ಟಾಲಿವುಡ್​ ಡ್ರಗ್ಸ್​ ಕೇಸ್​: ಇಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​

| Updated By: ಮದನ್​ ಕುಮಾರ್​

Updated on: Sep 03, 2021 | 2:57 PM

ಜಾರಿ ನಿರ್ದೇಶನಾಲಯ ಕಚೇರಿ ಒಳಗೆ ರಾಕುಲ್​ ಪ್ರೀತ್​ ಸಿಂಗ್​ ತೆರಳುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಅಕ್ರಮ ಹಣ ವರ್ಗಾವಣೆ ಮತ್ತು ಡ್ರಗ್ಸ್​ ಕೇಸ್​ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ.

ಟಾಲಿವುಡ್​ ಡ್ರಗ್ಸ್​ ಕೇಸ್​: ಇಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​
ರಾಕುಲ್​ ಪ್ರೀತ್​ ಸಿಂಗ್
Follow us on

ಖ್ಯಾತ ನಟಿ ರಾಕುಲ್​ ಪ್ರೀತ್​ ಸಿಂಗ್​ ಅವರು ಹೈದರಾಬಾದ್​ನ ಜಾರಿ ನಿರ್ದೇಶನಾಲಯ ಕಚೇರಿಗೆ ಶುಕ್ರವಾರ (ಸೆ.3) ತೆರಳಿದ್ದು, ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್​ ಜಾಲದ ಜೊತೆ ಟಾಲಿವುಡ್​ನ ಹಲವು ಸೆಲೆಬ್ರಿಟಿಗಳಿಗೆ ನಂಟು​ ಇದೆ ಎಂಬ ಅನುಮಾನ ವ್ಯಕ್ತವಾದ ಬೆನ್ನಲ್ಲೇ ಅಕ್ರಮ ಹಣ ವರ್ಗಾವಣೆ ಬಗ್ಗೆಯೂ ಸುಳಿವು ಸಿಕ್ಕಿತ್ತು. ಆ ಸಂಬಂಧ ಅನೇಕ ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ ನೀಡಿತ್ತು. ಅದರ ಅನ್ವಯ ರಾಕುಲ್ ಪ್ರೀತ್​ ಸಿಂಗ್​ ಅವರು ಇಂದು ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

ತೆಲುಗು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ವಿಚಾರಣೆಯ ಬಿಸಿ ತಟ್ಟುತ್ತಿದೆ. ರಾಣಾ ದಗ್ಗುಬಾಟಿ, ರವಿತೇಜ, ನಿರ್ದೇಶಕ ಪುರಿ ಜಗನ್ನಾಥ್​, ಚಾರ್ಮಿ ಕೌರ್​ ಮುಂತಾದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಜಾರಿ ನಿರ್ದೇಶನಾಲಯ ಕಚೇರಿ ಒಳಗೆ ರಾಕುಲ್​ ಪ್ರೀತ್​ ಸಿಂಗ್​ ತೆರಳುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ದಕ್ಷಿಣ ಭಾರತದ ಜೊತೆಗೆ ಬಾಲಿವುಡ್​ನಲ್ಲೂ ರಾಕುಲ್​ ಪ್ರೀತ್​ ಸಿಂಗ್​ ಅವರಿಗೆ ಸಖತ್ ಬೇಡಿಕೆ ಇದೆ. ಸದ್ಯ ಅವರ ಕೈಯಲ್ಲಿ 8ಕ್ಕೂ ಅಧಿಕ ಪ್ರಾಜೆಕ್ಟ್​ಗಳಿವೆ. ಈ ಸಂದರ್ಭದಲ್ಲಿ ಅವರಿಗೆ ಇಡಿ ತನಿಖೆಯ ತಲೆನೋವು ಶುರುವಾಗಿದೆ.

ಆ.31ರಂದು ಪುರಿ ಜಗನ್ನಾಥ್​ ಹಾಗೂ ಸೆ.2ರಂದು ಚಾರ್ಮಿ ಕೌರ್​ ಅವರಿಗೆ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. 2015ರಿಂದ 2017ರವರೆಗೆ ಚಾರ್ಮಿ ಬ್ಯಾಂಕ್​ ಖಾತೆಗಳಲ್ಲಿ ಆಗಿರುವ ಹಣದ ವರ್ಗಾವಣೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸೆ.8ರಂದು ರಾಣಾ ದಗ್ಗುಬಾಟಿ, ಸೆ.9ರಂದು ರವಿತೇಜ ಕೂಡ ವಿಚಾರಣೆ ಎದುರಿಸಬೇಕಿದೆ.

ಇದು 4 ವರ್ಷ ಹಿಂದಿನ ಪ್ರಕರಣ. 2017ರಲ್ಲಿ ದೊಡ್ಡ ಮಾದಕ ವಸ್ತು ಜಾಲ ಪತ್ತೆ ಆಗಿತ್ತು. ಅದರಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವುದು ಕೂಡ ಕಂಡುಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ 12 ಕೇಸ್​ಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಈಗ ಈ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗಿದೆ.

‘ಇವರೆಲ್ಲರನ್ನು ಆರೋಪಿಗಳು ಎಂದು ಹೇಳಲಾಗಿಲ್ಲ. ಅಕ್ರಮ ಹಣ ವರ್ಗಾವಣೆಯಲ್ಲಿ ಈ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೋ ಇಲ್ಲವೋ ಎಂದು ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಮಾಧ್ಯಮವೊಂದಕ್ಕೆ ಅಧಿಕಾರಿಗಳು ಕೆಲವೇ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದರು. ಈಗ ಒಬ್ಬೊಬ್ಬರನ್ನೇ ಕರೆದು ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:

ಕಾಂಡೋಮ್ ಟೆಸ್ಟರ್ ಪಾತ್ರದಲ್ಲಿ ರಾಕುಲ್​ ಪ್ರೀತ್​ ಸಿಂಗ್​; ಗಿಲ್ಲಿ ಬೆಡಗಿಗೆ ಸಿಕ್ಕಾಪಟ್ಟೆ ಬೋಲ್ಡ್​ ಅವತಾರ

ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ