
ರಾಮ್ ಚರಣ್ (Ram Charan) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಆದರೆ ಅವರು ಇಂದು ಏರಿರುವ ಸ್ಥಾನವನ್ನು ಗಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ಆಗಿದ್ದ ರಾಮ್ ಚರಣ್ ಮೇಲೆ ಭಾರಿ ನಿರೀಕ್ಷೆಗಳಿತ್ತು. ಆರಂಭದಲ್ಲಿ ರಾಜಮೌಳಿ ನಿರ್ದೇಶಿಸಿದ್ದ ‘ಮಗಧೀರ’ ಗೆದ್ದಿತಾದರೂ ಆ ನಂತರ ಬಂದ ಸಿನಿಮಾಗಳು ಸೋತು, ರಾಮ್ ಚರಣ್ ಟಾಲಿವುಡ್ನಿಂದ ಹೊರಗುಳಿಯುತ್ತಾರೆ ಎನ್ನಲಾಗಿತ್ತು. ಆದರೆ ಸತತ ಪರಿಶ್ರಮದಿಂದ ರಾಮ್ ಚರಣ್ ಸ್ಪರ್ಧೆಯಲ್ಲಿ ಉಳಿದವರು ಮಾತ್ರವಲ್ಲೇ ತಮ್ಮ ನಟನೆಯನ್ನು ತಿದ್ದಿಕೊಳ್ಳುತ್ತಾ ಇಂದು ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಆದರೆ ಒಂದು ಸಮಯದಲ್ಲಿ ರಾಮ್ ಚರಣ್ ಬಹಳ ಕುಗ್ಗಿಹೋಗಿದ್ದರಂತೆ. ಆಗ ಅವರಿಗೆ ನೆರವು ನೀಡಿದ್ದು ಈಗಿನ ಸ್ಟಾರ್ ನಿರ್ದೇಶಕ.
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಾಮ್ ಚರಣ್ ತೊಡಗಿದ್ದಾರೆ. ಸಿನಿಮಾದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟ ರಾಮ್ ಚರಣ್, ತಾವು ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಆ ಸಮಯದಲ್ಲಿ ತಮಗೆ ನೆರವು ನೀಡಿದ್ದು ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಎಂದು ರಾಮ್ ಚರಣ್ ಹೇಳಿಕೊಂಡಿದ್ದಾರೆ.
ರಾಮ್ ಚರಣ್, ಜೂ ಎನ್ಟಿಆರ್ ನಟಿಸಿ, ರಾಜಮೌಳಿ ನಿರ್ದೇಶಿಸಿರುವ ‘ಆರ್‌ಆರ್‌ಆರ್’ (RRR) ಸಿನಿಮಾದ ಚಿತ್ರೀಕರಣ ಪ್ರಾರಂಭವಾದ ಸಮಯದಲ್ಲಿಯೇ ಕೋವಿಡ್ ಲಾಕ್‌ಡೌನ್ ಘೋಷಣೆಯಾಯಿತು ಎಂಬುದನ್ನು ನೆನಪು ಮಾಡಿಕೊಂಡಿರುವ ರಾಮ್ ಚರಣ್, ಆ ಸಮಯದಲ್ಲಿ ಶೂಟಿಂಗ್ ಸಂಪೂರ್ಣವಾಗಿ ನಿಂತುಹೋಗಿತ್ತು ಮತ್ತು ಸಿನಿಮಾ ಯಾವಾಗ ಮುಗಿಯುತ್ತದೆ ಎಂಬ ಗೊಂದಲವಿತ್ತು. ಅಂತಹ ಪರಿಸ್ಥಿತಿಯಲ್ಲಿ ಮನೆಯಲ್ಲೇ ಖಾಲಿ ಕುಳಿತುಕೊಳ್ಳುವುದು ತಮಗೆ ತೀವ್ರ ಮಾನಸಿಕ ಆತಂಕ ಮತ್ತು ಒತ್ತಡವನ್ನು ಉಂಟುಮಾಡಿತ್ತು ಎಂದು ಚರಣ್ ತಿಳಿಸಿದ್ದಾರೆ.
ಇದನ್ನೂ ಓದಿ:ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ
‘ಲಾಕ್‌ಡೌನ್ ಸಮಯದಲ್ಲಿ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇತ್ತು. ಸಿನಿಮಾ ರಂಗದ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಆ ಸಮಯದಲ್ಲಿ ನಾನು ತೀವ್ರ ಮಾನಸಿಕ ಸಂಘರ್ಷಕ್ಕೆ ಒಳಗಾಗಿದ್ದೆ. ಆಗ ನಾನು ನಿರ್ದೇಶಕ ರಾಜಮೌಳಿ ಅವರಿಗೆ ಕರೆ ಮಾಡಿ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಆಗ ರಾಜಮೌಳಿ ಅವರು ನನಗೆ ಒಂದು ಅದ್ಭುತವಾದ ಸಲಹೆ ನೀಡಿದರು’ ಎಂದು ರಾಮ್ ಚರಣ್ ಹೇಳಿದ್ದಾರೆ.
ರಾಜಮೌಳಿ ಅವರ ಸಲಹೆಯನ್ನು ನೆನಪಿಸಿಕೊಂಡಿರುವ ರಾಮ್ ಚರಣ್, ‘ರಾಜಮೌಳಿ ಅವರು ನನಗೆ ಫೋನ್‌ನಲ್ಲಿ ಧೈರ್ಯ ತುಂಬಿದರು. ‘ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲದಿದ್ದಾಗ ಅದರ ಬಗ್ಗೆ ಯೋಚಿಸಿ ಸಮಯ ವ್ಯರ್ಥ ಮಾಡಬೇಡ. ಈ ಸಮಯವನ್ನು ನಿನ್ನ ದೇಹ ಮತ್ತು ಮನಸ್ಸನ್ನು ಹುರಿದುಂಬಿಸಲು ಬಳಸಿಕೊ. ನಿನಗೆ ಇಷ್ಟವಾದ ಕೆಲಸಗಳನ್ನು ಮಾಡು, ಪುಸ್ತಕಗಳನ್ನು ಓದು ಮತ್ತು ಮುಂದಿನ ದೊಡ್ಡ ಹೋರಾಟಕ್ಕೆ ಸಿದ್ಧನಾಗು’ ಎಂದು ಹೇಳಿದರು. ಅವರ ಆ ಮಾತುಗಳು ನನ್ನಲ್ಲಿ ಹೊಸ ಭರವಸೆ ಮೂಡಿಸಿದವು ಮತ್ತು ಆ ಮಾನಸಿಕ ಒತ್ತಡದಿಂದ ಹೊರಬರಲು ಸಹಾಯ ಮಾಡಿದವು’ ಎಂದು ತಿಳಿಸಿದ್ದಾರೆ.
ಲಾಕ್‌ಡೌನ್ ಬಳಿಕ ‘ಆರ್‌ಆರ್‌ಆರ್’ ಸಿನಿಮಾ ಮತ್ತೆ ಶುರುವಾಯ್ತು ಆ ನಂತರದ್ದು ಇತಿಹಾಸ. ರಾಮ್ ಚರಣ್ ಅನ್ನು ಟಾಲಿವುಡ್ ಸ್ಟಾರ್ ನಟನಿಂದ ಪ್ಯಾನ್ ಇಂಡಿಯಾ ಸ್ಟಾರ್ ನಟನನ್ನಾಗಿ ಮಾಡಿತು ಆ ಸಿನಿಮಾ. ರಾಮ್ ಚರಣ್ ಇದೀಗ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ