ಸಿನಿಮಾ ನಟ ಆಗುವುದಕ್ಕೂ ಮುನ್ನ ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಅವರ ಜೊತೆ ಬಸ್ ಚಾಲಕನಾಗಿ ಸ್ನೇಹಿತ ರಾಜ್ ಬಹದ್ದೂರ್ ಕೆಲಸ ಮಾಡುತ್ತಿದ್ದರು. ರಜನಿಕಾಂತ್ ಅವರಲ್ಲಿನ ನಟನೆಯ ಸಾಮರ್ಥ್ಯ ಗುರುತಿಸಿ, ಅವರನ್ನು ತಮಿಳುನಾಡಿಗೆ ಕಳಿಸಿಕೊಟ್ಟವರು ಇದೇ ರಾಜ್ ಬಹದ್ದೂರು. ಇಂದಿಗೂ ಅವರಿಬ್ಬರ ನಡುವೆ ಆ ಸ್ನೇಹ ಮುಂದುವರಿದಿದೆ. ಅ.25ರಂದು ರಜನಿಗೆ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಈ ಖುಷಿಯ ಸಂದರ್ಭದಲ್ಲಿ ತಮ್ಮ ಹಳೇ ಸ್ನೇಹಿತನನ್ನು ರಜನಿ ಮರೆತಿಲ್ಲ. ತಲೈವಾಗೆ ಈ ಪ್ರತಿಷ್ಠಿತ ಗೌರವ ಸಿಕ್ಕಿರುವುದು ರಾಜ್ ಬಹದ್ದೂರ್ಗೆ ಹೆಮ್ಮೆ ತಂದಿದೆ. ಅದೇ ಖುಷಿಯಲ್ಲಿ ಅವರು ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.
ಹವ್ಯಾಸಕ್ಕಾಗಿ ನಾಟಕ ಮಾಡುತ್ತಿದ್ದ ರಜನಿಕಾಂತ್ ಅವರು ಸಿನಿಮಾದಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಿದವರು ರಾಜ್ ಬಹದ್ದೂರ್. ನಟನೆಯಲ್ಲಿ ಇನ್ನಷ್ಟು ತರಬೇತಿ ಪಡೆಯಲು ಚೈನ್ನೈಗೆ ಹೋದಾಗ ರಜನಿಕಾಂತ್ಗೆ ಸ್ಪಷ್ಟವಾಗಿ ತಮಿಳು ಮಾತನಾಡಲು ಬರುತ್ತಿರಲಿಲ್ಲ. ನಾಟಕವೊಂದರಲ್ಲಿ ಅವರ ಪ್ರತಿಭೆಯನ್ನು ಗಮನಿಸಿದ ಖ್ಯಾತ ನಿರ್ದೇಶಕ ಬಾಲಚಂದರ್ ಅವರು, ‘ನೀನು ತಮಿಳು ಕಲಿತುಕೋ’ ಎಂದು ಸಲಹೆ ನೀಡಿದ್ದರು. ಆ ಬಗ್ಗೆ ರಾಜ್ ಬಹದ್ದೂರ್ ಈಗ ವಿವರಿಸಿದ್ದಾರೆ.
‘ಆಗ ಅವನಿಗೆ ತಮಿಳು ಸರಿಯಾಗಿ ಬರುತ್ತಿರಲಿಲ್ಲ. ನಾನು ಚೆನ್ನಾಗಿ ತಮಿಳು ಮಾತನಾಡುತ್ತಿದ್ದೆ. ಬಾಲಚಂದರ್ ನೀಡಿದ ಸಲಹೆ ಬಗ್ಗೆ ಬೆಂಗಳೂರಿಗೆ ಬಂದು ನನ್ನ ಬಳಿ ಹೇಳಿಕೊಂಡ. ಅವರು ಹೇಳಿದ್ದಾರೆ ಎಂದರೆ ಏನೋ ಅರ್ಥ ಇದೆ ಅಂತ ನಮಗೆ ಅನಿಸಿತು. ಇನ್ಮೇಲೆ ನಾವಿಬ್ಬರು ತಮಿಳಿನಲ್ಲಿ ಮಾತನಾಡೋಣ ಅಂತ ತೀರ್ಮಾನಿಸಿದೆವು. ನೀವು ನಂಬುತ್ತೀರೋ ಇಲ್ಲವೋ, ಶೇ.20ರಷ್ಟು ತಮಿಳು ಮಾತನಾಡುತ್ತಿದ್ದವನು ಎರಡೇ ತಿಂಗಳಲ್ಲಿ ಶೇ.100ರಷ್ಟು ಸ್ಪಷ್ಟವಾಗಿ ಮಾತನಾಡುವುದು ಕಲಿತ’ ಎಂದು ತಮ್ಮ ಸ್ನೇಹಿತನಿಗೆ ತಾವು ತಮಿಳು ಹೇಳಿಕೊಟ್ಟ ದಿನಗಳನ್ನು ರಾಜ್ ಬಹದ್ದೂರ್ ಮೆಲುಕು ಹಾಕಿದ್ದಾರೆ.
‘ಅಷ್ಟು ದೊಡ್ಡ ನಿರ್ದೇಶಕರು ಹೇಳಿದ್ದಾರೆ ಎಂದು ಕಲಿಯುವ ಹುಮ್ಮಸ್ಸಿನಿಂದ ಪ್ರಯತ್ನಿಸಿ ಶೇ.100ರಷ್ಟು ತಮಿಳು ಮಾತಾಡೋದು ಕಲಿತ. ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ರಜನಿಕಾಂತ್ಗೆ ಒಂದು ಪಾತ್ರ ನೀಡಬೇಕು ಅಂತ ಬಾಲಚಂದರ್ ಕರೆದರು. ಆದರೆ ನಿನಗೆ ತಮಿಳು ಬರುವುದಿಲ್ಲವಲ್ಲ ಏನು ಮಾಡೋದು ಅಂದರು. ಇವನು ಕೂಡಲೇ ಪಟಪಟನೆ ತಮಿಳಿನಲ್ಲಿ ಮಾತನಾಡಿ ತೋರಿಸಿದ. ತಾನೇ ಡಬ್ಬಿಂಗ್ ಮಾಡುತ್ತೇನೆ ಅಂತ ಕೂಡ ಹೇಳಿದ. ಅದನ್ನು ಕೇಳಿ ಬಾಲಚಂದರ್ ಅಚ್ಚರಿಪಟ್ಟರು. ಆಗ ಅವನಿಗೆ ‘ಅಪೂರ್ವ ರಾಗಂಗಳ್’ ಚಾನ್ಸ್ ಸಿಕ್ಕಿತು. ಅದಾದ ಮೇಲೆ ಹಲವು ಅವಕಾಶಗಳು ಹುಡುಕಿಕೊಂಡು ಬಂದವು’ ಎಂದು ಆ ದಿನಗಳ ಕಹಾನಿಯನ್ನು ರಾಜ್ ಬಹದ್ದೂರ್ ತೆರೆದಿಟ್ಟಿದ್ದಾರೆ.
ಇದನ್ನೂ ಓದಿ:
‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್; ಧನ್ಯಾ ರಾಮ್ಕುಮಾರ್-ಸೂರಜ್ಗೆ ತಲೈವಾ ಬೆಂಬಲ
Published On - 4:15 pm, Tue, 26 October 21