ಪತ್ನಿಯ ಆ ಅವತಾರ ಕಂಡು ಬಿಟ್ಟುಬಿಡುವ ಮನಸ್ಸು ಮಾಡಿದ್ದೆ: ನಿರ್ದೇಶಕ ಪುರಿ ಜಗನ್ನಾಥ್

|

Updated on: Mar 27, 2024 | 12:49 PM

Puri Jagannath: ನಟಿ ಚಾರ್ಮಿ ಇಂದಾಗಿ ನಿರ್ದೇಶಕ ಪುರಿ ಜಗನ್ನಾಥ್ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಪುರಿ ಜಗನ್ನಾಥ್ ತಮ್ಮ ಪತ್ನಿ ಲಾವಣ್ಯಾ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.

ಪತ್ನಿಯ ಆ ಅವತಾರ ಕಂಡು ಬಿಟ್ಟುಬಿಡುವ ಮನಸ್ಸು ಮಾಡಿದ್ದೆ: ನಿರ್ದೇಶಕ ಪುರಿ ಜಗನ್ನಾಥ್
ಪುರಿ ಜಗನ್ನಾಥ್
Follow us on

ಪುರಿ ಜಗನ್ನಾಥ್ (Puri Jagannath) ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನಿರ್ದೇಶಕ. ಸ್ವತಃ ಎಸ್​ಎಸ್ ರಾಜಮೌಳಿ ಹಾಗೂ ಅವರ ತಂದೆ ಕಥೆಗಾರ ವಿಜಯೇಂದ್ರಪ್ರಸಾದ್ ಅವರು ಮೆಚ್ಚಿಕೊಂಡು ಪುರಿ ಅವರ ಪ್ರತಿಭೆಯನ್ನು ಹಲವು ವೇದಿಕೆಗಳ ಮೇಲೆ ಕೊಂಡಾಡಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರಂತೂ ಪುರಿ ಜಗನ್ನಾಥ್ ಚಿತ್ರವನ್ನು ತಮ್ಮ ಮೊಬೈಲ್​ನ ವಾಲ್​ಪೇಪರ್ ಆಗಿ ಇರಿಸಿಕೊಂಡಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಪುರಿ, ನಾಯಕ ನಟರನ್ನು ಸೂಪರ್ ಸ್ಟಾರ್​ಗಳನ್ನಾಗಿ ಮಾಡಿದ್ದಾರೆ. ಪುನೀತ್ ರಾಜ್​ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ನಿರ್ದೇಶಿಸಿದ್ದು ಇದೇ ಪುರಿ ಜಗನ್ನಾಥ್. ಇವರು ತಮ್ಮ ಪತ್ನಿಯ ಬಗ್ಗೆ ಮಾತನಾಡಿರುವ ತುಸು ಹಳೆಯ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.

ಪುರಿ ಜಗನ್ನಾಥ್ ಸಂಸಾರದಲ್ಲಿ ಕಳೆದ ಕೆಲ ವರ್ಷಗಳಿಂದ ಬಿರುಗಾಳಿ ಎದ್ದಿದೆ. ಪುರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಅತ್ಯಂತ ಆಪ್ತವಾಗಿದ್ದು, ಒಟ್ಟೊಟ್ಟಿಗೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪುರಿ ತಮ್ಮ ಪತ್ನಿ ಲಾವಣ್ಯಾಗೆ ವಿಚ್ಛೇದನ ನೀಡದೆ ಚಾರ್ಮಿ ಜೊತೆ ಸುತ್ತಾಡುತ್ತಿದ್ದಾರೆ. ಇದರ ಬಗ್ಗೆ ಪುರಿ ಜಗನ್ನಾಥ್ ಪತ್ನಿ ಲಾವಣ್ಯ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪುರಿ ಪುತ್ರ ಸಹ ಈ ಬಗ್ಗೆ ಮಾತನಾಡಿದ್ದಾರೆ. ಪುರಿ ಜಗನ್ನಾಥ್ ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಪತ್ನಿ ಲಾವಣ್ಯ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹೇಳಿದ್ದರು. ಆ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ:ನಿರ್ದೇಶಕರಾಗುವುದಕ್ಕೂ ಮೊದಲು ಪುರಿ ಜಗನ್ನಾಥ್ ಏನು ಮಾಡುತ್ತಿದ್ದರು? ಇಲ್ಲಿದೆ ಅಚ್ಚರಿಯ ವಿಚಾರ

ಲಾವಣ್ಯಾ ಜೊತೆಗಿನ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದ ಪುರಿ ಜಗನ್ನಾಥ್, ಯಾವುದೋ ಸಿನಿಮಾ ಶೂಟಿಂಗ್​ನಲ್ಲಿ ಲಾವಣ್ಯಾರನ್ನು ನಾನು ನೋಡಿದೆ. ಆಗ ನನ್ನ ಬಳಿ ವಿಸಿಟಿಂಗ್ ಕಾರ್ಡ್ ಇತ್ತು. ಆ ಕಾರ್ಡ್ ಅವರ ಕೈಗೆ ಕೊಟ್ಟು ಮದುವೆ ಆಗುವುದಾದರೆ ಕಾಲ್ ಮಾಡು ಎಂದಿದ್ದೆ. ವಾರದ ಬಳಿಕ ಆಕೆ ಕಾಲ್ ಮಾಡಿ, ಇನ್ನೂ ಎಷ್ಟು ಜನರಿಗೆ ಹೀಗೆ ಕಾರ್ಡ್ ಕೊಟ್ಟಿದ್ದೀಯ ಎಂದು ಕೇಳಿದ್ದಳು. ಅದಾದ ಬಳಿಕ ಆಗಾಗ್ಗೆ ಪರಸ್ಪರ ಭೇಟಿ ಆಗುತ್ತಿದ್ದೆವು. ಆಗ ನನಗೆ ತಿಂಗಳಿಗೆಲ್ಲ ಕೇವಲ 1000 ರೂಪಾಯಿ ಸಂಬಳವಷ್ಟೆ ಇತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.

ಲಾವಣ್ಯಾ ಭೇಟಿಯಾಗಲು ಬಂದಾಗೆಲ್ಲ ನಾನು ಗೆಳೆಯರ ಬಳಿ ಸಾಲ ಪಡೆದುಕೊಂಡು ಆಕೆಯನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದೆ. ಒಮ್ಮೆ ಒಂದು ಹೋಟೆಲ್​ಗೆ ಹೋದೆವು. ಆ ಹೋಟೆಲ್​ಗೆ ಹೋಗಬೇಕೆಂದು ಲಾವಣ್ಯಾಳೆ ಹೇಳಿದ್ದಳು. ಅಲ್ಲಿಗೆ ಹೋದ ಬಳಿಕ ಒಂದು ತಂದೂರಿ ಚಿಕನ್ ಆರ್ಡರ್ ಮಾಡಿದಳು. ನಾನು ಅಲ್ಲಿಯವರೆಗೆ ತಂದೂರಿ ತಿಂದಿರಲಿಲ್ಲ. ಅಂದು ಲಾವಣ್ಯಾ ತಂದೂರಿ ಚಿಕನ್ ತಿನ್ನುವುದು ನೋಡಿ ನಾನು ಗಾಬರಿಯಾಗಿಬಿಟ್ಟೆ. ಅಷ್ಟು ಅಚ್ಚುಕಟ್ಟಾಗಿ ಪೂರ್ತಿ ತಂದೂರಿ ತಿಂದು ಮುಗಿಸಿದಳು. ನಾನು ಬಿಲ್ ಕಟ್ಟುವ ಯೋಚನೆಯಲ್ಲಿದ್ದ ಕಾರಣ ಸರಿಯಾಗಿ ತಿನ್ನಲೇ ಇಲ್ಲ’ ಎಂದು ನೆನಪು ಮಾಡಿಕೊಂಡಿದ್ದಾರೆ.

ಹೋಟೆಲ್​ನಿಂದ ಹೊರಬಂದ ಬಳಿಕ ಈಕೆ ಹೀಗೆ ತಿನ್ನುತ್ತಾಳೆ. ಇವರ ಅಪ್ಪ ಚೆನ್ನಾಗಿ ಚಿಕನ್-ಮಟನ್ ತಿನ್ನಿಸಿ ಬೆಳೆಸಿದ್ದಾನೆ ಅನಿಸುತ್ತದೆ ನನ್ನ ಕೈಯಲ್ಲಿ ಈಕೆಯನ್ನು ಸಾಕಲು ಆಗುವುದಿಲ್ಲ ಈಕೆಯನ್ನು ಬಿಟ್ಟುಬಿಡೋಣ ಅಂದುಕೊಂಡಿದ್ದರಂತೆ. ಆ ಬಳಿಕ ಲಾವಣ್ಯಾಗೆ ಹೇಳಿದ್ದರಂತೆ. ಇನ್ನು ಮುಂದೆ ಭೇಟಿ ಆಗುವುದೆಲ್ಲ ಇಲ್ಲ. ಏನಿದ್ದರೂ ಮದುವೆ ಅಷ್ಟೆ ಎಂದು. ಅದರಂತೆ ಇಬ್ಬರೂ ಒಟ್ಟಿಗೆ ಮದುವೆ ಆದರು. ಈ ಜೋಡಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ