ಅರೆಸ್ಟ್ ಮಾಡಲು ಬಂದ ಪೊಲೀಸರು ನನ್ನ ಜತೆ ಎಣ್ಣೆ ಹೊಡೆದರು: ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ ಅವರು ಒಂದು ವಿಲಕ್ಷಣ ಘಟನೆಯನ್ನು ಈಗ ಮೆಲುಕು ಹಾಕಿದ್ದಾರೆ. ಅರೆಸ್ಟ್ ಮಾಡಲು ಬಂದಿದ್ದ ಪೊಲೀಸರು ತಮ್ಮ ಜೊತೆ ಕುಳಿತು ಡ್ರಿಂಕ್ಸ್ ಮಾಡಿ ವಾಪಸ್ಸು ಹೋಗಿದ್ದರು ಎಂದು ಆರ್ಜಿವಿ ಹೇಳಿದ್ದಾರೆ. ಅಂದು ಏನೆಲ್ಲ ನಡೆಯಿತು ಎಂಬುದನ್ನು ರಾಮ್ ಗೋಪಾಲ್ ವರ್ಮಾ ವಿವರಿಸಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರದ್ದು ವಿಚಿತ್ರ ವ್ಯಕ್ತಿತ್ವ. ಹಲವು ಕಾರಣಗಳಿಂದ ಅವರು ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರು ಮಾಡುವ ಟ್ವೀಟ್ಗಳು ಆಗಾಗ ಸುದ್ದಿ ಆಗುತ್ತವೆ. ಟ್ವೀಟ್ ಕಾರಣದಿಂದ ಅವರ ಮೇಲೆ ಕೇಸ್ ದಾಖಲಾಗಿದ್ದು ಕೂಡ ಉಂಟು. ಆದರೆ ಯಾವುದಕ್ಕೂ ರಾಮ್ ಗೋಪಾಲ್ ವರ್ಮಾ (RGV) ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಒಮ್ಮೆ ಅವರನ್ನು ಪೊಲೀಸರು ಅರೆಸ್ಟ್ ಮಾಡಲು ಬಂದಿದ್ದರು. ಆದರೆ ಅರೆಸ್ಟ್ ಮಾಡುವ ಬದಲು ಎಣ್ಣೆ ಪಾರ್ಟಿ ಮಾಡಿದರು ಎಂದು ರಾಮ್ ಗೋಪಾಲ್ ವರ್ಮಾ (Ram Gopal Varma) ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
‘ನಾಲ್ಕು-ಐದು ವರ್ಷಗಳ ಹಿಂದೆ ನಾನು ಒಂದಷ್ಟು ಟ್ವೀಟ್ ಮಾಡಿದ್ದೆ. ಅದರ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ಮನಸ್ಸಿಗೆ ಬಂದಿದ್ದು ಪೋಸ್ಟ್ ಮಾಡಿದ್ದೆ. ಕೆಲವು ಗಂಟೆಗಳ ಬಳಿಕ ಮಹೇಶ್ ಭಟ್ ನನಗೆ ಕರೆ ಮಾಡಿದರು. ನಿಮ್ಮ ಟ್ವೀರ್ನಿಂದ ವಿವಾದ ಆಗಿದೆ. ಆದರೆ ಇದೇನೂ ಕಾನೂನಿಗೆ ವಿರುದ್ಧವಾದದ್ದಲ್ಲ ಅಂತ ಅವರು ಹೇಳಿದರು. ಅವರು ಏನು ಹೇಳುತ್ತಿದ್ದಾರೆ ಎಂಬುದೇ ನನಗೆ ತಿಳಿಯಲಿಲ್ಲ. ಯಾಕೆಂದರೆ ನಾನು ಏನು ಟ್ವೀಟ್ ಮಾಡಿದ್ದೆ ಎಂಬುದು ನನಗೆ ಮರೆತುಹೋಗಿತ್ತು’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಅಂದು ಅವರು ಮಾಡಿದ್ದ ಟ್ವೀಟ್ ಆಕ್ಷೇಪಾರ್ಹವಾಗಿದೆ ಎಂಬ ಕಾರಣಕ್ಕೆ 6-7 ಕೇಸ್ಗಳನ್ನು ಹಾಕಲಾಗಿತ್ತು. ಆದರೆ ಅವುಗಳೆಲ್ಲ ಅಂತ್ಯವಾಗಿದ್ದು ಮಾತ್ರ ಅನಿರೀಕ್ಷಿತ ರೀತಿಯಲ್ಲಿ. ಆದಿನ ಏನಾಗಿತು ಎಂಬುದನ್ನು ರಾಮ್ ಗೋಪಾಲ್ ವರ್ಮಾ ಅವರು ವಿವರಿಸಿದ್ದಾರೆ.
‘ಎಲ್ಲ ಕೇಸ್ಗಳನ್ನು ಒಟ್ಟಿಗೆ ನಿಭಾಯಿಸಲು ನಾವು ಪ್ರಯತ್ನಿಸುತ್ತಿದ್ದೆವು. ಪೊಲೀಸರು ನನ್ನನ್ನು ಅರೆಸ್ಟ್ ಮಾಡಲು ಬರುವುದರೊಳಗೆ ಕೋರ್ಟ್ನಲ್ಲಿ ನನ್ನ ಪರವಾಗಿ ತೀರ್ಪು ಬಂದಿತ್ತು. ಹಾಗಾಗಿ ಏನು ಮಾಡುವುದು ಅಂತ ಪೊಲೀಸರಿಗೆ ತಿಳಿಯಲಿಲ್ಲ. ಎಲ್ಲರೂ ನನ್ನ ಜೊತೆ ಕುಳಿತು ಡ್ರಿಂಕ್ಸ್ ಮಾಡಿದರು. ಬಳಿಕ ವಾಪಸ್ ಹೋದರು’ ಎಂದು ಆ ಘಟನೆಯನ್ನು ರಾಮ್ ಗೋಪಾಲ್ ವರ್ಮಾ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಗೇಮ್ ಚೇಂಜರ್ ಬಾಕ್ಸ್ ಆಫೀಸ್ ಲೆಕ್ಕ ಸುಳ್ಳು’: ಹಿಗ್ಗಾಮುಗ್ಗ ಜಾಡಿಸಿದ ರಾಮ್ ಗೋಪಾಲ್ ವರ್ಮಾ
ಪದೇಪದೇ ಮನಸ್ಸಿಗೆ ಬಂದಿದ್ದು ಟ್ವೀಟ್ ಮಾಡುತ್ತಾರೆ ಎಂಬ ಕಾರಣದಿಂದಲೇ ಈಗೀಗ ರಾಮ್ ಗೋಪಾಲ್ ವರ್ಮಾ ಅವರನ್ನು ಅನೇಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸೋಶಿಯಲ್ ಮೀಡಿಯಾ ಪೋಸ್ಟ್ ಮಾತ್ರವಲ್ಲದೇ ಕೆಲವು ಸಂದರ್ಶನಗಳ ಮೂಲಕವೇ ರಾಮ್ ಗೋಪಾಲ್ ವರ್ಮಾ ಅವರು ವಿವಾದ ಮಾಡಿಕೊಂಡ ಉದಾಹರಣೆಗಳು ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.