
‘ರಾಮಾಯಣ’ ಸಿನಿಮಾ ನಾಳೆ (ನವೆಂಬರ್ 05) ರಿಲೀಸ್ ಆಗಲಿದೆ. ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಹಲವಾರು ಸ್ಟಾರ್ ನಟ, ನಟಿಯರು ನಟನೆ ಮಾಡಿರುವ ಸಿನಿಮಾ ಭಾರತದ ಈ ವರೆಗಿನ ಅತಿದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ ಎಂದು ಮುಂಚಿತವಾಗಿಯೇ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾಹಿತಿ ನೀಡಿದ್ದರು. ಮೊದಲ ಭಾಗ ಈ ವರ್ಷ ದೀಪಾವಳಿಗೆ ಅಂದರೆ ನವೆಂಬರ್ 5ಕ್ಕೆ ರಿಲೀಸ್ ಆದರೆ, ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಅಂದರೆ 2027ರ ನವೆಂಬರ್ನಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಎರಡನೇ ಭಾಗದ ರಿಲೀಸ್ ತಡವಾಗಲಿದೆ.
‘ರಾಮಾಯಣ: ಭಾಗ 2’ ಚಿತ್ರದ ಬಿಡುಗಡೆಯು 2027ರಿಂದ 2028ಕ್ಕೆ ಮುಂದೂಡಲ್ಪಟ್ಟಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಖಚಿತಪಡಿಸಿದ್ದಾರೆ. ‘ರಾಮಾಯಣ: ಭಾಗ 2’ ಚಿತ್ರವು 2028ರಲ್ಲಿ ತೆರೆಗೆ ಬರಲಿದೆ. ಇದು ಚಿತ್ರತಂಡಕ್ಕೆ ಸಿನಿಮಾವನ್ನು ಪರಿಪೂರ್ಣವಾಗಿ ಪೂರ್ಣಗೊಳಿಸಲು ಮತ್ತು ಅದ್ಧೂರಿ ಕ್ಲೈಮ್ಯಾಕ್ಸ್ ಅನ್ನು ಒದಗಿಸಲು ಹೆಚ್ಚಿನ ಸಮಯದ ಅವಶ್ಯಕತೆ ಇದೆ ಎಂದಿದ್ದಾರೆ.
ಅದು ಮಾತ್ರವೇ ಅಲ್ಲದೆ ಸಿನಿಮಾದ ಮೂರನೇ ಭಾಗವನ್ನು ಸಹ ಮಾಡುವ ಯೋಜನೆಯನ್ನು ಹೊಂದಿರುವುದಾಗಿ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಆದರೆ ಸಿನಿಮಾದ ಮೊದಲ ಭಾಗಕ್ಕೆ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆಯನ್ನು ಆಧರಿಸಿ, ಈ ಸಿನಿಮಾವನ್ನು ಮೂರು ಭಾಗಗಳಿಗೆ ಮಾಡುವುದೇ ಅಥವಾ ಕೇವಲ ಎರಡನೇ ಭಾಗಗಳಿಗೆ ಸೀಮಿತಗೊಳಿಸುವುದೇ ಎಂಬುದನ್ನು ನಮಿತ್ ಮಲ್ಹೋತ್ರಾ ನಿರ್ಧಾರ ಮಾಡಲಿದ್ದಾರೆ.
ಇದನ್ನೂ ಓದಿ:‘ತಲೆಕೆಡಿಸಿಕೊಳ್ಳಲ್ಲ’; ‘ರಾಮಾಯಣ’ ವಿಮರ್ಶೆ ಮತ್ತು ಟ್ರೋಲಿಂಗ್‌ಗೆ ರಣಬೀರ್ ಕಪೂರ್ ಉತ್ತರ
‘ರಾಮಾಯಣ’ ಸಿನಿಮಾಕ್ಕೆ ಭಾರಿ ಅದ್ಧೂರಿ ವಿಎಫ್ಎಕ್ಸ್ ಮಾಡಲಾಗಿದ್ದು, ಈ ವಿಎಫ್ಎಕ್ಸ್ ಮತ್ತು ಇತರೆ ತಾಂತ್ರಿಕ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಎರಡನೇ ಭಾಗದ ಕೆಲವು ಭಾಗಗಳ ಚಿತ್ರೀಕರಣವನ್ನಷ್ಟೆ ಈಗ ಮಾಡಲಾಗಿದ್ದು, ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಅಷ್ಟೂ ಕೆಲಸ ಕೇವಲ ಒಂದು ವರ್ಷದಲ್ಲಿ ಮುಗಿಯುವುದಿಲ್ಲ ಹಾಗಾಗಿ ‘ರಾಮಾಯಣ ಭಾಗ 2’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಅಲ್ಲದೆ ‘ರಾಮಾಯಣ 3’ ಸಿನಿಮಾ ನಿರ್ಮಾಣ ಮಾಡಲು ಸಹ ಯೋಜನೆ ಸಿದ್ಧವಾಗಿದ್ದು, ರಣ್ಬೀರ್ ಕಪೂರ್ ಸಹ ಇತ್ತೀಚೆಗೆ ಬಾಯಿತಪ್ಪಿ ಆ ವಿಷಯವನ್ನು ಹೇಳಿದ್ದರು.
‘ರಾಮಾಯಣ’ ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ವೈರಲ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮಾತ್ರವೇ ಅಲ್ಲದೆ ಇಂಗ್ಲೀಷ್ ಹಾಗೂ ಇನ್ನೂ ಹಲವು ವಿದೇಶಿ ಭಾಷೆಗಳಲ್ಲಿಯೂ ಸಹ ಈ ಸಿನಿಮಾ ವೀಕ್ಷಣೆಗೆ ಲಭ್ಯವಿರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ