿಯನ್ ಗಳಿಸಿದ್ದು, ವಿದೇಶಗಳಲ್ಲಿ $465 ಮಿಲಿಯನ್ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ತಜ್ಞರ ಪ್ರಕಾರ ಚಿತ್ರವು ಸುಮಾರು 950 ಮಿಲಿಯನ್ ಡಾಲರ್ ಗಳಿಸುವ ನಿರೀಕ್ಷೆ ಇದೆ. ಆದರೆ ಬಿಲಿಯನ್ ಡಾಲರ್ ಮೈಲಿಗಲ್ಲನ್ನು ತಲುಪಲಿದೆಯೇ ಎನ್ನುವುದಕ್ಕೆ ಕಾದು ನೋಡಬೇಕು ಎಂದು ವರದಿಗಳು ಹೇಳಿವೆ. ಈ ಚಿತ್ರ 20 ಕೋಟಿ ಡಾಲರ್ (ಸುಮಾರು 1,550 ಕೋಟಿ ರೂ) ವೆಚ್ಚದಲ್ಲಿ ತಯಾರಾಗಿತ್ತು.
ಸ್ಯಾಮ್ ರೈಮಿ ನಿರ್ದೇಶನದ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಚಿತ್ರವು 2018ರಲ್ಲಿ ತೆರೆಕಂಡಿದ್ದ ‘ಡಾಕ್ಟರ್ ಸ್ಟ್ರೇಂಜ್’ ಚಿತ್ರದ ಸೀಕ್ವೆಲ್ ಆಗಿದೆ. ಇದಲ್ಲದೇ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’ ಹಾಗೂ ‘ವಂಡಾವಿಷನ್’ ಚಿತ್ರಗಳ ಕತೆಗೂ ಕನೆಕ್ಟ್ ಆಗಿದೆ. ಇದು ಚಿತ್ರದ ಗಳಿಕೆಗೆ ದೊಡ್ಡ ಪ್ಲಸ್ ಆಗಿದೆ ಎಂದು ಬಾಕ್ಸಾಫೀಸ್ ತಜ್ಞರು ವಿಶ್ಲೇಷಿಸಿದ್ದಾರೆ.
ಇತ್ತ ‘ದಿ ಬ್ಯಾಟ್ಮ್ಯಾನ್’ ಚಿತ್ರ ಸ್ವತಂತ್ರ ಚಿತ್ರವಾಗಿತ್ತು. ಈ ಮೊದಲು ಬಂದಿದ್ದ ಬ್ಯಾಟ್ಮನ್ ಚಿತ್ರಗಳ ಕತೆಯನ್ನು ಈ ಚಿತ್ರ ಹೊಂದದೇ ಪ್ರತ್ಯೇಕ ಕತೆ ಹೊಂದಿದ್ದು. ಅದರ ಕಲೆಕ್ಷನ್ ಕಡಿಮೆಯಾಗಲು ಕಾರಣವಾಗಿರಬಹುದು ಎನ್ನುವ ವಿಶ್ಲೇಷಣೆಯೂ ಇದೆ. ಕಾರಣ ಡಿಸಿ ನಿರ್ಮಾಣದ ಈ ಹಿಂದಿನ ‘ಆಕ್ವಾಮ್ಯಾನ್’ ಹಾಗೂ ‘ದಿ ಡಾರ್ಕ್ ನೈಟ್’ 1 ಬಿಲಿಯನ್ ಡಾಲರ್ ಮೊತ್ತವನ್ನು ಕಲೆಕ್ಷನ್ ಮಾಡಿದ್ದವು. ಆದರೆ ‘ದಿ ಬ್ಯಾಟ್ಮ್ಯಾನ್’ಗೆ ಆ ಮೈಲಿಗಲ್ಲು ತಲುಪಲು ಸಾಧ್ಯವಾಗಿಲ್ಲ. ಅಂದಹಾಗೆ ‘ದಿ ಬ್ಯಾಟ್ಮ್ಯಾನ್’ ಮುಂದಿನ ಭಾಗವನ್ನು ಈಗಾಗಲೇ ಘೋಷಿಸಲಾಗಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Sun, 29 May 22