
ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾದ ಆಕ್ಷನ್ ಭರಿತ ಟ್ರೈಲರ್ ಇಂದು (ಆಗಸ್ಟ್ 02) ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ರಜನೀಕಾಂತ್ರ ಎರಡು ಭಿನ್ನ ಅವತಾರಗಳನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ಕಾಮಿಡಿ, ಆಕ್ಷನ್ ಜೊತೆಗೆ ಭಾವುಕ ಸನ್ನಿವೇಶಗಳೂ ಇರಲಿವೆ ಎಂಬುದನ್ನು ಟ್ರೈಲರ್ ಸೂಚ್ಯವಾಗಿ ಹೇಳುತ್ತಿದೆ. ಎಲ್ಲವೂ ಚೆನ್ನಾಗಿದೆಯಾದರೂ ಟೀಸರ್ನಲ್ಲಿ ಖದರ್ ಆಗಿ ಕಾಣಿಸಿಕೊಂಡಿದ್ದ ಶಿವಣ್ಣ (Shiva Rajkumar), ಟ್ರೈಲರ್ನಲ್ಲಿ ನಾಪತ್ತೆಯಾಗಿದ್ದಾರೆ!
‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ, ಟೀಸರ್ನಲ್ಲಿ ಶಿವರಾಜ್ ಕುಮಾರ್ ಅವರನ್ನು ಭರ್ಜರಿಯಾಗಿ ತೋರಿಸಲಾಗಿತ್ತು. ಹಾಗೆಯೇ ಟ್ರೈಲರ್ನಲ್ಲಿಯೂ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇತ್ತು ಆದರೆ ಅದು ಹುಸಿಯಾಗಿದೆ. ಟ್ರೈಲರ್ ಅನ್ನು ಕೇವಲ ರಜನೀಕಾಂತ್ಗೆ ಮಾತ್ರವೇ ಮೀಸಲಿಟ್ಟಂತಿದೆ. ಶಿವರಾಜ್ ಕುಮಾರ್ ಹಾಗೂ ಮೋಹನ್ಲಾಲ್ ಇಬ್ಬರೂ ಟ್ರೈಲರ್ನಲ್ಲಿ ಕಂಡು ಬಂದಿಲ್ಲ. ಇದು ಶಿವಣ್ಣನ ಅಭಿಮಾನಿಗಳಿಗೆ ತುಸು ಬೇಸರ ತರಿಸುವ ಸಾಧ್ಯತೆ ಇದೆ. ಅಂದಹಾಗೆ ನಟಿ ತಮನ್ನಾಗೂ ಟ್ರೈಲರ್ನಲ್ಲಿ ಜಾಗವಿಲ್ಲ.
ಶಿವಣ್ಣನ ಗೈರು ಹೊರತುಪಡಿಸಿದರೆ ಟ್ರೈಲರ್ ಖದರ್ ಭರಿತವಾಗಿದೆ. ಟ್ರೈಲರ್ನ ಆರಂಭದಲ್ಲಿ ಅಮಾಯಕನಂತೆ, ಮಗನ, ಮೊಮ್ಮಗನ ಶೂ ಪಾಲೀಶ್ ಮಾಡುವ, ಪುದಿನ ಚಟ್ನಿಗೆ ಬೇಡಿ ಪತ್ನಿಯಿಂದ ಬೈಸಿಕೊಳ್ಳುವ, ತರಕಾರಿ-ಹಾಲು ತರುವ, ದಾರಿಯಲ್ಲಿ ಯಾರಾದರೂ ಬೈದರೆ ಎದುರು ಮಾತನಾಡದ ಅಮಾಯಕನಂತೆ ಕಾಣಿಸಿಕೊಳ್ಳುವ ರಜನೀಕಾಂತ್ ಆ ನಂತರ ಪೂರ್ಣವಾಗಿ ಮಾಸ್ ಅವತಾರವೆತ್ತಿದ್ದಾರೆ.
ಇದನ್ನೂ ಓದಿ:Jailer: ರಜನೀಕಾಂತ್ ಜೊತೆಗಿನ ಆತ್ಮೀಯತೆ ಬಗ್ಗೆ ಶಿವರಾಜ್ ಕುಮಾರ್ ಮಾತು
ಟ್ರೈಲರ್ನಲ್ಲಿ ಮೂರು ನಾಲ್ಕು ಶೇಡ್ಗಳಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ. ವಿದೇಶಿಗರ ಹೈಟೆಕ್ ದಾಳಿಯನ್ನು ಹೈಟೆಕ್ ಮಾದರಿಯಲ್ಲಿ ಎದುರಿಸುವ ಏಜೆಂಟ್ ರೀತಿ, ಕುಟುಂಬದ ವಿರುದ್ಧ ಕತ್ತಿ ಬೀಸುವ ರೌಡಿಯ ಎದುರಿಸುವ ಕುಟುಂಬದ ಹಿರಿಯನ ರೀತಿ, ಮಾಸ್ ಫಾಲೋವಿಂಗ್ ಇರುವ ನಾಯಕನ ರೀತಿ, ಪೊಲೀಸ್ ಸಮವಸ್ತ್ರ ಧರಿಸಿದ ಖಡಕ್ ಅಧಿಕಾರಿ ಹೀಗೆ ಹಲವು ಶೇಡ್ಗಳಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ.
ರಜನೀಕಾಂತ್ ಹೊರತಾಗಿ ನಟ ಸುನಿಲ್ ಟ್ರೈಲರ್ನ ಆರಂಭದಲ್ಲಿ ಸಣ್ಣ ತುಣುಕಿನಲ್ಲಿ ಕಾಣಿಸುತ್ತಾರೆ, ‘ಜೈಲರ್’ನಲ್ಲಿ ಅವರದ್ದು ಹಾಸ್ಯ ಪಾತ್ರ ಎಂಬುದು ಗೊತ್ತಾಗುತ್ತದೆ. ಬಾಲಿವುಡ್ ನಟ ಜಾಕಿ ಶ್ರಾಫ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮಲಯಾಳಂ ನಟ ವಿನಾಯಕನ್ ಭಯಾನಕ ರೌಡಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ನಲ್ಲಿಯೇ ಅವರ ಅಭಿನಯ ಭೀತಿ ಹುಟ್ಟಿಸುವಂತಿದೆ. ಇವುಗಳ ಹೊರತಾಗಿ ಅನಿರುದ್ಧ್ ರವಿಚಂದ್ರನ್ರ ಸಂಗೀತ, ಹಾಡಿನ ಬಿಟ್ ಗಮನ ಸೆಳೆಯುತ್ತದೆ.
‘ಜೈಲರ್’ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ. ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್, ಮಲಯಾಳಂ ನಟ ಮೋಹನ್ಲಾಲ್, ತೆಲುಗು ನಟ ಸುನಿಲ್, ಬಾಲಿವುಡ್ನ ಜಾಕಿ ಶ್ರಾಫ್ ಮಲಯಾಳಂನ ವಿನಾಯಗನ್ ನಟಿಸಿದ್ದಾರೆ. ಇವರುಗಳ ಹೊರತಾಗಿ ನಟಿ ತಮನ್ನಾ, ರಮ್ಯಕೃಷ್ಣ ಅವರುಗಳು ಸಹ ಇದ್ದಾರೆ. ‘ಜೈಲರ್’ ಸಿನಿಮಾ ಆಗಸ್ಟ್ 10ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:25 pm, Wed, 2 August 23