40 ವರ್ಷದ ಬಳಿಕ ಒಂದಾಗುತ್ತಿರುವ ದಿಗ್ಗಜರು: ನಿರ್ದೇಶಕ ಯಾರು?

Rajinikanth-Kamal Haasan movie: ರಜನೀಕಾಂತ್ ಮತ್ತು ಕಮಲ್ ಹಾಸನ್ ಭಾರತದ ದಿಗ್ಗಜ ಸೂಪರ್ ಸ್ಟಾರ್​ ನಟರು. ದಶಕಗಳ ಹಿಂದೆ ಈ ಇಬ್ಬರೂ ಕೆಲವಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಕಮಲ್ ಹಾಸನ್ ಮತ್ತು ರಜನೀಕಾಂತ್ 21 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದೀಗ 40 ವರ್ಷಗಳ ಬಳಿಕ ಈ ಇಬ್ಬರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ.

40 ವರ್ಷದ ಬಳಿಕ ಒಂದಾಗುತ್ತಿರುವ ದಿಗ್ಗಜರು: ನಿರ್ದೇಶಕ ಯಾರು?
Rajinikanth Kamal Haasan

Updated on: Aug 19, 2025 | 3:22 PM

ರಜನೀಕಾಂತ್ (Rajinikanth) ಮತ್ತು ಕಮಲ್ ಹಾಸನ್ (Kamla Haasan) ಅವರುಗಳು ಭಾರತ ಚಿತ್ರರಂಗದ ಇಬ್ಬರು ದಿಗ್ಗಜ ಸ್ಟಾರ್ ನಟರು. ಇಬ್ಬರು 50 ವರ್ಷಗಳಿಂದಲೂ ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ರಜನೀಕಾಂತ್​ಗೆ ಹೋಲಿಸಿದರೆ ಕಮಲ್ ಹಾಸನ್ ತುಸು ಮೊದಲೇ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಆದರೆ ಇಬ್ಬರೂ ಸಹ ಕಳೆದ 50 ವರ್ಷಗಳಿಂದಲೂ ತಮಿಳು ಚಿತ್ರರಂಗದಲ್ಲಿ ಸ್ಟಾರ್​ಗಳಾಗಿ ಮಿಂಚುತ್ತಾ ಬಂದಿದ್ದಾರೆ. ಈಗಲೂ ಸಹ ಸ್ಟಾರ್​​ಗಳಾಗಿಯೇ ಉಳಿದುಕೊಂಡಿದ್ದಾರೆ. ತಮಿಳು ಚಿತ್ರರಂಗದಲಲ್ಲಿ ದಶಕಗಳಿಂದಲೂ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದ ರಜನೀಕಾಂತ್-ಕಮಲ್ ಹಾಸನ್, ವೃತ್ತಿ ಸ್ಪರ್ಧೆಯ ಆಚೆಗೂ ಅದ್ಭುತ ಗೆಳೆತನವನ್ನು ಕಾಪಾಡಿಕೊಂಡಿದ್ದಾರೆ. ಇದೀಗ ಈ ಇಬ್ಬರು ನಟರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ.

ಕಮಲ್ ಹಾಸನ್ ಹಾಗೂ ರಜನೀಕಾಂತ್ ದಶಕಗಳ ಹಿಂದೆ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ವಿಶೇಷವೆಂದರೆ ರಜನೀಕಾಂತ್ ತಮ್ಮ ಸಿನಿಮಾ ಪಯಣ ಪ್ರಾರಂಭ ಮಾಡಿದ್ದು ಕಮಲ್ ಹಾಸನ್ ಸಿನಿಮಾ ಮೂಲಕವೇ. ಕಮಲ್ ನಾಯಕನಾಗಿ ನಟಿಸಿದ್ದ ‘ಅಪೂರ್ವ ರಾಗಂಗಳ್’ ಸಿನಿಮಾನಲ್ಲಿ ರಜನೀಕಾಂತ್ ವಿಲನ್ ಆಗಿದ್ದರು. ಆ ನಂತರದ ವರ್ಷಗಳಲ್ಲಿ ಈ ಇಬ್ಬರೂ ಒಟ್ಟಿಗೆ ಬರೋಬ್ಬರಿ 21 ಸಿನಿಮಾಗಳಲ್ಲಿ ನಟಿಸಿದರು. ಬಹುತೇಕ ಸಿನಿಮಾಗಳು ಹಿಟ್ ಎನಿಸಿಕೊಂಡರು.

ಇಬ್ಬರೂ ದೊಡ್ಡ ಸ್ಟಾರ್​ಗಳಾದ ಬಳಿಕ ಪರಸ್ಪರರ ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿ ಬಿಟ್ಟರು. ಇಬ್ಬರು ದೊಡ್ಡ ಸ್ಟಾರ್​ಗಳನ್ನು ಹಾಕಿಕೊಂಡು ಸಿನಿಮಾ ಮಾಡುವ ಧೈರ್ಯ ಯಾರೊಬ್ಬರೂ ಮಾಡಲಿಲ್ಲ. 1979 ರಲ್ಲಿ ಬಿಡುಗಡೆ ಆದ ‘ಅಲ್ಲಾವುದ್ದೀನಮ್ ಅದ್ಭುತ ವಿಲಕ್ಕುಮ್’ ಈ ಇಬ್ಬರೂ ಒಟ್ಟಿಗೆ ನಟಿಸಿದ್ದ ಕೊನೆಯ ಸಿನಿಮಾ. ಆದರೆ ಇದೀಗ ಬರೋಬ್ಬರಿ 40 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ. ಆ ಮೂಲಕ ಭಾರತದ ಇಬ್ಬರು ಸೂಪರ್ ಸ್ಟಾರ್​ಗಳು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ:ಹಿಂದೂ ಧರ್ಮದ ಬಗ್ಗೆ ಹೇಳಿಕೆ, ಕಮಲ್ ಹಾಸನ್​ಗೆ ಕೊಲೆ ಬೆದರಿಕೆ

‘ಖೈದಿ’, ‘ವಿಕ್ರಂ’, ‘ಮಾನಗರಂ’, ‘ಲಿಯೋ’ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಲೋಕೇಶ್ ಕನಗರಾಜ್ ಇದೀಗ ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ಒಟ್ಟಿಗೆ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಲೋಕೇಶ್ ಕನಗರಾಜ್, ಕಮಲ್ ಹಾಸನ್ ಜೊತೆಗೆ ‘ವಿಕ್ರಂ’ ಸಿನಿಮಾ ಮಾಡಿದ್ದಾರೆ. ರಜನೀಕಾಂತ್ ಜೊತೆಗೆ ‘ಕೂಲಿ’ ಸಿನಿಮಾ ಮಾಡಿದ್ದಾರೆ. ಇದೀಗ ಇಬ್ಬರನ್ನೂ ಒಟ್ಟುಗೂಡಿಸಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾಕ್ಕೆ ಸನ್ ನೆಟ್​ವರ್ಕಸ್​ ನವರು ಬಂಡವಾಳ ಹೂಡಲಿದ್ದಾರೆ.

ಆದರೆ ಈ ಸಿನಿಮಾ ಅಷ್ಟು ಬೇಗ ನಿರ್ಮಾಣ ಆಗುವುದಿಲ್ಲ. ಲೋಕೇಶ್ ಕನಗರಾಜ್ ಬಳಿ ಈಗಾಗಲೇ ಹಲವು ಪ್ರಾಜೆಕ್ಟ್​ಗಳು ಬಾಕಿ ಉಳಿದಿವೆ. ಲೋಕೇಶ್ ಪ್ರಸ್ತುತ ‘ಖೈದಿ 2’ ಮಾಡಬೇಕಿದೆ. ಅದರ ಬಳಿಕ ಆಮಿರ್ ಖಾನ್ ಜೊತೆಗೆ ಹೊಸದೊಂದು ಸಿನಿಮಾ ಮಾಡಲಿದ್ದಾರೆ. ‘ವಿಕ್ರಂ 2’ ಸಹ ಬಾಕಿ ಇದೆ. ರೋಲೆಕ್ಸ್ ಪಾತ್ರಕ್ಕಾಗಿ ಪ್ರತ್ಯೇಕ ಸಿನಿಮಾ ಮಾಡಲಿದ್ದಾರೆ. ಇವುಗಳ ಬಳಿಕವಷ್ಟೆ ರಜನೀಕಾಂತ್ ಮತ್ತು ಕಮಲ್ ನಟನೆಯ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ