ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿ ಭಾರಿ ಹಿಟ್ ಆಗಿದೆ. ಕೇವಲ ನಾಲ್ಕೈದು ದಿನಗಳಲ್ಲಿಯೇ ಈ ಸಿನಿಮಾ 1000 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ತೆಲಂಗಾಣ ಮತ್ತು ಆಂಧ್ರ ಸರ್ಕಾರದಿಂದ ಟಿಕೆಟ್ ದರ ಹೆಚ್ಚಳ ಮತ್ತು ಬೆನಿಫಿಟ್ ಶೋ, ಫ್ಯಾನ್ಸ್ ಶೋಗಳನ್ನು ಪ್ರದರ್ಶಿಸಲು ಅವಕಾಶ ಪಡೆಯಲಾಗಿತ್ತು. ಈ ವಿಶೇಷ ಶೋಗಳಿಂದ ಭಾರಿ ಮೊತ್ತದ ಹಣ ಕಲೆಕ್ಷನ್ ಸಹ ಆಯ್ತು. ಆದರೆ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಘಟನೆಯಿಂದಾಗಿ ತೆಲಂಗಾಣದಲ್ಲಿ ಸರ್ಕಾರವು ವಿಶೇಷ ಶೋಗಳನ್ನು ರದ್ದು ಮಾಡಿದ್ದು ಇದರಿಂದ ಇದೀಗ ಬಿಡುಗಡೆಗೆ ಸಿದ್ಧವಾಗಿರುವ ರಾಮ್ ಚರಣ್ ಸಿನಿಮಾಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ.
‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿದ್ದ ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ ಒಬ್ಬ ಮಹಿಳೆ ನಿಧನ ಹೊಂದಿ ಬಾಲಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಯ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿತ್ತು ಸಹ. ಘಟನೆ ನಡೆದ ಬಳಿಕ ತೆಲಂಗಾಣದಲ್ಲಿ ಬೆನಿಫಿಟ್ ಶೋ ಸೇರಿದಂತೆ ವಿಶೇಷ ಶೋಗಳನ್ನು ರದ್ದು ಮಾಡಲಾಗಿತ್ತು. ಆದರೆ ಇದರಿಂದ ರಾಮ್ ಚರಣ್ ಸಿನಿಮಾಕ್ಕೆ ಸಮಸ್ಯೆ ಆಗುತ್ತಿದೆ.
ರಾಮ್ ಚರಣ್ ನಟಿಸಿ, ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನ ಮಾಡಿರುವ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ತೆಲಂಗಾಣದಲ್ಲಿ ವಿಶೇಷ ಶೋಗಳು ರದ್ದಾಗಿರುವ ಕಾರಣದಿಂದಾಗಿ ಸಿನಿಮಾಕ್ಕೆ ಸಮಸ್ಯೆ ಎದುರಾಗಿದೆ. ಆದರೆ ಸಿನಿಮಾದ ನಿರ್ಮಾಪಕ ದಿಲ್ ರಾಜು ಇದೆಲ್ಲ ದೊಡ್ಡ ಸಮಸ್ಯೆ ಅಲ್ಲ ಎಂಬಂತೆ ಮಾತನಾಡಿದ್ದಾರೆ.
ಇದನ್ನೂ ಓದಿ:ಸಿನಿಮಾ ಬಗ್ಗೆ ಅಪ್ಡೇಟ್ ಕೊಡಲು ಮುಂದಾದ ‘ಗೇಮ್ ಚೇಂಜರ್’ ತಂಡ
‘ಗೇಮ್ ಚೇಂಜರ್’ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಲಿದೆ. ಸಿನಿಮಾದ ನಿರ್ಮಾಪಕ ದಿಲ್ ರಾಜು ಹೇಳಿರುವಂತೆ, ಎಲ್ಲ ದೊಡ್ಡ ಸಿನಿಮಾಗಳ ರೀತಿಯಲ್ಲಿಯೇ ಎರಡೂ ತೆಲುಗು ರಾಜ್ಯಗಳಲ್ಲಿ ‘ಗೇಮ್ ಚೇಂಜರ್’ ಸಿನಿಮಾದ ವಿಶೇಷ ಪ್ರದರ್ಶನ ಆಯೋಜನೆಗೊಳ್ಳಲಿದೆ ಎಂದಿದ್ದಾರೆ. ಆ ಮೂಲಕ ತೆಲಂಗಾಣದಲ್ಲಿಯೂ ತಾವು ವಿಶೇಷ ಪ್ರದರ್ಶನ ಆಯೋಜನೆ ಮಾಡುವುದಾಗಿ ಹೇಳಿದ್ದಾರೆ.
‘ಗೇಮ್ ಚೇಂಜರ್’ ಸಿನಿಮಾ ಪೊಲಿಟಿಕಲ್ ಕತೆ ಹೊಂದಿದೆ. ರಾಮ್ ಚರಣ್ ಜೊತೆಗೆ ಈ ಸಿನಿಮಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿ. ಸುನಿಲ್, ಎಸ್ಜೆ ಸೂರ್ಯ ಮತ್ತು ಪ್ರಕಾಶ್ ರೈ ಅವರುಗಳು ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಗಮನ ಸೆಳೆಯುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ