
ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ರಜತ್ ಕಿಶನ್ (Rajath Kishan) ಅವರಿಗೆ ಬೆದರಿಕೆ ಸಂದೇಶ ಬಂದಿದೆ. ರಜತ್ ಪತ್ನಿ ಅಕ್ಷಿತಾ ಅವರಿಗೂ ಕೆಲವರು ಬೆದರಿಕೆ ಸಂದೇಶ ಕಳಿಸಿದ್ದಾರೆ. ಆದ್ದರಿಂದ ಅಕ್ಷಿತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೊಲೆ ಬೆದರಿಕೆ ಹಾಕುವವರಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ಅವರು ಮುಂದಾಗಿದ್ದಾರೆ. ದೂರು ನೀಡಲು ಬಂದ ಅಕ್ಷಿತಾ (Akshita) ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಬೆದರಿಕೆ ಸಂದೇಶ ಬಂದಿದ್ದರ ಬಗ್ಗೆ ಅವರು ಪೂರ್ತಿ ವಿವರ ನೀಡಿದ್ದಾರೆ.
‘ತುಂಬ ದಿನದಿಂದ ಸ್ನೇಹಿತರ ಜೊತೆ ಸೇರಿ ಅಲ್ಲಿಗೆ ಹೋಗಬೇಕು ಅಂತ ರಜತ್ ಅಂದುಕೊಳ್ಳುತ್ತಿದ್ದರು. ಬಿಗ್ ಬಾಸ್ ಶೋಗೆ ತೆರಳುವುದಕ್ಕೂ ಮುನ್ನವೇ ಈ ಘಟನೆ ಬಗ್ಗೆ ರಜತ್ ಅವರು ಮಾತನಾಡಿದ್ದರು. ಟೈಮ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇಷ್ಟು ದಿನ ಧರ್ಮಸ್ಥಳಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಟೈಮ್ ಮಾಡಿಕೊಂಡು ಹೋದರು. ಆ ಭೇಟಿ ಸಹಜವಾಗಿ ಮುಗಿಯಿತು. ಕಾಕತಾಳೀಯ ಎಂಬಂತೆ ಅವರು ಹೋದಾಗಲೇ ಅಲ್ಲಿ ಗಲಾಟೆ ನಡೆಯಿತು’ ಎಂದು ಅಕ್ಷಿತಾ ಹೇಳಿದ್ದಾರೆ.
‘ರಜತ್ ಅವರು ಸುರಕ್ಷಿತವಾಗಿ ಮನೆಗೆ ಬಂದರು. ಎಲ್ಲವೂ ಸರಿಯಾಗಿಯೇ ಇತ್ತು. ಬೆಳಗ್ಗೆ ಎದ್ದ ತಕ್ಷಣ ಅನೇಕ ಫೋನ್ ಕರೆಗಳು ಬರಲು ಶುರುವಾಯಿತು. ಯಾರೋ ಶಾರದಾ ಭಟ್ ಎಂಬುವವರು ಸ್ಕ್ರೀನ್ ಶಾಟ್ ಕಳಿಸುತ್ತಿದ್ದರು. ಬೆದರಿಕೆ ಸಂದೇಶ, ಬೆದರಿಕೆ ಸ್ಟೇಟಸ್ ಬರಲು ಆರಂಭ ಆಯಿತು. ನಾನು, ನನ್ನ ಮಕ್ಕಳು, ನನ್ನ ಮಂಡ್ಯ ಜಿಲ್ಲೆ ಇದಕ್ಕೆ ಹೇಗೆ ಸಂಬಂಧಿಸಿದೆ ಅಂತ ನನಗೆ ಪ್ರಶ್ನೆ ಮೂಡಿತು. ಮಂಡ್ಯಕ್ಕೂ ಕರಾವಳಿಗೂ ಸಂಬಂಧವೇ ಇಲ್ಲ’ ಎಂದಿದ್ದಾರೆ ಅಕ್ಷಿತಾ.
‘ಸೋಶಿಯಲ್ ಮೀಡಿಯಾದಲ್ಲಿ ಒಬ್ಬರು ಇಷ್ಟು ಧೈರ್ಯವಾಗಿ, ಬಹಿರಂಗವಾಗಿ ಬೆದರಿಕೆ ಹಾಕುತ್ತಾರೆ ಎಂದರೆ ಅವರಿಗೆ ಎಷ್ಟು ಬೆಂಬಲ ಇರಬಹುದು ಎಂಬುದನ್ನು ನಾವು ನೋಡಬಹುದು. ಈ ಬಗ್ಗೆ ರಜತ್ ಬಳಿ ಮಾತಾಡಿದಾಗ ನಿರ್ಲಕ್ಷ್ಯ ಮಾಡೋಣ ಎಂದರು. ಆದರೆ, ಮಂಡ್ಯದ ಬಗ್ಗೆ ಮಾತನಾಡಿದಾಗ ಅದು ಆಕ್ಷೇಪಾರ್ಹ ಹೇಳಿಕೆ. ನಿನ್ನ ಗಂಡನನ್ನು ಕರೆದುಕೊಂಡು ಹೋಗು, ಇಲ್ಲದಿದ್ದರೆ ಕೇಸರಿ ಬಣ್ಣ ಮಾಡಿಬಿಡುತ್ತೇವೆ ಅಂತ ಏನೋ ಹಾಕಿದ್ದಾರೆ’ ಎಂದು ಅಕ್ಷಿತಾ ಹೇಳಿದ್ದಾರೆ.
ಇದನ್ನೂ ಓದಿ: ರಜತ್ಗೆ ಮಹಿಳೆಯಿಂದ ಕೊಲೆ ಬೆದರಿಕೆ: ಪಾಠ ಕಲಿಸಲು ಕಾನೂನಿನ ಕ್ರಮ
‘ಮೂಟೆ ಕಟ್ಟಿ, ಸಿಲಿಂಡರ್ ಹಾಕಿ ಸಾಯಿಸುತ್ತೇವೆ ಎಂಬ ಹೇಳಿಕೆ ಕೂಡ ಬಂದಿದೆ. ಅದರ ಫೋಟೋಕಾಪಿ ತೆಗೆದುಕೊಂಡಿದ್ದೇನೆ. ಈ ರೀತಿ ಹೇಳಿಕೆಗಳು ಸರಿಯಲ್ಲ. ಅದು ಭಯಾನಕ ಆಗಿರುತ್ತದೆ. ಅಕಸ್ಮಾತ್ ಹೆಚ್ಚು-ಕಡಿಮೆ ಆದರೆ ಏನು ಗತಿ? ನಮ್ಮ ಮುಂಜಾಗೃತಾ ಕ್ರಮವಾಗಿ ಪೊಲೀಸರಿಗೆ ದೂರು ನೀಡಲು ಬಂದಿದ್ದೇವೆ’ ಎಂದಿದ್ದಾರೆ ಅಕ್ಷಿತಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.