ಜನರನ್ನು ಬೀದಿ ನಾಯಿಗೆ ಹೋಲಿಸಿದ ರಾಘವ ಲಾರೆನ್ಸ್? ಆಕ್ರೋಶದ ಬಳಿಕ ಸ್ಪಷ್ಟನೆ ನೀಡಿದ ನಟ

‘ನಾವು ಹೊಸ ಪರಿಸರಕ್ಕೆ ಅಥವಾ ಹೊಸ ಮನೆಗೆ ಹೋದಾಗ ಸುತ್ತಮುತ್ತಲಿನ ವಾತಾವರಣ, ಅಲ್ಲಿನ ನಾಯಿಗಳ ಸ್ವಭಾವ, ಅವುಗಳ ಅಭ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ ಅಂತ ನಾನು ಹೇಳಿದ್ದೆ. ಜನರನ್ನು ನಾಯಿಗಳೆಂದು ಕರೆಯುಂತಹ ವ್ಯಕ್ತಿ ನಾನಲ್ಲ. ದಯವಿಟ್ಟು ಪೂರ್ತಿ ವಿಡಿಯೋ ನೋಡಿ’ ಎಂದು ರಾಘವ ಲಾರೆನ್ಸ್ ಮನವಿ ಮಾಡಿದ್ದಾರೆ.

ಜನರನ್ನು ಬೀದಿ ನಾಯಿಗೆ ಹೋಲಿಸಿದ ರಾಘವ ಲಾರೆನ್ಸ್? ಆಕ್ರೋಶದ ಬಳಿಕ ಸ್ಪಷ್ಟನೆ ನೀಡಿದ ನಟ
Raghava Lawrence

Updated on: Jun 15, 2026 | 6:44 PM

ಇತ್ತೀಚೆಗಷ್ಟೇ ರಾಜಕೀಯ ಪ್ರವೇಶದ ಸುಳಿವು ನೀಡಿ ಸುದ್ದಿಯಾಗಿದ್ದ ಖ್ಯಾತ ನಟ, ನೃತ್ಯ ನಿರ್ದೇಶಕ ರಾಘವ ಲಾರೆನ್ಸ್ (Raghava Lawrence) ಈಗ ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಆಡಳಿತದ ಕುರಿತು ಮಾತನಾಡುವಾಗ ಅವರು ಬಳಸಿದ ಉದಾಹರಣೆಯೊಂದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಾಘವ ಲಾರೆನ್ಸ್ ಅವರು ಜನರನ್ನು ಬೀದಿ ನಾಯಿಗಳಿಗೆ (Stray Dog) ಹೋಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ತಮ್ಮ ರಾಜಕೀಯ ಎಂಟ್ರಿ ಮತ್ತು ವಿಜಯ್ ನೇತೃತ್ವದ ನೂತನ ತಮಿಳುನಾಡು ಸರ್ಕಾರದ ಒಂದು ತಿಂಗಳ ಆಡಳಿತದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಘವ ಲಾರೆನ್ಸ್, ಹೊಸ ಸರ್ಕಾರಕ್ಕೆ ಸ್ವಲ್ಪ ಸಮಯ ನೀಡಬೇಕು ಎಂದು ವಾದಿಸಿದ್ದರು. ‘ಈ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಹೇಗೆ ಕೆಲಸ ಮಾಡಿದೆ ಎಂದು ಕೇಳಿದರೆ, ತುಂಬಾ ಚೆನ್ನಾಗಿ ಮಾಡಿದೆ ಎಂದೇ ಹೇಳುತ್ತೇನೆ. ನಾವು ಹೊಸ ಮನೆಗೆ ಹೋಗುವ ಮುನ್ನ ಒಂದೆರಡು ಬಾರಿ ಭೇಟಿ ನೀಡುತ್ತೇವೆ. ಆದರೆ ಅಲ್ಲಿ ವಾಸಿಸಲು ಆರಂಭಿಸಿದಾಗಷ್ಟೇ ಅಲ್ಲಿನ ಪೈಪ್‌ಗಳು ಅಥವಾ ಫ್ಯಾನ್‌ಗಳಲ್ಲಿರುವ ಸಮಸ್ಯೆಗಳು ನಮಗೆ ನಿಧಾನವಾಗಿ ತಿಳಿಯುತ್ತವೆ’ ಎಂದು ಉದಾಹರಣೆ ನೀಡಿದ್ದರು.

ಮುಂದುವರಿದು ಮಾತನಾಡಿದ್ದ ಅವರು, ‘ಹೊಸ ಮನೆಗೆ ಹೋದಾಗ ಆ ಪ್ರದೇಶದ ಬೀದಿ ನಾಯಿಗಳು ಸಹ ನಮ್ಮನ್ನು ನೋಡಿ ಬೊಗಳುತ್ತವೆ. ಅದು ನಮ್ಮೊಂದಿಗೆ ಹೊಂದಿಕೊಳ್ಳಲು ನಾವು ಅದಕ್ಕೆ ಬಿಸ್ಕೆಟ್ ಅಥವಾ ಬಿರಿಯಾನಿ ನೀಡಬೇಕಾಗುತ್ತದೆ. ಒಂದು ಮನೆ ಮತ್ತು ನಾಯಿಯ ಪರಿಸ್ಥಿತಿಯೇ ಹೀಗಿರುವಾಗ, ಇಡೀ ರಾಜ್ಯವನ್ನು ಆಳುವ ಜವಾಬ್ದಾರಿ ಸಿಕ್ಕಾಗ ಸಮಯ ಬೇಡವೇ? ಅವರಿಗೆ ಸ್ವಲ್ಪ ಸಮಯ ಕೊಡಿ. ಸಕಾರಾತ್ಮಕವಾಗಿ ಯೋಚಿಸಿ. ನೀವು ಬದಲಾವಣೆ ಬಯಸಿದ್ದೀರಿ, ಈಗ ಬದಲಾವಣೆ ಬಂದಿದೆ. ಸಮಯ ನೀಡಿದರೆ ಎಲ್ಲವೂ ಸರಿಹೋಗುತ್ತದೆ’ ಎಂದಿದ್ದರು.

ಲಾರೆನ್ಸ್ ಅವರ ಈ ಸುದ್ದಿಗೋಷ್ಠಿಯ ಸಣ್ಣ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರು ಕೆರಳಿದ್ದಾರೆ. ತಮಿಳುನಾಡಿನ ಜನರನ್ನು ಲಾರೆನ್ಸ್ ಅವರು ಬೀದಿ ನಾಯಿಗಳಿಗೆ ಹೋಲಿಸಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸರ್ಕಾರವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು, ಅದನ್ನು ಬೊಗಳುವುದು ಎನ್ನುತ್ತೀರಾ? ಅಧಿಕಾರದ ಅಹಂಕಾರವನ್ನು ಲಾರೆನ್ಸ್ ಬೇಗನೇ ಕಲಿತಿದ್ದಾರೆ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು; ಎಐಎಡಿಎಂಕೆಗೆ ರಾಜೀನಾಮೆ ನೀಡಿ ಟಿವಿಕೆಯತ್ತ ಮುಖ ಮಾಡಿದ 3 ಶಾಸಕರು

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಾವೇ ಪೂರ್ತಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿರುವ ರಾಘವ ಲಾರೆನ್ಸ್, ‘ನನ್ನ ಅಭಿಮಾನಿಗಳು ಮತ್ತು ಜನಸಾಮಾನ್ಯರು ನನಗೆ ತಾಯಿಗೆ ಸಮಾನ. ನಾನು ಜನರನ್ನು ನಾಯಿಗಳಿಗೆ ಹೋಲಿಸಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇದು ಸಂಪೂರ್ಣ ತಪ್ಪು ಮತ್ತು ದಿಕ್ಕು ತಪ್ಪಿಸುವಂತದ್ದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಹೇಳಿದ್ದು ಇಷ್ಟೇ – ನಾವು ಹೊಸ ಪರಿಸರಕ್ಕೆ ಅಥವಾ ಹೊಸ ಮನೆಗೆ ಹೋದಾಗ ಸುತ್ತಮುತ್ತಲಿನ ವಾತಾವರಣ, ಅಲ್ಲಿನ ನಾಯಿಗಳ ಸ್ವಭಾವ, ಅವುಗಳ ಅಭ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ ಅಷ್ಟೇ. ಜನರನ್ನು ನಾಯಿಗಳೆಂದು ಕರೆಯುವಷ್ಟು ನಾನು ನಿರ್ದಯಿ ಅಲ್ಲ. ನಾನು ಕೇವಲ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಎಲ್ಲೂ ಜನರನ್ನು ಪ್ರಸ್ತಾಪಿಸಿಲ್ಲ. ದಯವಿಟ್ಟು ಪೂರ್ತಿ ವಿಡಿಯೋ ನೋಡಿ ಸತ್ಯ ತಿಳಿದುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us