Ram Laxman Death: ಹೃದಯಾಘಾತದಿಂದ ರಾಮ್​ ಲಕ್ಷಣ್​ ನಿಧನ; ‘ಹಮ್​ ಆಪ್ಕೆ ಹೈ ಕೌನ್​’ ಚಿತ್ರದ ಸಂಗೀತ ನಿರ್ದೇಶಕ ಇನ್ನಿಲ್ಲ

ಕೆಲವೇ ದಿನಗಳ ಹಿಂದೆ ರಾಮ್​ ಲಕ್ಷಣ್ ಅವರು ಕೊವಿಡ್​ ಲಸಿಕೆಯ ಎರಡನೇ ಡೋಸ್​ ಪಡೆದುಕೊಂಡಿದ್ದರು. ನಂತರ ಅವರು ಬಹಳ ಸುಸ್ತಾದಂತೆ ಕಂಡರು. ಅದಕ್ಕಾಗಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಎಂದು ಅವರ ಪುತ್ರ ತಿಳಿಸಿದ್ದಾರೆ.

Ram Laxman Death: ಹೃದಯಾಘಾತದಿಂದ ರಾಮ್​ ಲಕ್ಷಣ್​ ನಿಧನ; ‘ಹಮ್​ ಆಪ್ಕೆ ಹೈ ಕೌನ್​’ ಚಿತ್ರದ ಸಂಗೀತ ನಿರ್ದೇಶಕ ಇನ್ನಿಲ್ಲ
ಸಂಗೀತ ನಿರ್ದೇಶಕ ರಾಮ್​ಲಕ್ಷ್ಮಣ್​ (ವಿಜಯ್​ ಪಾಟೀಲ್​)
Edited By:

Updated on: May 22, 2021 | 3:34 PM

ಬಾಲಿವುಡ್​ನಲ್ಲಿ ಹಲವು ಹಿಟ್​ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಜನಪ್ರಿಯರಾಗಿದ್ದ ರಾಮ್​ ಲಕ್ಷ್ಮಣ್​​​ ಅವರು ಹೃದಯಾಘಾತದಿಂದ​ ನಿಧನರಾಗಿದ್ದಾರೆ. ಅವರ ಮೂಲ ಹೆಸರು ವಿಜಯ್​ ಪಾಟೀಲ್. ಹಮ್​ ಆಪ್ಕೆ ಹೈ ಕೌನ್​, ಮೈನೆ ಪ್ಯಾರ್​ ಕಿಯಾ ಮುಂತಾದ ಸೂಪರ್​ ಹಿಟ್​ ಸಿನಿಮಾಗಳು ಸೇರಿ 75ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದರು. 

ರಾಮ್​ಲಕ್ಷ್ಮಣ್​ ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿಯನ್ನು ಪುತ್ರ ಅಮರ್​ ಖಚಿತಪಡಿಸಿದ್ದಾರೆ. ‘ಶನಿವಾರ ಮಧ್ಯ ರಾತ್ರಿ 2 ಗಂಟೆಗೆ ನಮ್ಮ ತಂದೆ ನಿಧನರಾದರು. ಅವರಿಗೆ ಹೃದಯಾಘಾತವಾಗಿತ್ತು. ಕೆಲವೇ ದಿನಗಳ ಹಿಂದೆ ಅವರು ಕೊವಿಡ್​ ಲಸಿಕೆಯ ಎರಡನೇ ಡೋಸ್​ ಪಡೆದುಕೊಂಡಿದ್ದರು. ನಂತರ ಅವರು ಬಹಳ ಸುಸ್ತಾದಂತೆ ಕಂಡರು. ಅದಕ್ಕಾಗಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು’ ಎಂದು ಮಾಧ್ಯಮಗಳಿಗೆ ಅಮರ್​ ಪ್ರತಿಕ್ರಿಯೆ ನೋಡಿದ್ದಾರೆ.

ರಾಮ್​ ಲಕ್ಷ್ಮಣ್​ ನಿಧನಕ್ಕೆ ಗಾಯಕಿ ಲತಾ ಮಂಗೇಶ್ಕರ್​ ಸಂತಾಪ ಸೂಚಿಸಿದ್ದಾರೆ. ‘ಖ್ಯಾತ ಸಂಗೀತ ನಿರ್ದೇಶಕ, ಅಪ್ರತಿಮ ಪ್ರತಿಭಾವಂತ ರಾಮ್​ ಲಕ್ಷ್ಮಣ್​ (ವಿಜಯ್​ ಪಾಟೀಲ್​) ನಿಧನರಾದರು ಎಂಬುದು ಈಗತಾನೆ ತಿಳಿಯಿತು. ಈ ಸುದ್ದಿ ಕೇಳಿ ತುಂಬ ನೋವಾಗಿದೆ. ಅವರು ತುಂಬ ಒಳ್ಳೆಯ ವ್ಯಕ್ತಿ ಆಗಿದ್ದರು. ನಾನು ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ ಅನೇಕ ಹಾಡುಗಳು ತುಂಬ ಜನಪ್ರಿಯ ಆಗಿದ್ದವು. ಅವರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ’ ಎಂದು ಲತಾ ಮಂಗೇಶ್ಕರ್​ ಟ್ವೀಟ್​ ಮಾಡಿದ್ದಾರೆ.

ಹಿಂದಿ, ಮರಾಠಿ, ಭೋಜಪುರಿ ಸೇರಿದಂತೆ 75ಕ್ಕೂ ಅಧಿಕ ಸಿನಿಮಾಗಳಿಗೆ ರಾಮ್​ ಲಕ್ಷ್ಮಣ್​ ಸಂಗೀತ ನೀಡಿದ್ದರು. ಚಿತ್ರರಂಗಕ್ಕೆ ಎಂಟ್ರಿ ನೀಡಿದಾಗ ವಿಜಯ್​ ಪಾಟೀಲ್​ ಎಂಬ ತಮ್ಮ ಮೂಲ ಹೆಸರನ್ನು ಲಕ್ಷಣ್​ ಎಂದು ಅವರು ಬದಲಾಯಿಸಿಕೊಂಡಿದ್ದರು. ಅವರ ಮ್ಯೂಸಿಕ್​ ಪಾರ್ಟ್ನರ್​ ಆಗಿದ್ದ ಸುರೇಂದ್ರ ಅವರು ರಾಮ್​ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಇಬ್ಬರೂ ಸೇರಿ ರಾಮ್ ​ಲಕ್ಷ್ಮಣ್​ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. ಆದರೆ 1977ರಲ್ಲಿ ರಾಮ್​ (ಸುರೇಂದ್ರ) ನಿಧನರಾದರು. ಆ ಬಳಿಕವೂ ವಿಜಯ್​ ಪಾಟೀಲ್​ ಅವರು ತಮ್ಮ ಹೆಸರನ್ನು ರಾಮ್​ ಲಕ್ಷ್ಮಣ್​ ಎಂದೇ ಮುಂದುವರಿಸಿದರು.

ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ರಾಜಶ್ರೀ ಪ್ರೊಡಕ್ಷನ್ಸ್​ ಕೂಡ ರಾಮ್​ ಲಕ್ಷ್ಮಣ್​ ನಿಧನಕ್ಕೆ ಕಂಬನಿ ಮಿಡಿದಿದೆ. ‘ಚಿತ್ರರಂಗಕ್ಕೆ ನೀವು ನೀಡಿದ ಕೊಡುಗೆಯನ್ನು ರಾಜಶ್ರೀ ಪ್ರೊಡಕ್ಷನ್ಸ್​ ಸದಾ ಸ್ಮರಿಸುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಂಸ್ಥೆ ಹೇಳಿದೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ರಾಮ್​ಲಕ್ಷ್ಮಣ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:

BA Raju: ಹೃದಯಾಘಾತದಿಂದ ನಿರ್ಮಾಪಕ, ಪ್ರಚಾರಕ ಬಿಎ ರಾಜು ನಿಧನ; ಮಹೇಶ್​ ಬಾಬು ಸಂತಾಪ

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us