
ಯಶ್ (Yash) ಅದ್ಭುತವಾದ ನಟ. ಮೃದು ಸ್ವಭಾವದ ಲವ್ವರ್ ಬಾಯ್, ಹಳ್ಳಿಯ ತರ್ಲೆ ತುಂಟ ಹುಡುಗ, ಕಾಲೇಜು ಪ್ಲೇ ಬಾಯ್, ಕ್ರೌರ್ಯದ ಪರಮಾವಧಿ, ಕ್ರಾಂತಿಕಾರಿ ಯುವಕ, ತಾಯಿಯ ಪ್ರೀತಿಗೆ ಹಾತೊರೆಯುವ ಭಾವುಕ ಜೀವಿ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಾವುದೇ ಪಾತ್ರವಾದರೂ ಅದಕ್ಕೆ ತಮ್ಮದೇ ಆದ ಭಿನ್ನ ಟಚ್ ನೀಡುವ ಮೂಲಕ ಬೇರೆ ಯಾರೂ ಈ ಪಾತ್ರ ಮಾಡಲಾರರು ಎಂಬಂತೆ ಆ ಪಾತ್ರವನ್ನು ನಿರ್ವಹಿಸಿಬಿಡುತ್ತಾರೆ. ಇದೀಗ ‘ರಾಮಾಯಣ’ ಸಿನಿಮಾನಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವ ಯಶ್, ಮತ್ತೊಮ್ಮೆ ಅಂಥಹುದೇ ಮ್ಯಾಜಿಕ್ ಅನ್ನು ತೆರೆಯ ಮೇಲೆ ಮಾಡಿದ್ದಾರಂತೆ.
ಯಶ್ ಮತ್ತು ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರುಗಳು ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಲಾಸ್ ಏಂಜಲ್ಸ್ನಲ್ಲಿ ನಡೆದ ಸಿನಿಮಾಕಾನ್ 2026ನಲ್ಲಿ ಭಾಗಿ ಆಗಿದ್ದರು. ಜಂಟಿಯಾಗಿ ಸಂದರ್ಶನಗಳನ್ನು ಸಹ ನೀಡಿದ್ದಾರೆ. ಈ ವೇಳೆ ನಟ ಯಶ್ ಮತ್ತು ನಮಿತ್ ಮಲ್ಹೋತ್ರಾ ಅವರುಗಳು ‘ರಾಮಾಯಣ’ ಸಿನಿಮಾದ ಬಗ್ಗೆ ಸಾಕಷ್ಟು ಮಾತನಾಡಿದ್ದು, ಸಂದರ್ಶನದಲ್ಲಿ ನಟ ಯಶ್ ಅವರ ನಟನಾ ಪ್ರತಿಭೆಯನ್ನು, ಅವರು ರಾವಣನ ಪಾತ್ರಕ್ಕೆ ಜೀವ ತುಂಬಿರುವ ರೀತಿಯಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೊಂಡಾಡಿದ್ದಾರೆ.
ಸಂದರ್ಶನದಲ್ಲಿ ಯಶ್, ರಾವಣನ ಪಾತ್ರದ ಬಗ್ಗೆ ಕಿರಿದಾಗಿ ಹೇಳಿದರು. ‘ಒಬ್ಬ ಅಸಾಧಾರಣ ವ್ಯಕ್ತಿ, ತನ್ನ ನಿರ್ಧಾರದಲ್ಲಿ ಎಡವುವುದರಿಂದ ಅನುಭವಿಸುವ ಫಲ, ನಾವದನ್ನು ಕರ್ಮ ಎನ್ನುತ್ತೇವೆ. ಅಹಂಕಾರಕ್ಕೂ ಮತ್ತು ಆತ್ಮವಿಶ್ವಾಸಕ್ಕೂ ತೆಳುವಾದ ಗೆರೆ ಇರುತ್ತದೆ. ಅದುವೇ ರಾವಣನ ಪಾತ್ರ’ ಎಂದು ಸರಳವಾಗಿ ಹೇಳಿದರು.
ಇದನ್ನೂ ಓದಿ:ರಣ್ಬೀರ್ ಕಪೂರ್ ಜೊತೆ ನಟನೆ, ಯಶ್ ಹೇಳಿದ್ದೇನು?
ಕೂಡಲೇ ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, ‘ಯಶ್ ಅವರು ತಮ್ಮ ನಟನೆ ಬಗ್ಗೆ, ತಮ್ಮ ಪ್ರದರ್ಶನದ ಬಗ್ಗೆ ಹೆಚ್ಚು ಹೇಳುವುದಿಲ್ಲ. ಆದರೆ ಅವರು ಅತ್ಯದ್ಭುತವಾದ ಕೆಲಸವನ್ನು ಸಿನಿಮಾನಲ್ಲಿ ಮಾಡಿದ್ದಾರೆ. ರಾವಣನ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಅವರು ಆ ಪಾತ್ರವನ್ನು ನಿರ್ವಹಿಸಿರುವ ರೀತಿ ಅದ್ಭುತವಾಗಿದೆ. ಅವರು ತಂದಿರುವ ಎನರ್ಜಿ ತೆರೆಯ ಮೇಲೆ ಕಾಣಿಸುತ್ತದೆ. ಅವರ ಪ್ರದರ್ಶನವನ್ನು ಜನ ಚಿತ್ರಮಂದಿರದಲ್ಲಿ ನೋಡಬೇಕು ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ರಾಮನಾಗಿ ರಣ್ಬೀರ್ ಕಪೂರ್, ರಾವಣನಾಗಿ ಯಶ್ ಇಬ್ಬರೂ ಅದ್ಭುತವಾಗಿ ನಟಿಸಿದ್ದಾರೆ ಇಬ್ಬರೂ ಮ್ಯಾಜಿಕ್ ಅನ್ನೇ ಮಾಡಿದ್ದಾರೆ’ ಎಂದಿದ್ದಾರೆ ನಮಿತ್.
ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾವಣನಾಗಿ ಯಶ್ ನಟಿಸಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದು, ಅವರ ಜೊತೆಗೆ ಯಶ್ ಅವರು ಸಹ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ