ಸಿನಿಮಾ: ರಾಧೆ ಶ್ಯಾಮ್
ಪಾತ್ರವರ್ಗ: ಪ್ರಭಾಸ್, ಪೂಜಾ ಹೆಗ್ಡೆ, ಜಗಪತಿಬಾಬು ಮೊದಲಾದವರು
ನಿರ್ದೇಶನ: ರಾಧ ಕೃಷ್ಣ
ನಿರ್ಮಾಣ: ಯುವಿ ಕ್ರಿಯೇಷನ್ಸ್
ಸ್ಟಾರ್: 2/5
Radhe Syam Movie Review: ‘ಬಾಹುಬಲಿ’ ತೆರೆಕಂಡ ನಂತರದಲ್ಲಿ ಪ್ರಭಾಸ್ ಇಮೇಜ್ ಸಂಪೂರ್ಣ ಬದಲಾಗಿದೆ. ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆದರೆ, ‘ಸಾಹೋ’ ಸಿನಿಮಾ ಆಯ್ಕೆ ಮಾಡಿಕೊಂಡು ಪ್ರಭಾಸ್ ಎಡವಿದ್ದರು. ಈಗ ‘ರಾಧೆ ಶ್ಯಾಮ್’ ಸಿನಿಮಾದಲ್ಲೂ ಪ್ರಭಾಸ್ ಮುಗ್ಗರಿಸಿರುವುದು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಭಾಸವಾಗುತ್ತದೆ. ಭವಿಷ್ಯ ಹೇಳುವ ವಿಕ್ರಮಾದಿತ್ಯನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಆದರೆ, ನಿರ್ದೇಶಕರಿಂಧ ಕಥೆ ಕೇಳುವಾಗ ಒಮ್ಮೆ ಸಿನಿಮಾ ಭವಿಷ್ಯದ ಬಗ್ಗೆ ಅವರು ಆಲೋಚನೆ ಮಾಡಿದ್ದರೆ ಹೀಗೆ ಮುಗ್ಗರಿಸುವುದು ತಪ್ಪುತ್ತಿತ್ತೇನೋ.
ವಿಕ್ರಮಾದಿತ್ಯ (ಪ್ರಭಾಸ್) ಓರ್ವ ದೊಡ್ಡ ಪಾಮಿಸ್ಟ್. ಅಂದರೆ ಹಸ್ತ ನೋಡಿ ಭವಿಷ್ಯ ಹೇಳುವ ವ್ಯಕ್ತಿ. ಅವನಿಗೆ ಯಾರ ಕೈ ನೋಡಿದರೂ ಹಿಂದೆ ಆಗಿದ್ದು, ಮುಂದೆ ಆಗೋದು ಎಲ್ಲವೂ ಗೊತ್ತಾಗುತ್ತದೆ. ಆದರೆ, ಅವನ ಕೈಯಲ್ಲಿ ಪ್ರೀತಿ ರೇಖೆಯೇ ಇರುವುದಿಲ್ಲ. ಹೀಗಾಗಿ ಪ್ರೀತಿ ಮಾಡುವ ಸಾಹಸಕ್ಕೆ ಹೋಗುವುದಿಲ್ಲ. ಅವನದ್ದೇನಿದ್ದರೂ ಎರಡು ದಿನ ಡೇಟಿಂಗ್. ಆ ಬಳಿಕ ಹುಡುಗಿಯಿಂದ ಬೇರೆ ಆಗಿ ಮತ್ತೊಂದು ಹುಡುಗಿ ಜತೆ ಸುತ್ತಾಡೋದು. ಆಗ ಅವನ ಲೈಫ್ನಲ್ಲಿ ಬರೋದು ಡಾಕ್ಟರ್ ಪ್ರೇರಣಾ. ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಹೀರೋಗೆ ಹೀರೋಯಿನ್ ಮೇಲೆ ಪ್ರೀತಿ ಉಂಟಾಗುತ್ತದೆ. ಆದರೆ, ಆಕೆಗೆ ಒಂದು ಮಾರಣಾಂತಿಕ ಕಾಯಿಲೆ ಇರುತ್ತದೆ. ಇದನ್ನು ತಿಳಿದ ನಂತರ ಹೀರೋ ಹೇಗೆ ರಿಯಾಕ್ಟ್ ಮಾಡುತ್ತಾನೆ? ನಿಜಕ್ಕೂ ಆಕೆ ಸಾಯುತ್ತಾಳಾ? ಲವ್ ರೇಖೆ ಇಲ್ಲದ ಹೀರೋಗೆ ಪ್ರೀತಿ ಸಿಗುತ್ತದೆಯೇ ಎಂಬುದನ್ನು ನೋಡೋಕೆ ಸಿನಿಮಾ ಕಣ್ತುಂಬಿಕೊಳ್ಳಬೇಕು.
ಪ್ರಭಾಸ್ ಸಿನಿಮಾ ಎಂದಾಕ್ಷಣ ನೆನಪಿಗೆ ಬರೋದು ಒಂದಷ್ಟು ಮಾಸ್ ಆ್ಯಕ್ಷನ್, ಮಾಸ್ ಡೈಲಾಗ್. ಕಮರ್ಷಿಯಲ್ ಸಿನಿಮಾ ಇಷ್ಟಪಡುವವರು ಮಾಸ್ ಮಸಾಲೆಯನ್ನೇ ಇಷ್ಟಪಡುತ್ತಾರೆ. ಹೀರೋ ಹೊಡೆದ ಏಟಿಗೆ ರೌಡಿಗಳು ಚೆಲ್ಲಾಪಿಲ್ಲಿ ಆಗಿ ಬಿದ್ದರೆ ನೋಡುಗರಿಗೂ ಖುಷಿ. ಇದ್ಯಾವುದು ಇಲ್ಲವೆಂದರೆ ಕನಿಷ್ಠ ಕಥೆಯಲ್ಲಾದರೂ ಗಟ್ಟಿತನ ಇರಬೇಕು. ಆದರೆ, ‘ರಾಧೆ ಶ್ಯಾಮ್’ ಚಿತ್ರದಲ್ಲಿ ಒಂದೇ ಒಂದು ಫೈಟ್ ಕೂಡ ಇಲ್ಲ! ಕಥೆಯಲ್ಲಿ ಗಟ್ಟಿತನ ಇಲ್ಲ. ನಿಂತ ನೀರಂತೆ ಸಿನಿಮಾ ಫೀಲ್ ಆಗುತ್ತದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ದೊಡ್ಡ ನಿರಾಸೆ ನೀಡಲಿದೆ. ಸಿನಿಮಾ ಕೊನೆಯಲ್ಲಿ ಬರುವ ಒಂದು ಸಮುದ್ರದ ದೃಶ್ಯ ಮಾತ್ರ ಸ್ವಲ್ಪ ಮೈ ನವಿರೇಳಿಸುತ್ತದೆ. ಉಳಿದಂತೆ ಎಲ್ಲವೂ ಸಪ್ಪೆ. ಪ್ರಭಾಸ್ ತಮ್ಮ ಮಾಸ್ ಆ್ಯಕ್ಷನ್ ಅವತಾರವನ್ನು ಬದಿಗಿಟ್ಟು ಒಂದು ಹೊಸ ಪ್ರಯೋಗ ಮಾಡೋಕೆ ಹೋಗಿದ್ದು ನಿಜಕ್ಕೂ ಮೆಚ್ಚಿಕೊಳ್ಳುವಂತಹದ್ದು. ಆದರೆ, ನೂರಾರು ಕೋಟಿ ಖರ್ಚು ಮಾಡಿ ಈ ರೀತಿಯ ಸಿನಿಮಾ ಮಾಡುವ ಅಗತ್ಯವಿರಲಿಲ್ಲ ಎಂದು ಪ್ರೇಕ್ಷಕನಿಗೆ ಅನಿಸದೇ ಇರದು.
ಈ ಸಿನಿಮಾದಲ್ಲಿ ಜಸ್ಟಿನ್ ಪ್ರಭಾಕರ್ ಸಂಗೀತ ಮೋಡಿ ಮಾಡಿಲ್ಲ. ಯಾವ ಹಾಡುಗಳು ಮನಸ್ಸಿನಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಎಸ್. ಥಮನ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಚೆನ್ನಾಗಿ ಒಪ್ಪಿದೆ. ಪ್ರತಿ ದೃಶ್ಯವನ್ನು ಸೆರೆ ಹಿಡಿಯಲು ನೀರಿನಂತೆ ಹಣ ಖರ್ಚು ಮಾಡಿದ್ದು ಪ್ರೇಕ್ಷಕನಿಗೆ ಮನದಟ್ಟಾಗುತ್ತದೆ. ಈ ಕಾರಣಕ್ಕೆ ದೃಶ್ಯವೈಭವ ಜೋರಾಗಿದೆ. ವಿದೇಶದ ಲೊಕೇಷನ್ಗಳು ಕಣ್ಣಿಗೆ ಮುದ ನೀಡುತ್ತವೆ. ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿದೆ. ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು. ಲಾಜಿಕ್ ಬಗ್ಗೆ ನಿರ್ದೇಶಕ ರಾಧ ಕೃಷ್ಣ ಗಮನ ಹರಿಸಬೇಕಿತ್ತು. ನಾವು ಪ್ರೇಕ್ಷಕರಿಗೆ ಈ ಕಥೆಯನ್ನು ಏಕೆ ಹೇಳುತ್ತಿದ್ದೇವೆ ಎನ್ನುವ ಸ್ಪಷ್ಟತೆ ಅವರಿಗೆ ಬೇಕಿತ್ತು.
ಆರಂಭದಲ್ಲಿ ಸಿನಿಮಾ ಟೇಕ್ ಆಫ್ ಆಗೋಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮುಂದೇನಾದರೂ ಬರಬಹುದು ಎಂದು ಕಾದು ಕೂತ ಪ್ರೇಕ್ಷಕನಿಗೆ ಕೊನೆಯಲ್ಲಿ ಸಿಗೋದು ನಿರಾಸೆ ಮಾತ್ರ. ಪೂಜಾ ಹೆಗ್ಡೆ ನಟನೆ ಉತ್ತಮವಾಗಿದೆ. ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭಾಗ್ಯಶ್ರೀ, ಕೃಷ್ಣಂ ರಾಜು, ಸತ್ಯರಾಜ್ ಮೊದಲಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜಗಪತಿ ಬಾಬು ಮಾಡಿದ ಪಾತ್ರವನ್ನು ಬೇರೆಯವರು ಮಾಡಿದ್ದರೂ ಅಷ್ಟು ದೊಡ್ಡ ವ್ಯತ್ಯಾಸ ಏನೂ ಆಗುತ್ತಿರಲಿಲ್ಲ.
ಇದನ್ನೂ ಓದಿ:‘ರಾಧೆ ಶ್ಯಾಮ್’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್; ಈಗಾಗಲೇ ಹರಿದು ಬಂದಿದ್ದು ಎಷ್ಟು ಕೋಟಿ ರೂಪಾಯಿ?
Published On - 10:46 am, Fri, 11 March 22