ಸಮಾಧಿ ನೆಲಸಮ: ವಿಷ್ಣು ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದ ಶ್ರೀಧರ್ ಹೇಳೋದೇನು?
ವಿಷ್ಣುವರ್ಧನ್ ಜೊತೆ 35 ವರ್ಷಗಳ ಕಾಲ ಒಡನಾಟ ಹೊಂದಿದ್ದ ಶ್ರೀಧರ್ ಅವರೇ ವಿಷ್ಣು ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದರು. ಈಗ ವಿಷ್ಣುವರ್ಧನ್ ಸಮಾಧಿ ಒಡೆದುಹೋಗಿರುವ ಘಟನೆಯಿಂದ ಶ್ರೀಧರ್ ಅವರಿಗೆ ತುಂಬಾ ನೋವಾಗಿದೆ. ಆ ಕುರಿತು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ನಟ ವಿಷ್ಣುವರ್ಧನ್ ಅವರ ಸಮಾಧಿ (Vishnuvardhan Samadhi) ನೆಲಸಮ ಆದಾಗಿನಿಂದ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಪುಣ್ಯಭೂಮಿ ಇರುವ ಜಾಗದಲ್ಲೇ ಸ್ಮಾರಕ ಆಗಬೇಕು ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಇಂದಿಗೂ ಅದು ಈಡೇರಿಲ್ಲ. ಇದರಿಂದ ವಿಷ್ಣು ಅಭಿಮಾನಿಗಳಿಗೆ ನೋವಾಗಿದೆ. ವಿಷ್ಣುವರ್ಧನ್ (Vishnuvardhan) ನಿಧನರಾದಾಗ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದ ಶ್ರೀಧರ್ ಅವರು ಈ ಕುರಿತು ಮಾತನಾಡಿದ್ದಾರೆ. ‘ಸರ್ಕಾರವೇ ಅನ್ಯಾಯ ಮಾಡಲು ಹೊರಟಿದೆ. ಅಭಿಮಾನ್ ಸ್ಟುಡಿಯೋದವರು ಸೇರಿಕೊಂಡು ಅನ್ಯಾಯ ಮಾಡುತ್ತಿದ್ದಾರೆ. ಅನ್ಯಾಯ ಆಗಬಾರದು ಅಂತ ನಾವು ಹೋರಾಟ ಮಾಡುತ್ತಿದ್ದೇವೆ’ ಎಂದು ಶ್ರೀಧರ್ (Sridhar) ಹೇಳಿದ್ದಾರೆ.
‘2014ರಿಂದಲೂ ರಾಜು ಗೌಡ ಅವರು ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಅವರ ಹೋರಾಟ ಯಾರಿಗೂ ಅರ್ಥ ಆಗುತ್ತಿಲ್ಲ. ಯಾಕೆಂದರೆ ಅವರ ಬಳಿ ಹಣ ಇಲ್ಲ. ಹಾಗಾಗಿ ಯಾರೂ ಬರುತ್ತಿಲ್ಲ. ನಮ್ಮಲ್ಲಿ ಯಾರ ಹತ್ತಿರವೂ ಹಣ ಇಲ್ಲ. ಆದರೆ ಹೋರಾಟ ನಡೆಯುತ್ತಲೇ ಇದೆ. ಸಂಬಂಧಪಟ್ಟ ಪ್ರತಿಯೊಂದು ಇಲಾಖೆಗೆ ಹೋದರೆ ರಾಜು ಗೌಡ ಅವರು ಏನು ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಜನರು ಇದನ್ನು ತಿಳಿದುಕೊಂಡು ಮಾತನಾಡಬೇಕು’ ಎಂದಿದ್ದಾರೆ ಶ್ರೀಧರ್.
‘ಸರ್ಕಾರದವರು ಯಾಕೆ ನಮಗೆ ಅಷ್ಟೊಂದು ನ್ಯಾಯ ಮಾಡುತ್ತಿದ್ದಾರೆ? ಈಗ ಸಮಾಧಿ ಒಡೆದು ಹಾಕಿದ್ದಾರೆ. ಕಣ್ಣಲ್ಲಿ ನೀರು ಬರುತ್ತಿದೆ. ಕೋಟ್ಯಂತರ ಅಭಿಮಾನಿಗಳಿಗೆ ನೋವಾಗಿದೆ. ಸರ್ಕಾರದವರು ಏನು ಮಾಡುತ್ತಿದ್ದಾರೆ? ಅಧಿವೇಶನ ನಡೆಯುತ್ತಿದೆ. ಒಬ್ಬರೂ ಮಾತನಾಡುತ್ತಿಲ್ಲ. ಬೇರೆಯವರಿಗೆ ಮಾಡಿಕೊಡುತ್ತೀರಿ. ಆದರೆ ಇವರಿಗೆ ಅನ್ಯಾಯ ಮಾಡುತ್ತಿದ್ದೀರಿ’ ಎಂದು ಶ್ರೀಧರ್ ಹೇಳಿದ್ದಾರೆ.
‘ವಿಷ್ಣುವರ್ಧನ್ ಅವರನ್ನು ಜೀವನಪೂರ್ತಿ ದುರಂತವಾಗಿಯೇ ಇರಿಸಲು ಹೊರಟಿದ್ದಾರೆ ಎನಿಸುತ್ತದೆ. ಅದಕ್ಕೆ ಅಭಿಮಾನಿಗಳಾದ ನಾವು ಅವಕಾಶ ಕೊಡುವುದಿಲ್ಲ. ದುರಂತ ಎಂಬುದನ್ನು ನಾವು ತೆಗೆದು ಹಾಕುತ್ತೇವೆ. ಸ್ವತಃ ನಾನೇ ನಿಂತುಕೊಂಡು ಹೋರಾಡುತ್ತೇನೆ. ಸುಪ್ರೀಂ ಕೋರ್ಟ್ಗೆ ಹೋದರೂ ಬಿಡುವುದಿಲ್ಲ. ನಮ್ಮ ಜೊತೆ ಕೈ ಜೋಡಿಸುವವರು ಬನ್ನಿ’ ಎಂದು ಶ್ರೀಧರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
‘ಮನೆಯವರು ನನ್ನನ್ನು ಕರೆದಿಲ್ಲ. ಹಾಗಾಗಿ ನಾನು ಹೋಗಿಲ್ಲ. ನಾನು ಇದ್ದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ಅವರಿಗೆ ಬೇಜಾರು ಇರಬಹುದು. ನನ್ನ ಸ್ವಂತಕ್ಕಾಗಿ ನಾನು ಹೋರಾಡುತ್ತಿಲ್ಲ. ಆ ಜಾಗದಲ್ಲಿ ಸ್ಮಾರಕ ಆಗಬೇಕು. ಅದಕ್ಕಾಗಿ ಹೋರಾಡುತ್ತಿದ್ದೇನೆ. ವಿಷ್ಣುವರ್ಧನ್ ಅವರಿಗೆ ಗೌರವ ಸಿಗಬೇಕು. ಅದಕ್ಕಾಗಿ ಈ ಹೋರಾಟ’ ಎಂದಿದ್ದಾರೆ ಶ್ರೀಧರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







