ಚೆನ್ನೈ: ಭಾರತೀಯ ಚಿತ್ರರಂಗದ ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ ವೈದ್ಯಕೀಯ ಪರೀಕ್ಷೆಗಾಗಿ ಯುಎಸ್ಗೆ ತೆರಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರದ ಬಳಿ ವಿಶೇಷ ವಿಮಾನದಲ್ಲಿ ತೆರಳಲು ಅವಕಾಶ ಕೋರಿದ್ದಾರೆ. ಕೊರೊನಾ ನಡುವೆ ವಿದೇಶ ಪ್ರಯಾಣ ನಡೆಸಲು ಸರ್ಕಾರದ ಬಳಿ ಅವಕಾಶ ಕೇಳಿಕೊಂಡಿದ್ದಾರೆ. ಇತ್ತೀಚೆಗಿನ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರವು ರಜನಿಕಾಂತ್ ಅಮೆರಿಕಾಕ್ಕೆ ತೆರಳಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ಜೂನ್ 20 ರಂದು ರಜನಿಕಾಂತ್ ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಜನಿಕಾಂತ್ ಕೊರೊನಾ ಕಾರಣದಿಂದ ಅಮೆರಿಕಾಗೆ ತೆರಳಿರಲಿಲ್ಲ. ಇದೀಗ, ಯುಎಸ್ಗೆ ಹೋಗಲು ನಟ ರಜನಿಕಾಂತ್ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ವಿಶೇಷ ವಿಮಾನದಲ್ಲಿ 14 ಮಂದಿ ಪ್ರಯಾಣಿಸುವ ಅವಕಾಶ ಇರಲಿದೆ. ವಿಮಾನದಲ್ಲಿ ರಜನಿಕಾಂತ್ ಜೊತೆ, ಕೆಲ ಕುಟುಂಬದ ಸದಸ್ಯರು ಕೂಡ ವಿದೇಶಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿಯಲಾಗಿದೆ. ರಜನಿಕಾಂತ್ ಅಳಿಯ, ಖ್ಯಾತ ನಟ ಧನುಷ್ ತನ್ನ ಮಡದಿ ಹಾಗೂ ಮಗನೊಂದಿಗೆ ಈಗಾಗಲೇ ಅಮೆರಿಕಾದಲ್ಲಿ ಇದ್ದಾರೆ. ಧನುಷ್ ತಮ್ಮ ಹಾಲಿವುಡ್ ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ರಜನಿಕಾಂತ್ಗೆ ಅಮೆರಿಕಾದಲ್ಲಿ ಮಗಳ ಆರೈಕೆಯೂ ಸಿಗಲಿದೆ.
ಈ ಮೊದಲು, ಅಣ್ಣಾಥೆ ಸಿನಿಮಾದ ಚಿತ್ರೀಕರಣಕ್ಕಾಗಿ ರಜನಿಕಾಂತ್ ಹೈದರಾಬಾದ್‌ಗೆ ತೆರಳಿದ್ದರು. ಕಳೆದ ಡಿಸೆಂಬರ್‌ನಲ್ಲಿ ಅಣ್ಣಾಥೆ ಶೂಟಿಂಗ್ ಶುರುವಾಗಿತ್ತು. ಕೆಲವೇ ದಿನಗಳಲ್ಲಿ ತಂಡದ ಕೆಲ ಮಂದಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆದ್ದರಿಂದ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಏಪ್ರಿಲ್ನಲ್ಲಿ ಚಿತ್ರೀಕರಣ ಮತ್ತೆ ಆರಂಭವಾಗಿತ್ತು. ನಿರಂತರವಾಗಿ ಅವರು ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು.
ಅಣ್ಣಾಥೆ ಸಿನಿಮಾಗೆ ವಿಶ್ವಾಸಮ್ ಖ್ಯಾತಿ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್, ನಯನತಾರಾ, ಮೀನಾ, ಪ್ರಕಾಶ್ ರಾಜ್ ಮತ್ತು ಖುಷ್ಬೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ.
2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಜನಿಕಾಂತ್ ಸ್ಪರ್ಧಿಸುವವರಿದ್ದರು. ಆದರೆ, ಪಕ್ಷ ಸ್ಥಾಪನೆಗೂ ಮೊದಲು ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ, ರಾಜಕೀಯದಿಂದ ಅವರು ಹಿಂದೆ ಸರಿದಿದ್ದರು.
ಇದನ್ನೂ ಓದಿ: Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್; ಅವರ ಕೊನೆಯ ಚಿತ್ರ ಯಾವುದು?
ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್