AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanchari Vijay: ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ; ವಿವಿಧ ವಲಯಗಳ ಗಣ್ಯರಿಂದ ಸಂತಾಪ

ಸಂಚಾರಿ ವಿಜಯ್ ನಿಧನಕ್ಕೆ ರಾಜ್ಯದ ವಿವಿಧ ವಲಯಗಳ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ತಮ್ಮ ನೆನಪುಗಳನ್ನು, ಶ್ರದ್ಧಾಂಜಲಿಯನ್ನು ತಿಳಿಸಿದ್ದಾರೆ.

Sanchari Vijay: ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ; ವಿವಿಧ ವಲಯಗಳ ಗಣ್ಯರಿಂದ ಸಂತಾಪ
ಸಂಚಾರಿ ವಿಜಯ್
TV9 Web
| Edited By: |

Updated on: Jun 14, 2021 | 9:41 PM

Share

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನರಾಗಿದ್ದಾರೆ ಎಂಬ ಸುದ್ದಿ ಜನರ ಮನಕಲಕುವಂತೆ ಮಾಡಿದೆ. ಇನ್ನಷ್ಟು ಸಾಧನೆ ಮಾಡಬೇಕಿದ್ದ, ಚಂದನವನಕ್ಕೆ ಇನ್ನಷ್ಟು ಹಿರಿಮೆ ತರಬೇಕಿದ್ದ ನಟನೊಬ್ಬನ ಜೀವನ ಹೀಗೆ ದುರಂತದಲ್ಲಿ ಅಂತ್ಯವಾಗಿರುವುದು ಎಲ್ಲರಲ್ಲೂ ಅತೀವ ಬೇಸರ ಮೂಡಿಸಿದೆ. ಕೊವಿಡ್-19 ಸಂದರ್ಭದಲ್ಲಿ ಜನರ ನೋವಿಗೆ ಸ್ಪಂದಿಸುತ್ತಿದ್ದ, ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ ಇದ್ದ ವ್ಯಕ್ತಿಯ ಅಗಲುವಿಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.

ಸಂಚಾರಿ ವಿಜಯ್ ನಿಧನಕ್ಕೆ ರಾಜ್ಯದ ವಿವಿಧ ವಲಯಗಳ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ತಮ್ಮ ನೆನಪುಗಳನ್ನು, ಶ್ರದ್ಧಾಂಜಲಿಯನ್ನು ತಿಳಿಸಿದ್ದಾರೆ. ಸಮಾಜಮುಖಿ ಕೆಲಸದಲ್ಲಿ ವಿಜಯ್ ತೊಡಗಿಸಿಕೊಂಡಿದ್ದರು. ನೆರೆ, ಕೊವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ರು. ಉಸಿರು ತಂಡದಲ್ಲಿ ಸಂಚಾರಿ ವಿಜಯ್ ಕೆಲಸ ಮಾಡ್ತಿದ್ರು. ಅಂಗಾಂಗ ದಾನ ಮಾಡುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಅವರು ಇಲ್ಲ ಅನ್ನೋದಾದ್ರೆ ಇಡೀ ಸಮಾಜಕ್ಕೆ ದೊಡ್ಡ ನಷ್ಟ ಎಂದು ಸಾಹಿತಿ ಕವಿರಾಜ್​ ಹೇಳಿದ್ದಾರೆ.

ನಟ ಸಂಚಾರಿ ವಿಜಯ್ ಬಗೆಗೆ ಮನಸ್ಸಿಗೆ ದುಃಖವಾಗಿದೆ. ಅವರು ಕೊವಿಡ್ ಸಮಯದಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಅಂತಹ ನಟನನ್ನು ಕಳೆದುಕೊಂಡು ಮನಸ್ಸಿಗೆ ದುಃಖವಾಗಿದೆ. ನಿನ್ನೆ ಅವರ ಆರೋಗ್ಯಕ್ಕೆ ಅಷ್ಟೇನು ತೊಂದರೆಯಾಗಿಲ್ಲ ಸರಿ ಹೋಗ್ತಾರೆ ಎಂದು ಹೇಳುತ್ತಿದ್ದರು. ನಾವು ಸಹ ಅವರು ಗುಣಮುಖರಾಗಿ ಬರಲಿ ಎಂಬ ನಿರೀಕ್ಷೆಯಲ್ಲಿದ್ದೆವು ಎಂದು ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.

ಇಂದು ಬೆಳಗ್ಗಿನ ಪರಿಸ್ಥಿತಿ ವಿಚಾರ ತಿಳಿದು ಆತಂಕವಾಗಿದೆ. ಇದರಿಂದ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಮಟ್ಟದ ನಷ್ಟವಾಗಿದೆ. ನನಗೆ ಅವರ ಜೊತೆ ವೈಯಕ್ತಿಕವಾಗಿ ಒಡನಾಟ ಇರಲಿಲ್ಲ. ಭಗವಂತ ಅವರ ಕುಟುಂಬಕ್ಕೆ ನೋವನ್ನು ಭರಿಸೊ ಶಕ್ತಿಯನ್ನು ನೀಡಲಿ ಎಂದು ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಟ ಕಿಚ್ಚ ಸುದೀಪ್ ಈ ಮೊದಲೇ ಸಂಚಾರಿ ವಿಜಯ್ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದ್ದರು.

ಸಂಚಾರಿ ವಿಜಯ್ ನಿಧನವಾರ್ತೆಯಿಂದ ಬಹಳ ನೋವಾಗಿದೆ. ನಾವು ಒಬ್ಬ ಒಳ್ಳೆಯ ಮನುಷ್ಯ ಹಾಗೂ ಉತ್ತಮ ನಟನನ್ನು ಕಳೆದುಕೊಂಡಿದ್ದೇವೆ ಎಂದು ಶಿವರಾಜ್​ಕುಮಾರ್ ಟ್ವೀಟ್ ಮಾಡಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಧ್ರುವ ಸರ್ಜಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಿಮ್ಮ ಅಗಲುವಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಇದು ಹೃದಯವಿದ್ರಾವಕ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಹಿರಿಯ ನಟ ಜಗ್ಗೇಶ್, ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತಾ, ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ್ ನಾರಾಯಣ, ನಿರ್ದೇಶಕ ಮಂಸೋರೆ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಸಂಚಾರಿ ವಿಜಯ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: Sanchari Vijay Obituary: ವಿಜಯ್​ ಕುಮಾರ್​ ‘ಸಂಚಾರಿ’ ವಿಜಯ್​ ಆಗಿದ್ದು ಹೇಗೆ? ಇಲ್ಲಿದೆ ಅವರ ಲೈಫ್​ ಜರ್ನಿ

Sanchari Vijay Death: ನಟ ಸಂಚಾರಿ ವಿಜಯ್ ನಿಧನ; ಪ್ರತಿಭಾನ್ವಿತ ಕಲಾವಿದನ ದುರಂತ ಅಂತ್ಯ