ಸುಕುಮಾರ್ ನಿರ್ದೇಶನ ಮಾಡಿದ ‘ಪುಷ್ಪ 2’ ಸಿನಿಮಾ ಈಗಾಗಲೇ ವಿಶ್ವಾದ್ಯಂತ 1830 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಹಲವು ಸಿನಿಮಾಗಳ ದಾಖಲೆಯನ್ನು ‘ಪುಷ್ಪ 2’ ಅಳಿಸಿ ಹಾಕಿದೆ. ಈಗ ಈ ಚಿತ್ರ 2000 ಕೋಟಿ ರೂಪಾಯಿ ಗಳಿಕೆ ಮಾಡುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ಈ ಮೈಲುಗಲ್ಲು ತಲುಪಿದರೆ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಹಿರಿಹಿರಿ ಹಿಗ್ಗಲಿದ್ದಾರೆ. 2000 ಕೋಟಿ ರೂ. ಟಾರ್ಗೆಟ್ ರೀಚ್ ಆಗುವುದು ತುಸು ಕಷ್ಟ. ಆದರೂ ಕೂಡ ಚಿತ್ರತಂಡದಿಂದ ಹೊಸ ಪ್ರಯತ್ನ ಮಾಡಲಾಗುತ್ತಿದೆ.
ಜನವರಿ 11ರಂದು ನಿರ್ದೇಶಕ ಸುಕುಮಾರ್ ಅವರ ಹುಟ್ಟುಹಬ್ಬ. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ. ‘ಪುಷ್ಪ 2’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡ ಕಾರಣ ಈ ವರ್ಷದ ಬರ್ತ್ಡೇ ಸುಕುಮಾರ್ ಪಾಲಿಗೆ ತುಂಬ ಸ್ಪೆಷಲ್. ಅವರ ಜನ್ಮದಿನದ ಪ್ರಯುಕ್ತ ‘ಪುಷ್ಪ 2’ ತಂಡದಿಂದ ಹೊಸದೊಂದು ಪ್ರೋಮೋ ರಿಲೀಸ್ ಮಾಡಲಿದೆ. ಈ ಮೊದಲು ಚಿತ್ರದಲ್ಲಿ ನೋಡಿರದ ದೃಶ್ಯ ಈ ಪ್ರೋಮೋದಲ್ಲಿದೆ.
ಈಗಾಗಲೇ ‘ಪುಷ್ಪ 2’ ಸಿನಿಮಾದ ಅವಧಿ 3 ಗಂಟೆ 20 ನಿಮಿಷ ಇದೆ. ಅದಕ್ಕೆ ಇನ್ನೂ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.11ರಿಂದಲೇ ಈ ರೀಲೋಡೆಡ್ ವರ್ಷನ್ ಪ್ರದರ್ಶನ ಆರಂಭ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಜನವರಿ 17ರಿಂದ ಹೆಚ್ಚುವರಿ 20 ನಿಮಿಷಗಳ ಫೂಟೇಜ್ ಇರುವ ‘ಪುಷ್ಪ 2’ ಸಿನಿಮಾ ಪ್ರದರ್ಶನ ಕಾಣಲಿದೆ.
ಇದನ್ನೂ ಓದಿ: ‘ಪುಷ್ಪ 2’ ಗೆದ್ದರೂ ಸಂಭ್ರಮವಿಲ್ಲ; ಇದು ಅಲ್ಲು ಅರ್ಜುನ್ ಪರಿಸ್ಥಿತಿ
ರೀಲೋಡೆಡ್ ವರ್ಷನ್ ನೋಡಲು ಪ್ರೇಕ್ಷಕರು ಮತ್ತೆ ಚಿತ್ರಮಂದಿರಕ್ಕೆ ಬಂದರೆ ಸಿನಿಮಾದ ಕಲೆಕ್ಷನ್ ಹೆಚ್ಚಾಗಲಿದೆ. ಅದರಿಂದ 2000 ಕೋಟಿ ರೂಪಾಯಿ ತಲುಪಬಹುದು ಎಂಬ ನಿರೀಕ್ಷೆ ಕೂಡ ಕೆಲವರಿಗೆ ಇದೆ. ಒಂದು ವೇಳೆ ಅಭಿಮಾನಿಯ ನಿಧನ ಸಂಭವಿಸಿದೇ ಇದ್ದಿದ್ದರೆ ಅಲ್ಲು ಅರ್ಜುನ್ ಅವರು ಹೆಚ್ಚಿನ ಪ್ರಚಾರದಲ್ಲಿ ಭಾಗಿ ಆಗಿರುತ್ತಿದ್ದರು. ಆಗ ಖಂಡಿತವಾಗಿಯೂ ಕಲೆಕ್ಷನ್ ಹೆಚ್ಚಾಗುತ್ತಿತ್ತು. ಆದರೆ ಬಂಧನ, ಜಾಮೀನು, ಬಿಡುಗಡೆ ಎಂಬಿತ್ಯಾದಿ ವಿವಾದಗಳಿಂದಾಗಿ ಅವರು ಮೌನವಾಗಿ ಉಳಿಯುವಂತೆ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:12 pm, Sun, 12 January 25