‘ಕಾಂತಾರ ಚಾಪ್ಟರ್ 1’ನಲ್ಲಿ ಕನ್ನಡ ಮೂಲದ ಬಾಲಿವುಡ್ ನಟ
Kantara Chapter 1 movie: ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ‘ಕಾಂತಾರ: ಚಾಪ್ಟರ್ 1’ ನಲ್ಲಿ ರಿಷಬ್ ಜೊತೆಗೆ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಮಲಯಾಳಂ ನಟ ಜಯರಾಂ ಅವರು ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದೀಗ ಬಾಲಿವುಡ್ನಲ್ಲಿ ಹೆಸರು ಮಾಡಿರುವ ಕನ್ನಡಿಗ ಸಹ ‘ಕಾಂತಾರ’ ಸಿನಿಮಾನಲ್ಲಿ ನಟಿಸುತ್ತಿದ್ದು, ಹೊಂಬಾಳೆ ಫಸ್ಟ್ ಲುಕ್ ಹಂಚಿಕೊಂಡಿದೆ.

ರಿಷಬ್ ಶೆಟ್ಟಿ (Rishanb Shetty) ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಈ ವರ್ಷ ಬಿಡುಗಡೆ ಆಗಲಿರುವ ಬಹು ನಿರೀಕ್ಷಿತ ಸಿನಿಮಾ. ಸಿನಿಮಾದ ಕತೆ, ಪಾತ್ರಗಳ ವಿಷಯಗಳನ್ನು ನಿರ್ಮಾಣ ಸಂಸ್ಥೆ ಗುಟ್ಟಾಗಿರಿಸಿದೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿರುವುದಾಗಿ ಫೋಟೊ ಒಂದನ್ನು ಹೊಂಬಾಳೆ ಹಂಚಿಕೊಂಡಿತ್ತು. ಇದೀಗ ಕನ್ನಡ ಮೂಲದ ಆದರೆ ಬಾಲಿವುಡ್ನಲ್ಲಿ ಹೆಚ್ಚು ಪರಿಚಿತವಾಗಿರುವ ನಟರೊಬ್ಬರು ‘ಕಾಂತಾರ ಚಾಪ್ಟರ್ 1’ನಲ್ಲಿ ನಟಿಸುತ್ತಿರುವುದಾಗಿ ಸುದ್ದಿ ಹಂಚಿಕೊಂಡಿದೆ.
ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಕನ್ನಡಿಗ ಗುಲ್ಷನ್ ದೇವಯ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕುಲಶೇಖರ ಹೆಸರಿನ ಪಾತ್ರದಲ್ಲಿ ಗುಲ್ಷನ್ ದೇವಯ್ಯ ನಟಿಸುತ್ತಿದ್ದಾರೆ. ರಾಜನ ರೀತಿ ಪೋಷಾಕು ಧರಿಸಿ ಸಿಂಹಾಸನದ ಮೇಲೆ ಕುಳಿತಿರುವ ಗುಲ್ಷನ್ ದೇವಯ್ಯ ಅವರ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಗುಲ್ಷನ್ ದೇವಯ್ಯ ಪ್ರಸಾದ್ ಬಿದಪ್ಪ ಅವರ ಗರಡಿಯಲ್ಲಿ ಪಳಗಿದವರು. 2004 ರಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್ರ ‘ದಿಲ್ ನೆ ಜಿಸೆ ಅಪ್ನಾ ಕಹಾ’ ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಗುಲ್ಷನ್ ದೇವಯ್ಯ 2010 ರಲ್ಲಿ ಬಂದ ಕಲ್ಕಿ ಕೊಚ್ಲಿನ್ ನಟಿಸಿ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದ ‘ದಿ ಗರ್ಲ್ ಇನ್ ಯೆಲ್ಲೊ ಬೂಟ್ಸ್’ ಸಿನಿಮಾ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ:ದೈವ ಮೊದಲೇ ನೀಡಿತ್ತು ಎಚ್ಚರಿಕೆ: ಗುಟ್ಟು ಬಿಚ್ಚಿಟ್ಟ ಕಾಂತಾರ ನಿರ್ಮಾಪಕ
ಅಲ್ಲಿಂದ ಹಲವಾರು ಸಿನಿಮಾಗಳಲ್ಲಿ ವಿಶೇಷವಾಗಿ ಕಮರ್ಶಿಯಲ್ ಅಲ್ಲದ ಬ್ರಿಜ್ ಮಾದರಿಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಗುಲ್ಷನ್ ದೇವಯ್ಯ ನಟಿಸಿದ್ದಾರೆ. ‘ಧಮ್ ಮಾರೊ ಧಮ್’, ‘ರಾಮ್-ಲೀಲಾ’, ‘ಹಂಟರ್’, ‘ಡೆತ್ ಇನ್ ಗಂಜ್’, ‘ಲವ್ ಅಫೇರ್’, ‘ಮರ್ದ್ ಕೊ ದರ್ದ್ ನಹಿ ಹೋತಾ’ ಇನ್ನೂ ಹಲವಾರು ಸಿನಿಮಾಗಳಲ್ಲಿ ಗುಲ್ಷನ್ ದೇವಯ್ಯ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಹಲವು ವೆಬ್ ಸರಣಿಗಳಲ್ಲಿಯೂ ಸಹ ಗುಲ್ಷನ್ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆ ಆದ ‘ಗನ್ಸ್ ಆಂಡ್ ಗುಲಾಬ್ಸ್’ ವೆಬ್ ಸರಣಿಯಲ್ಲಿನ ಗುಲ್ಷನ್ ನಟನೆಗೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು.
‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಮಲಯಾಳಂ ನಟ ಜಯರಾಂ ಈಗ ಗುಲ್ಷನ್ ದೇವಯ್ಯ ನಟಿಸುತ್ತಿರುವುದು ಖಾತ್ರಿ ಆಗಿದೆ. ಇತ್ತೀಚೆಗೆ ನಿಧನ ಹೊಂದಿದ ಹಾಸ್ಯನಟ ರಾಕೇಶ್ ಪೂಜಾರಿ ಸಹ ನಟಿಸಿದ್ದಾರೆ. ಸಿನಿಮಾ ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




